ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಪ್ರಧಾನಿ ನರೇಂದ್ರ ಮೋದಿ ಅವರು ಸೈನಿಕರೊಂದಿಗೆ ದೀಪಾವಳಿ ಆಚರಿಸಿ ಸಂಭ್ರಮಿಸಿದ್ದಾರೆ. ಈ ಬಾರಿ ಹಿಮಾಚಲ ಪ್ರದೇಶ ಲೆಪ್ಚಾದಲ್ಲಿ ಪ್ರಧಾನಿ ಅವರು ಸೈನಿಕರೊಂದಿಗೆ ದೀಪಾವಳಿ ಆಚರಿಸುವ ಮೂಲಕ ಸೈನಿಕರಲ್ಲಿ ಹೊಸ ಉತ್ಸಾಹ ತುಂಬಿದರು. ಇನ್ನು ವೀರಯೋಧರ ಜೊತೆ ಹಬ್ಬ ಆಚರಣೆ ಮಾಡಿರುವುದು ತುಂಬಾ ಖುಷಿ ತಂದಿದೆ ಎಂದು ಅವರು ಹೇಳಿದರು.
ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ದೀಪಾವಳಿ ಹಬ್ಬ ಮತ್ತು ಯೋಧರ ಧೈರ್ಯದ ಪ್ರತಿಧ್ವನಿಯ ಸಮ್ಮಿಲನ ದೇಶದ ಪ್ರತಿಯೊಬ್ಬ ಪ್ರಜೆಗೂ ಜ್ಞಾನೋದಯದ ಕ್ಷಣವಾಗಿದೆ ಎಂದು ಅವರು ಹೇಳಿದರು. ಈಗ ಮೊದಲ ಗ್ರಾಮವೆಂದು ಪರಿಗಣಿಸಲ್ಪಟ್ಟಿರುವ ದೇಶದ ಕೊನೆಯ ಗ್ರಾಮದಿಂದ ಭಾರತದ ಗಡಿ ಪ್ರದೇಶಗಳ ಯೋಧರೊಂದಿಗೆ ಅವರು ದೀಪಾವಳಿಯ ಶುಭಾಶಯಗಳನ್ನು ತಿಳಿಸಿದರು.
ತಮ್ಮ ಅನುಭವವನ್ನು ಮೆಲುಕು ಹಾಕಿದ ಪ್ರಧಾನಮಂತ್ರಿಯವರು, ಕುಟುಂಬ ಇರುವಲ್ಲೆಲ್ಲಾ ಹಬ್ಬಗಳು ಇರುತ್ತವೆ ಮತ್ತು ಗಡಿಯನ್ನು ಕಾಪಾಡಲು ಹಬ್ಬದ ದಿನದಂದು ಕುಟುಂಬದಿಂದ ದೂರವಿರುವ ಪರಿಸ್ಥಿತಿಯು ಕರ್ತವ್ಯ ನಿಷ್ಠೆಯ ಪರಾಕಾಷ್ಠೆಯಾಗಿದೆ ಎಂದು ಹೇಳಿದರು.
140 ಕೋಟಿ ಭಾರತೀಯರನ್ನು ತಮ್ಮ ಕುಟುಂಬವೆಂದು ಪರಿಗಣಿಸುವ ಭಾವನೆಯು ಭದ್ರತಾ ಸಿಬ್ಬಂದಿಗೆ ಒಂದು ಉದ್ದೇಶವನ್ನು ನೀಡುತ್ತದೆ ಎಂದು ಅವರು ಹೇಳಿದರು. “ಇದಕ್ಕಾಗಿ ದೇಶವು ನಿಮಗೆ ಕೃತಜ್ಞವಾಗಿದೆ ಮತ್ತು ಋಣಿಯಾಗಿದೆ. ಅದಕ್ಕಾಗಿಯೇ ಪ್ರತಿ ಮನೆಯಲ್ಲೂ ನಿಮ್ಮ ಸುರಕ್ಷತೆಗಾಗಿ ಒಂದು ದೀಪವನ್ನು ಬೆಳಗಿಸಲಾಗುತ್ತದೆ”ಎಂದು ಅವರು ಹೇಳಿದರು. “ಯೋಧರನ್ನು ನಿಯೋಜಿಸಿರುವ ಸ್ಥಳವು ನನಗೆ ಯಾವುದೇ ದೇವಾಲಯಕ್ಕಿಂತ ಕಡಿಮೆಯಿಲ್ಲ. ನೀವು ಎಲ್ಲೇ ಇರಿ, ಅಲ್ಲಯೇ ನನ್ನ ಹಬ್ಬ. ಇದು ಬಹುಶಃ 30-35 ವರ್ಷಗಳಿಂದ ನಡೆಯುತ್ತಿದೆ" ಎಂದು ಅವರು ಹೇಳಿದರು.
ಪ್ರಧಾನಿಯವರು ಯೋಧರಿಗೆ ಮತ್ತು ಸಶಸ್ತ್ರ ಪಡೆಗಳ ತ್ಯಾಗದ ಸಂಪ್ರದಾಯಕ್ಕೆ ಗೌರವ ಸಲ್ಲಿಸಿದರು. "ನಮ್ಮ ವೀರ ಯೋಧರು ಗಡಿಯಲ್ಲಿ ಅತ್ಯಂತ ಬಲಿಷ್ಠ ಗೋಡೆ ಎಂಬುದನ್ನು ಸಾಬೀತುಪಡಿಸಿದ್ದಾರೆ" ಎಂದು ಅವರು ಹೇಳಿದರು. "ನಮ್ಮ ವೀರ ಯೋಧರು ಸೋಲಿನ ದವಡೆಯಿಂದ ಗೆಲುವನ್ನು ಕಸಿದುಕೊಳ್ಳುವ ಮೂಲಕ ಯಾವಾಗಲೂ ನಾಗರಿಕರ ಹೃದಯವನ್ನು ಗೆದ್ದಿದ್ದಾರೆ." ಎಂದು ಅವರು ಹೇಳಿದರು. ರಾಷ್ಟ್ರ ನಿರ್ಮಾಣದಲ್ಲಿ ಸಶಸ್ತ್ರ ಪಡೆಗಳ ಕೊಡುಗೆಯನ್ನು ಒತ್ತಿ ಹೇಳಿದರು. ಭೂಕಂಪಗಳು ಮತ್ತು ಸುನಾಮಿಯಂತಹ ನೈಸರ್ಗಿಕ ವಿಪತ್ತುಗಳು ಮತ್ತು ಅಂತರರಾಷ್ಟ್ರೀಯ ಶಾಂತಿ ಕಾರ್ಯಾಚರಣೆಗಳಲ್ಲಿ ಸಶಸ್ತ್ರ ಪಡೆಗಳು ಹಲವಾರು ಜೀವಗಳನ್ನು ಉಳಿಸಿವೆ ಎಂದು ಅವರು ಹೇಳಿದರು.
"ಸಶಸ್ತ್ರ ಪಡೆಗಳು ಭಾರತದ ಹೆಮ್ಮೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿವೆ" ಎಂದರು. ಕಳೆದ ವರ್ಷ ವಿಶ್ವಸಂಸ್ಥೆಯಲ್ಲಿ ಶಾಂತಿಪಾಲಕರ ಸ್ಮಾರಕ ಭವನವನ್ನು ಸರ್ವಾನುಮತದಿಂದ ಅಂಗೀಕರಿಸಿದ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ, ಇದು ವಿಶ್ವಶಾಂತಿ ಸ್ಥಾಪನೆಗೆ ಅವರ ಕೊಡುಗೆಗಳನ್ನು ಅಮರಗೊಳಿಸುತ್ತದೆ ಎಂದು ಹೇಳಿದರು.
ಭಾರತೀಯರಿಗೆ ಮಾತ್ರವಲ್ಲದೆ ವಿದೇಶಿ ಪ್ರಜೆಗಳ ಸ್ಥಳಾಂತರ ಕಾರ್ಯಾಚರಣೆಯಲ್ಲಿಯೂ ಭಾರತೀಯ ಸಶಸ್ತ್ರ ಪಡೆಗಳ ಪಾತ್ರವನ್ನು ಒತ್ತಿಹೇಳಿದ ಪ್ರಧಾನಿ, ಪ್ರಕ್ಷುಬ್ಧ ಸುಡಾನ್ ನಿಂದ ಯಶಸ್ವಿ ಸ್ಥಳಾಂತರ ಮತ್ತು ತುರ್ಕಿಯೆಯಲ್ಲಿನ ಭೂಕಂಪದ ನಂತರ ರಕ್ಷಣಾ ಕಾರ್ಯಾಚರಣೆಯನ್ನು ನೆನಪಿಸಿಕೊಂಡರು. "ಯುದ್ಧಭೂಮಿಯಿಂದ ರಕ್ಷಣಾ ಕಾರ್ಯಾಚರಣೆಗಳವರೆಗೆ, ಭಾರತೀಯ ಸಶಸ್ತ್ರ ಪಡೆಗಳು ಜೀವಗಳನ್ನು ಉಳಿಸಲು ಬದ್ಧವಾಗಿವೆ" ಎಂದು ಪ್ರಧಾನಮಂತ್ರಿ ಹೇಳಿದರು. ಪ್ರತಿಯೊಬ್ಬ ನಾಗರಿಕನೂ ದೇಶದ ಸಶಸ್ತ್ರ ಪಡೆಗಳ ಬಗ್ಗೆ ಹೆಮ್ಮೆ ಪಡುತ್ತಾನೆ ಎಂದು ಅವರು ಹೇಳಿದರು.