ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಯ 261 ಗ್ರಾಮ ಪಂಚಾಯತಿ ಮಟ್ಟದಲ್ಲಿ ಕನಿಷ್ಟ ಒಂದು ಕೆರೆ ನಿರ್ಮಿಸಬೇಕು. ಈ ದಿಸೆಯಲ್ಲಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ವಿಶೇಷ ಆಸಕ್ತಿವಹಿಸಿ ಶ್ರಮಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರು ಕರೆ ನೀಡಿದರು.
ಕಲಬುರಗಿ ನಗರದ ಹೊಸ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅಧ್ಯಕ್ಷತೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಸೇರಿದಂತೆ ವಿವಿಧ ಇಲಾಖಾ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಹಾಗೂ ಕೋವಿಡ್-19 ಸೋಂಕು ಗ್ರಾಮೀಣ ಪ್ರದೇಶದಲ್ಲಿ ಹರಡುವುದನ್ನು ತಡೆಯಲು ಗ್ರಾಮ ಪಂಚಾಯತಿಗಳಿAದ ತೆಗೆದುಕೊಂಡ ಕ್ರಮಗಳ ಕುರಿತು ಸಭೆ ನಡೆಸಿ ಅವರು ಮಾತನಾಡಿದರು.
ಜಿಲ್ಲಾ ಪಂಚಾಯತಿ ಸುಪರ್ಧಿಯಲ್ಲಿದ್ದ ಕೆರೆಗಳ ನಿರ್ಮಾಣ ಅಧಿಕಾರ ಗ್ರಾಮ ಪಂಚಾಯ್ತಿಗೆ ವಹಿಸಲಾಗಿದೆ. ನರೇಗಾ ಅನುದಾನದಡಿ ಆಯಾ ಗ್ರಾಪಂ ವ್ಯಾಪ್ತಿಯ ಎಲ್ಲಾ ಗ್ರಾಮದಲ್ಲೂ ಕೆರೆ ನಿರ್ಮಿಸಬಹುದಾಗಿದೆ. ರಾಜ್ಯದ 6,500 ಗ್ರಾಪಂಗಳಲ್ಲಿ ಕೆರೆಗಳು ನಿರ್ಮಿಸಿದರೆ ಇಡೀ ರಾಜ್ಯವೇ ಸಮಗ್ರ ಅಭಿವೃದ್ಧಿಯಾಗಲಿದೆ ಎಂದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಗಂಗಾಜಲ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಮತ್ತಷ್ಟು ಶಕ್ತಿ ತುಂಬಲಿದೆ ಎಂದರು.
ಇದೇ ವೇಳೆಗೆ ಜಿಪಂ ಸಿಇಓ ಡಾ. ದಿಲೀಷ್ ಶಶಿ ಪ್ರತಿಕ್ರಿಯಿಸಿ, ಈ ಹಿಂದೆ ತಾವು ಭೇಟಿ ನೀಡಿದ್ದ ಸಂದರ್ಭದಲ್ಲಿ ಸೂಚಿಸಿದಂತೆ ಜಲಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿನ ಕಲ್ಯಾಣಿಗಳ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಪಾಳುಬಿದ್ದಿರುವ ನೂರಕ್ಕೂ ಹೆಚ್ಚು ಕಲ್ಯಾಣಿಗಳನ್ನು ಪತ್ತೆಹಚ್ಚಲಾಗಿದೆ. 40 ಕಲ್ಯಾಣಿಗಳ ಜೀರ್ಣೋದ್ಧಾರಗೊಳಿಸುವ ಗುರಿ ಹಾಕಿಕೊಳ್ಳಲಾಗಿದ್ದು, ಈಗಾಗಲೇ 29 ಕಲ್ಯಾಣಿಗಳ ಜೀರ್ಣೋದ್ಧಾರವಾಗಿವೆ ಎಂದು ಮಾಹಿತಿ ನೀಡಿದರು.
ರಾಜ್ಯದಲ್ಲಿ ಎಲ್ಲ ಅಂಗನವಾಡಿ ಕಟ್ಟಡಗಳ ದುರಸ್ತಿ ಹಾಗೂ ಹೊಸ ಅಂಗನವಾಡಿ ಕೇಂದ್ರಗಳ ಸ್ಥಾಪನೆ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗಿದ್ದು, ಪ್ರತಿ ಅಂಗನವಾಡಿ ಕೇಂದ್ರದ ಕಟ್ಟಡಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ತಲಾ 5 ಲಕ್ಷ ರೂ. ಅನುದಾನ ಒದಗಿಸಲು ನಿರ್ಣಯಿಸಲಾಗಿದೆ. ಅಗತ್ಯಬಿದ್ದರೆ ಎಸಿಪಿ/ಟಿಎಸ್‌ಪಿ ಯೋಜನೆ ಅಡಿ ಪರಿಶಿಷ್ಟ ವರ್ಗಗಳ ಕಾಲೋನಿಯಲ್ಲೂ 2 ರಿಂದ 3 ಲಕ್ಷ ರೂ. ಅನುದಾನ ಬಳಸಿಕೊಂಡು ಸುಸಜ್ಜಿತ ಅಂಗನವಾಡಿ ಕಟ್ಟಡ ನಿರ್ಮಿಸಬೇಕು ಎಂದು ಸೂಚಿಸಿದರು.
ಸಂಭಾವ್ಯ ಕೋವಿಡ್ 3 ನೇ ಅಲೆಯ ನಿರ್ವಹಣೆ ದೃಷ್ಟಿಯಿಂದ ಗ್ರಾಪಂನಲ್ಲಿನ ಕರ ವಸೂಲಿ ಹಣವನ್ನು ಬಳಸಿಕೊಳ್ಳಿ, 15ನೇ ಹಣಕಾಸು ಯೋಜನೆಯ ಶೇ.15% ರಷ್ಟು ಅನುದಾನ ಹಣ ಉಪಯೋಗ ಮಾಡಿಕೊಳ್ಳಿ, ಕೋವಿಡ್ ನಿರ್ವಹಣೆಯಲ್ಲಿ ಯಾವುದೇ ಹಣದ ಕೊರತೆ ಇಲ್ಲಾ ಹಾಗೂ ಮುಂಜಾಗೃತ ಕ್ರಮವಾಗಿ ಒಂದು ಹಳ್ಳಿಯ 50 ಮನೆಗಳ ತಂಡ ರಚಿಸಿ ಜಾತಿ-ಧರ್ಮ-ಮತ-ಪಂತಗಳ ಭೇದವಿಲ್ಲದೆ ಎಲ್ಲರಿಗೂ ಕೋವಿಡ್ ಲಸಿಕೆ ಸಿಗುವಂತಾಗಬೇಕು. ಲಸಿಕೆ ಬಗ್ಗೆ ಅರಿವು ಮೂಡಿಸಿ ಎಂದು ಸಚಿವರು ಸಲಹೆ ನೀಡಿದರು.
ಕೃಷಿ, ತೋಟಗಾರಿಕೆ, ರೇಷ್ಮೆ, ಗ್ರಾಮೀಣ ಮತ್ತು ಕುಡಿಯುವ ನೀರು ಇಲಾಖೆ, ಗ್ರಾಮೀಣಾಭಿವೃದ್ಧಿ, ಪಂಚಾಯತರಾಜ್, ಸಮಾಜಕಲ್ಯಾಣ, ಅರಣ್ಯ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿ, ಕಾಲಮಿತಿಯೊಳಗೆ ಎಲ್ಲಾ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಎಲ್ಲಾ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಈ ಸಂದರ್ಭದಲ್ಲಿ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಸಿದ್ಧಪಡಿಸಲಾದ “ಪರಿಸರವನ್ನು ಸ್ವಚ್ಛತೆಯಾಗಿ ಇಡೋಣ, ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸೋಣ” ಎಂಬ ಶೀರ್ಷಿಕೆ ಹೊಂದಿರುವ ಸಿಡಿ ಯನ್ನು ಸಚಿವರು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಭೀಮರಾಯನಗುಡಿ ಅಚ್ಟುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಕೃಷ್ಣ ಮೇಲ್ದಂಡೆ ಯೋಜನೆ (ಕಾಡಾ) ಅಧ್ಯಕ್ಷ ಶರಣಪ್ಪ ತಳವಾರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಆಯುಕ್ತ ಡಾ. ಆರ್. ವಿಶಾಲ್, ಸಚಿವರ ವಿಶೇಷಾಧಿಕಾರಿ ಜಯರಾಮ್ ಹಾಗೂ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.