ಅಮೆರಿಕಾ ಅತ್ಯಂತ ಹಳೆಯ ರಾಷ್ಟ್ರ ಮತ್ತು ಭಾರತವು ಅತಿದೊಡ್ಡ ಪ್ರಜಾಪ್ರಭುತ್ವವಾಗಿದೆ. ಆಲೋಚನೆ ಮತ್ತು ಅಭಿವ್ಯಕ್ತಿಗೆ ರೆಕ್ಕೆಗಳನ್ನು ನೀಡುವ ಸಂಸ್ಕೃತಿಯೇ ಪ್ರಜಾಪ್ರಭುತ್ವ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೇಳಿದರು.
ಅಮೆರಿಕಾದ ಸಂಸತ್ ಅನ್ನು ಉದ್ದೇಶಿಸಿ ಮಾತನಾಡಿದ ಅವರು, ಅನಾದಿ ಕಾಲದಿಂದಲೂ ಇಂತಹ ಮೌಲ್ಯಗಳನ್ನು ಭಾರತ ಹೊಂದಿದೆ. ಪ್ರಜಾಸತ್ತಾತ್ಮಕ ಮನೋಭಾವದ ವಿಕಾಸದಲ್ಲಿ ಭಾರತವು ಪ್ರಜಾಪ್ರಭುತ್ವದ ಮಾತೃವಾಗಿದೆ. ಭಾರತ ಮತ್ತು ಅಮೆರಿಕಾ ಒಗ್ಗೂಡಿ ಪ್ರಜಾಪ್ರಭುತ್ವದ ಮಹತ್ವವನ್ನು ಸಾರುತ್ತ್ತಿವೆ ಮತ್ತು ಪ್ರಜಾಪ್ರಭುತ್ವಗಳು ಆಶಯಗಳನ್ನು ಸಾಕಾರಗೊಳಿಸುತ್ತಿವೆ ಎಂದು ಅವರು ಹೇಳಿದರು.
ನಾವು ಬಹುಪಕ್ಷೀಯತೆಯನ್ನು ಪುನರುಜ್ಜೀವನಗೊಳಿಸಬೇಕು ಮತ್ತು ಉತ್ತಮ ಸಂಪನ್ಮೂಲಗಳು ಮತ್ತು ಪ್ರಾತಿನಿಧ್ಯದೊಂದಿಗೆ ಬಹುಪಕ್ಷೀಯ ಸಂಸ್ಥೆಗಳನ್ನು ವಿಶೇಷವಾಗಿ ವಿಶ್ವಸಂಸ್ಥೆಯನ್ನು ಸುಧಾರಿಸಬೇಕು. ಜಗತ್ತು ಬದಲಾದಾಗ, ನಮ್ಮ ಸಂಸ್ಥೆಗಳೂ ಬದಲಾಗಬೇಕು ಅಥವಾ ನಿಯಮಗಳಿಲ್ಲದ ಪೈಪೋಟಿ ಜಗತ್ತನ್ನು ಬದಲಾಯಿಸುವ ಅಪಾಯವಿದೆ ಎಂದು ನರೇಂದ್ರ ಮೋದಿ ಹೇಳಿದರು.
ಅಂತಾರಾಷ್ಟ್ರೀಯ ಕಾನೂನಿನ ಆಧಾರದ ಮೇಲೆ ಹೊಸ ವಿಶ್ವಶ್ರೇಣಿಗಾಗಿ ಕೆಲಸ ಮಾಡುವಲ್ಲಿ, ಭಾರತ ಮತ್ತು ಅಮೆರಿಕಾ ಎರಡೂ ದೇಶಗಳು ಪಾಲುದಾರರಾಗಿ ಮುಂಚೂಣಿಯಲ್ಲಿರುತ್ತವೆ ಎಂದು ತಿಳಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡನ್ ವಾಷಿಂಗ್ಟನ್ ಡಿಸಿಯ ಶ್ವೇತಭವನದಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಉಭಯ ನಾಯಕರು ಭಾರತ-ಅಮೆರಿಕಾ ಬಾಂಧವ್ಯದ ಸಂಪೂರ್ಣ ಆಯಾಮವನ್ನು ಪರಿಶೀಲಿಸಿದರು ಮತ್ತು ಪಾಲುದಾರಿಕೆ ಇನ್ನಷ್ಟು ಬಲವರ್ಧನೆಗೊಳಿಸುವ ಮಾರ್ಗಗಳನ್ನು ಚರ್ಚಿಸಿದರು ಎಂದು ಪ್ರಧಾನಮಂತ್ರಿಗಳ ಕಾರ್‍ಯಾಲಯ ತಿಳಿಸಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಮಾತನಾಡಿ, ಉಭಯ ನಾಯಕರು ಭಾರತ-ಅಮೆರಿಕಾ ಬಾಂಧವ್ಯದ ವಿವಿಧ ಅಂಶಗಳನ್ನು ಪರಿಶೀಲಿಸಿದರು ಮತ್ತು ಎರಡೂ ದೇಶಗಳ ಜನರ ಶಾಂತಿ ಮತ್ತು ಸಮೃದ್ಧಿಗಾಗಿ ಮತ್ತು ಜಾಗತಿಕ ಒಳಿತಿಗಾಗಿ ಅವುಗಳನ್ನು ಮತ್ತಷ್ಟು ಬಲಗೊಳಿಸುವ ಮಾರ್ಗಗಳ ಕುರಿತು ಚರ್ಚಿಸಿದರು. ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಸಂಕಲ್ಪದೊಂದಿಗೆ ಉಭಯ ನಾಯಕರು ಸಮಾಲೋಚಿಸಿದರು ಎಂದು ಅವರು ಹೇಳಿದರು.
ನಂತರ ನೀಡಿದ ಹೇಳಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಭಾರತ-ಅಮೆರಿಕಾ ಸಂಬಂಧಗಳ ಇತಿಹಾಸದಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಭಾರತ-ಅಮೆರಿಕಾ ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಗೆ ಹೊಸ ಅಧ್ಯಾಯ ಸೇರ್ಪಡೆಯಾಗಿದೆ ಎಂದು ಹೇಳಿದರು.
ಕೃತಕ ಬುದ್ದಿಮತ್ತೆ, ಬಾಹ್ಯಾಕಾಶ, ಕ್ವಾಂಟಮ್, ಸೆಮಿಕಂಡಕ್ಟರ್‌ಗಳು ಮತ್ತು ದೂರಸಂಪರ್ಕದಂತಹ ಕ್ಷೇತ್ರಗಳಲ್ಲಿ ಸಹಯೋಗದ ಮೂಲಕ ಭಾರತ ಮತ್ತು ಅಮೆರಿಕಾ ಬಲವಾದ ಮತ್ತು ಭವಿಷ್ಯದ ಸಂಬಂಧ ಸೃಷ್ಟಿಸುತ್ತಿವೆ ಎಂದು ಪ್ರಧಾನಿ ಹೇಳಿದರು. ಎರಡೂ ದೇಶಗಳು ಹಿಂದಿನ ಖರೀದಿದಾರ-ಮಾರಾಟಗಾರರ ಸಂಬಂಧ ತೊರೆದು ತಂತ್ರಜ್ಞಾನದ ವರ್ಗಾವಣೆ, ಸಹ-ಅಭಿವೃದ್ಧಿ ಮತ್ತು ಸಹ-ಉತ್ಪಾದನೆಯೊಂದಿಗೆ ಮುಂದುವರಿಯುತ್ತಿವೆ ಎಂದು ಅವರು ಹೇಳಿದರು. ಅಮೇರಿಕಾ ಮತ್ತು ಭಾರತ ನಡುವಿನ ಆರ್ಟೆಮಿಸ್ ಒಪ್ಪಂದವು ಬಾಹ್ಯಾಕಾಶ ಸಂಶೋಧನೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಸಜ್ಜಾಗಿದೆ.ಇದು ಆಗಸಕ್ಕೆ ಮಿತಿಯಿಲ್ಲ ಎಂದು ಸಾಬೀತುಪಡಿಸುತ್ತದೆ. ಭಾರತ-ಅಮೆರಿಕ ಬಾಂಧವ್ಯ ಉಭಯ ರಾಷ್ಟ್ರಗಳಿಗೆ ಮಾತ್ರವಲ್ಲದೆ ಜಗತ್ತಿಗೂ ಮುಖ್ಯವಾಗಿದೆ ಎಂದರು.
ಭಯೋತ್ಪಾದನೆ ಮತ್ತು ಉಗ್ರರ ವಿರುದ್ಧದ ಹೋರಾಟದಲ್ಲಿ ಭಾರತ ಮತ್ತು ಅಮೆರಿಕ ಹೆಗಲಿಗೆ ಹೆಗಲು ಕೊಟ್ಟು ಮುನ್ನಡೆಯುತ್ತಿವೆ ಮತ್ತು ಗಡಿಯಾಚೆಗಿನ ಭಯೋತ್ಪಾದನೆಯನ್ನು ಕೊನೆಗಾಣಿಸಲು ಸಂಘಟಿತ ಕ್ರಮ ಅಗತ್ಯ ಎಂಬುದನ್ನು ಎರಡೂ ರಾಷ್ಟ್ರಗಳು ಒಪ್ಪುತ್ತವೆ ಎಂದು ಪ್ರಧಾನಿ ಹೇಳಿದರು. -AIR Banagalore