ರಾಜ್ಯದಾದ್ಯಂತ ಕಳೆದೆರಡು ದಿನಗಳಿಂದ ಜೋರಾಗಿ ಮಳೆ ಸುರಿಯುತ್ತಿದ್ದು, ಕರಾವಳಿ ಭಾಗಗಳಲ್ಲಿ ಜೂನ್ 18ರ ವರೆಗೂ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಈಗಾಗಲೇ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಮೀನುಗಾರಿಕೆಗೆ ನಿಷೇಧ ಹೇರಲಾಗಿದೆ.
ಕರ್ನಾಟಕದ ಕೆಲವು ಭಾಗಗಳಲ್ಲಿ ಕಳೆದ ನಾಲ್ಕೈದು ದಿನಗಳಿಂದ ಮುಂಗಾರು ಬಿರುಸಾಗಿದೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಮಲೆನಾಡು ಭಾಗದಲ್ಲಿ ಜೋರಾಗಿ ಸುರಿದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಕೆಯ್ಯೂರು ಗ್ರಾಮದ ಉದ್ದೋಳೆಯಲ್ಲಿ ಮಳೆ ಸುರಿಯುತ್ತಿರುವಾಗಲೇ ಪಂಪ್ ಸ್ವಿಚ್ ಆಫ್ ಮಾಡಲು ಹೋದ ರಮೇಶ ಗೌಡ (42) ಎಂಬುವರು ವಿದ್ಯುತ್ ಆಘಾತದಿಂದ ಮೃತಪಟ್ಟಿದ್ದಾರೆ. ಮಂಗಳೂರು ತಾಲ್ಲೂಕಿನ ಕೊಣಾಜೆ ಗ್ರಾಮದ ಪಟ್ಟೋರಿ ಹಾಗೂ ಪುಳಿಂಚಾಡಿಯಲ್ಲಿ ಪಕ್ಕದ ಮನೆಯ ಆವರಣಗೋಡೆ ಕುಸಿದು ಬಿದ್ದು ಎರಡು ಮನೆಗಳಿಗೆ ಹಾನಿಯಾಗಿದೆ. ಅಂಬ್ಲಮೊಗರಿನ ತಿಲಕನಗರ ಎಂಬಲ್ಲಿ ಪಕ್ಕದ ಮನೆಯ ಆವರಣಗೋಡೆ ಬಿದ್ದಿದೆ.
ಉಡುಪಿಯಲ್ಲಿ ಮೂರು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಬಾಳೆಹೊನ್ನೂರು, ಎನ್.ಆರ್.ಪುರ ಭಾಗದಲ್ಲಿ ಧಾರಾಕಾರವಾಗಿ ಸುರಿದಿದೆ. ದಾವಣಗೆರೆ, ಚಿತ್ರದುರ್ಗ, ಧಾರವಾಡ, ಬೆಳಗಾವಿ, ಬಳ್ಳಾರಿ ಜಿಲ್ಲೆಗಳಲ್ಲಿ ಮಳೆಯಾಗಿದೆ.