News

ಮೇಲ್ಮನೆಗೆ ಏಳಕ್ಕೆ ಏಳೂ ಜನ ಅವಿರೋಧ ಆಯ್ಕೆ ಖಜಿತ

19 June, 2020 3:18 PM IST By:

ವಿಧಾನಸಭೆಯಿಂದ ವಿಧಾನಪರಿಷತ್​ಗೆ ನಡೆಯಲಿರುವ ಚುನಾವಣೆಗೆ 3 ಪಕ್ಷಗಳು ಅಚ್ಚರಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೂ, ನಿರೀಕ್ಷೆಯಂತೆ ಏಳು ಜನರು ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆಗಳಿವೆ. ಪರಿಷತ್​ನ ಏಳು ಸ್ಥಾನಗಳಿಗೆ ಏಳು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರಿಂದ  ಅವಿರೋಧ ಆಯ್ಕೆ ಬಹುತೇಕ ಖಚಿತವಾಗಿದೆ.

ಮೊದಲಿಗೆ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜ್‌ ಅವರು ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಅವರಿಗೆ ನಾಮಪತ್ರ ಸಲ್ಲಿಸಿದರೆ, ಬಳಿಕ ಕಾಂಗ್ರೆಸ್‌ ಅಭ್ಯರ್ಥಿಗಳಾದ ಬಿ.ಕೆ.ಹರಿಪ್ರಸಾದ್‌, ನಜೀರ್‌ ಅಹಮದ್‌, ಬಿಜೆಪಿ ಅಭ್ಯರ್ಥಿಗಳಾದ ಎಂ.ಟಿ.ಬಿ.ನಾಗರಾಜ್‌, ಆರ್.ಶಂಕರ್, ಸುನಿಲ್‌ ವಲ್ಯಾಪುರೆ ಹಾಗೂ ಪ್ರತಾಪಸಿಂಹ ನಾಯಕ್‌ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಗುರುವಾರ ಬಿಜೆಪಿಯಿಂದ 4, ಕಾಂಗ್ರೆಸ್ 2 ಹಾಗೂ ಜೆಡಿಎಸ್​ನಿಂದ ಒಬ್ಬರು ನಾಮಪತ್ರ ಸಲ್ಲಿಸಿದ್ದಾರೆ.

ಇಂದು (ಶುಕ್ರವಾರ) ನಾಮಪತ್ರಗಳ ಪರಿಶೀಲನೆ, ಜೂ.22 ವಾಪಸ್ ಪಡೆಯಲು ಕೊನೆಯ ದಿನವಾಗಿದೆ. ಅದೇದಿನ ಅವಿರೋಧ ಆಯ್ಕೆ ಕುರಿತು ಅಧಿಕೃತವಾಗಿ ಪ್ರಕಟಿಸುವುದಕ್ಕೆ ವೇದಿಕೆ ಸಜ್ಜಾಗಲಿದೆ.

ಬಿಜೆಪಿ ಹೆಸರಿನಲ್ಲಿ ಎಂ. ನಾಗರಾಜ್, ಪಕ್ಷೇತರರಾಗಿ ಪಿ.ಸಿ.ಕೃಷ್ಣೇಗೌಡ ದಾಖಲಿಸಿದ ಉಮೇದುವಾರಿಕೆಗೆ ನಿಯಮದಂತೆ ಸೂಚಕರಾಗಿ 10 ಶಾಸಕರು ಸಹಿ ಮಾಡಿಲ್ಲ. ಹೀಗಾಗಿ ಪ್ರಮುಖ ಪಕ್ಷಗಳ 7 ಅಭ್ಯರ್ಥಿಗಳ ಮೇಲ್ಮನೆ ಪ್ರವೇಶ ಸಲೀಸು ಎನ್ನುವಂತಾಗಿದೆ. ಕಾಂಗ್ರೆಸ್​ನ ನಸೀರ್ ಅಹ್ಮದ್ 3ನೇ ಬಾರಿ, ಉಳಿದ ಆರು ಮಂದಿ ಮೊದಲ ಬಾರಿಗೆ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗುವುದು ನಿಚ್ಚಳವಾಗಿದೆ.