News

ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ವಿರೋಧಿಸಿ ಸೋಮವಾರ ಕರ್ನಾಟಕ ಬಂದ್

27 September, 2020 8:28 AM IST By:
ಸಾಂದರ್ಭಿಕ ಚಿತ್ರ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಮತ್ತು ಕಾರ್ಮಿಕರ ವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಆರೋಪಿಸಿ ವಿವಿಧ ಸಂಘಟನೆಗಳು ಕರೆ ನೀಡಿರುವ ಸೆ.28ರ ರಾಜ್ಯ ಬಂದ್‌ಗೆ ಹಲವು ಸಂಘಟನೆಗಳು, ರಾಜಕೀಯ ಪಕ್ಷಗಳು ಬೆಂಬಲ ನೀಡಿವೆ.

ರೈತ ಸಂಘಟನೆಗಳು ಮತ್ತು ವಿಪಕ್ಷಗಳ ವಿರೋಧದ ನಡುವೆಯೇ ರಾಜ್ಯ ಸರಕಾರವು ಭೂಸುಧಾರಣೆ ತಿದ್ದುಪಡಿ ಕಾಯ್ದೆ ಮತ್ತು ಎಪಿಎಂಸಿ ತಿದ್ದುಪಡಿ ಕಾಯ್ದೆಗಳನ್ನು ಅಂಗೀಕರಿಸಿದ್ದರಿಂದ ಈ  ಕಾಯ್ದೆಗಳನ್ನು ವಿರೋಧಿಸಿ ಈಗಾಗಲೇ ಪ್ರತಿಭಟನೆ ವಿರೋಧ ವ್ಯಕ್ತವಾಗುತ್ತಿದೆ. ಸೋಮವಾರ ರಾಜ್ಯ ಬಂದ್‌ಗೆ ಕರೆ ನೀಡಿವೆ

ಕಳೆದ ಐಧಾರು ದಿನಗಳಿಂದ ನಡೆಯುತ್ತಿರುವ ನಾಡಿನ ರೈತರ ವಿರೋಧ ಹಾಗೂ ಹೋರಾಟ ಲೆಕ್ಕಿಸದೆ ರಾಜ್ಯ ಸರ್ಕಾರ ಭೂ ಸುಧಾರಣಾ ತಿದ್ದುಪಡಿ ಮತ್ತು ಎಪಿಎಂಸಿ ತಿದ್ದುಪಡಿ ಮಸೂದೆಗಳಿಗೆ ಶಾಸನಸಭೆಯ ಅನುಮೋದನೆ ಪಡೆದಿದ್ದರಿಂದ  ವಿವಿಧ ಸಂಘಟನೆಗಳು ಕರ್ನಾಟಕ ಬಂದ್ ನಂತರ ಈ ಹೋರಾಟವನ್ನು ರಾಜ್ಯದ ಪ್ರತಿ ಹಳ್ಳಿಗೆ ಒಯ್ಯಲು ತೀರ್ಮಾನಿಸಿದೆ.

ಭೂ ಸುಧಾರಣೆ ಕಾಯ್ದೆ ವಿರೋಧಿಸಿ ‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜತೆ ಸೆ.25ರಂದು ನಡೆದ ಮಾತುಕತೆ ವಿಫಲವಾಗಿದ್ದು, ಸೆ.28ಕ್ಕೆ ಕರೆ ನೀಡಲಾಗಿರುವ ಬಂದ್‌ ಮತ್ತಷ್ಟು ತೀವ್ರವಾಗಿ ನಡೆಯಲಿದೆ. ಅಲ್ಲದೆ, ಮುಖ್ಯಮಂತ್ರಿಯವರಿಗೆ ಕಂಡ ಕಂಡಲ್ಲಿ ಘೇರಾವ್ ಹಾಕಲಾಗುವುದು ಎಂದು ರೈತ, ದಲಿತ ಹಾಗೂ ಕಾರ್ಮಿಕರ ಐಕ್ಯ ಹೋರಾಟ ಸಮಿತಿ ಹೇಳಿದೆ.

ರಾಜ್ಯದ ರಸ್ತೆ ಸಾರಿಗೆ ನಿಗಮಗಳ ನೌಕರರ ಫೆಡರೇಷನ್‌ (ಸಿಐಟಿಯು) ಬಂದ್‌ಗೆ ಸಂಪೂರ್ಣ ಬೆಂಬಲ ಘೋಷಿಸಿದ್ದು, ಮುಷ್ಕರದಲ್ಲಿ ಪಾಲ್ಗೊಳ್ಳುವಂತೆ ತಮ್ಮ ಸದಸ್ಯರಿಗೆ ಕರೆ ನೀಡಿದೆ.

‘ರೈತರ–ಕಾರ್ಮಿಕರ ಹೋರಾಟಕ್ಕೆ ನೈತಿಕ ಬೆಂಬಲ ನೀಡಿದ್ದೇವೆ. ಹೋಟೆಲ್‌ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ’ ಎಂದು ಹೋಟೆಲ್ ಮಾಲೀಕರ ಸಂಘ ಹೇಳಿದೆ. 

ಹಲವು ಸಂಘಟನೆಗಳ ಬೆಂಬಲ:

ಬಂದ್‌ಗೆ ಕಬಿನಿ ರೈತ ಹಿತರಕ್ಷಣ ಸಮಿತಿ, ರಾಜ್ಯ ಕೃಷಿ ಪಂಪ್‌ಸೆಟ್‌ ಬಳಕೆದಾರರ ಸಂಘ, ಮಹಾದಾಯಿ ನೀರು ಹೋರಾಟ ಸಮಿತಿ, ಕರ್ನಾಟಕ ರಕ್ಷಣ ವೇದಿಕೆ ಸಹಿತ ಹಲವು ರೈತ ಸಂಘಟನೆಗಳು ಮತ್ತು ಕನ್ನಡಪರ ಸಂಘಟನೆಗಳು ಬೆಂಬಲ ನೀಡಿವೆ.

ಏನೆಲ್ಲ ಇರುತ್ತವೆ?, ಪ್ರವಾಸಿ ವಾಹನಗಳು, ಕೆಎಸ್ಸಾರ್ಟಿಸಿ ಬಸ್‌ ಸಂಚಾರ, ಮೆಟ್ರೋ. ಆಸ್ಪತ್ರೆ, ಔಷಧ ಮಳಿಗೆ, ಹಣ್ಣು , ತರಕಾರಿ, ಹಾಲು ದಿನಪತ್ರಿಕೆ, ಹೊಟೇಲ್‌, ಲಾರಿಗಳ ಸಂಚಾರ, ಟ್ಯಾಕ್ಸಿ, ಮೆಟ್ರೋ, ರೈಲು ಸಂಚಾರ ಇರಲಿದೆ.

ಯಾವುದು ಇಲ್ಲ?

ಎಪಿಎಂಸಿ ಮಾರುಕಟ್ಟೆ, ಸಿಟಿ ಮಾರುಕಟ್ಟೆ, ರಸ್ತೆ ಬದಿ ವ್ಯಾಪಾರ, ಓಲಾ, ಉಬರ್‌ ಇರುವುದಿಲ್ಲ. ಕೆಎಸ್.ಆರ್.ಟಿಸಿ, ಬಿಎಂಟಿಸಿ ಬಸ್ ಸೇವೆ ಇರಲಿದೆ ಎಂದು ಸರ್ಕಾರ ಹೇಳಿದೆ. ಆದರೆ, ಈ ನಿಗಮಗಳ ನೌಕರರ ಸಂಘ ಬಂದ್ಗೆ ಬೆಂಬಲ ವ್ಯಕ್ತಪಡಿಸಿರುವುದರಿಂದ ವ್ಯತ್ಯಯವಾಗುವ ಸಾಧ್ಯತೆಯಿದೆ.