News

ಕಾಫಿ ಬೆಳೆಗಾರರಿಗೆ ಪ್ಯಾಕೇಜ್‌: ಕೇಂದ್ರಕ್ಕೆ ಸಿ.ಟಿ. ರವಿ ಮನವಿ

20 August, 2020 5:07 PM IST By:

ಸತತ ಎರಡು ವರ್ಷಗಳಿಂದ ಮಳೆ, ಪ್ರವಾಹ ಮತ್ತು ರೋಗಗಳಿಂದ ಚಿಕ್ಕಮಗಳೂರು ಜಿಲ್ಲೆಯ ಕಾಫಿ, ಅಡಿಕೆ, ಮೆಣಸು ಮತ್ತು ಏಲಕ್ಕಿ ಬೆಳೆಗಾರರು ಸಂಕಷ್ಟದಲ್ಲಿದ್ದು, ತಕ್ಷಣ ಇವರ ನೆರವಿಗೆ ಧಾವಿಸಲು ವಿಶೇಷ ಪ್ಯಾಕೇಜ್‌ ಘೋಷಿಸುವಂತೆ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ (C.T. Ravi) ಅವರು ಕೇಂದ್ರಕ್ಕೆ ಮನವಿ (Memorandum submitted)ಸಲ್ಲಿಸಿದ್ದಾರೆ.

ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್‌ ಅವರನ್ನು ಭೇಟಿ ಮಾಡಿದ ಅವರು, ಚಿಕ್ಕಮಗಳೂರು ಜಿಲ್ಲೆಯ ಕಾಫಿ, ಅಡಿಕೆ, ಮೆಣಸು ಮತ್ತು ಏಲಕ್ಕಿ ಬೆಳೆಗಾರರು ಹಾಗೂ ರೈತರು ಬರ, ನೆರೆಯಿಂದ ತೀವ್ರ ಸಂಕಷ್ಟದಲ್ಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಎರಡು ವರ್ಷಗಳಿಂದ ಉಂಟಾದ ಪ್ರವಾಹದಿಂದಾಗಿ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಾದ ಕಾಫಿ, ಅಡಿಕೆ, ಮೆಣಸು, ಬಾಳೆ, ಭತ್ತ ಮತ್ತು ಏಲಕ್ಕಿ ಬೆಳೆಗಳು ಕೊಚ್ಚಿ ಹೋಗಿವೆ. ಇದರಿಂದ ಸಾವಿರಾರು ಕುಟುಂಬಗಳ ಬದುಕು ಬೀದಿಗೆ ಬಿದ್ದಂತಾಗಿದೆ. ಇದಕ್ಕೂ ಎರಡು ವರ್ಷಗಳ ಹಿಂದೆ ಸತತ ಬರಗಾಲವಿತ್ತು. ಈಗ ಕೋವಿಡ್‌-19 ವೈರಾಣು ಕಾಣಿಸಿಕೊಂಡ ಬಳಿಕ ರೈತರ ಪರಿಸ್ಥಿತಿ ಶೋಚನೀಯವಾಗಿದ್ದು, ಸರಣಿ ಸಂಕಷ್ಟಗಳಿಂದ ನಲುಗುತ್ತಿರುವ ರೈತರ ನೆರವಿಗೆ ಸರ್ಕಾರ ಧಾವಿಸಬೇಕು ಎಂದು ಮನವಿ ಮಾಡಿದ್ದಾರೆ.