News

ಸಕಲ ಪೋಷಕಾಂಶಗಳಿಂದ ಸಮೃದ್ಧವಾಗಿದ್ದರೂ ತಿರಸ್ಕಾರಕ್ಕೆ ಒಳಗಾದ ಸಿರಿಧಾನ್ಯಗಳು!

17 June, 2021 3:35 PM IST By:
millets

ಸಿರಿಧಾನ್ಯ... ಹೆಸರಲ್ಲೇ ಸಿರಿಯನ್ನು ಹೊಂದಿರುವ ಧಾನ್ಯಗಳು. ಸಕಲ ವಿಧದ ಪೋಷಕಾಂಶಗಳಿAದ ಸಂಪದ್ಭರಿತವಾಗಿರುವ ಈ ಸಿರಿಧಾನ್ಯಗಳು ನೀಡುವ ಆರೋಗ್ಯ ಪ್ರಯೋಜನಗಳಿಗೆ ಈಗ ಮಾರುಕಟ್ಟೆಯಲ್ಲಿರುವ ಯಾವುದೇ ಪ್ರೋಟೀನ್ ಪೌಡರ್‌ಗಳು, ವಿಟಮಿನ್ ಮಾತ್ರೆ, ಟಾನಿಕ್ಕುಗಳು ಸಾಟಿಯಾಗಲಾರವು. ಈ ಧಾನ್ಯಗಳಲ್ಲಿ ಅಡಕವಾಗಿರುವ ಆರೋಗ್ಯ ಪೂರಕ ಪೋಷಕಾಂಶಗಳ ಶ್ರೀಮಂತಿಕೆಯನ್ನು ಕಂಡೇ ನಮ್ಮ ಹಿರಿಯರು ಇವುಗಳಿಗೆ ‘ಸಿರಿ ಧಾನ್ಯ’ ಎಂದು ಹೆಸರಿಟ್ಟಿರಬೇಕು. ಆದರೆ ವಿಪರ್ಯಾಸ ಏನೆಂದರೆ, ಈ ಧಾನ್ಯಗಳ ಶ್ರೇಷ್ಠತೆ ಬಗ್ಗೆ ಭಾರತೀಯರಿಗೇ ಅರಿವಿಲ್ಲ.

ಸಿರಿಧಾನ್ಯಗಳೆಂದರೆ ಅಪ್ಪಟ ದೇಸಿ, ಗ್ರಾಮೀಣ ಸೊಗಡಿನ ಸಾವಯವ, ಸಮೃದ್ಧ ಕಾಳುಗಳು. ಇವುಗಳ ಮೂಲ ಆಫ್ರಿಕಾ ಖಂಡವಾದರೂ ಭಾರತದಲ್ಲಿ ಇವುಗಳ ಬಳಕೆ ಹೆಚ್ಚು. ಹಳ್ಳಿಗಳಲ್ಲಿ ಮೊದಲಿನಿಂದಲೂ ಸಿರಿಧಾನ್ಯಗಳ ಬಳಕೆ ಇದ್ದೇ ಇದೆ. ಆದರೆ ತಂತ್ರಜ್ಞಾನ ಬೆಳೆದು ದೇಶ ಅಭಿವೃದ್ಧಿ ಹೊಂದಿದAತೆ ಗ್ರಾಮೀಣ ಭಾಗದ ಜನರ ಮನಸ್ಥಿತಿಯೂ ಬದಲಾಗಿ ಸಿರಿಧಾನ್ಯಯಗಳು ಮೂಲೆಗೆ ತಳ್ಳಲ್ಪಟ್ಟಿವೆ. ಹೈಬ್ರೀಡ್ ತಳಿಗಳ ಬೆಡಗು, ಬಿನ್ನಾಣಗಳು ಅಪ್ಪಟ ಜವಾರಿ ಆಹಾರವಾಗಿದ್ದ ಸಿರಿಧಾನ್ಯಗಳನ್ನು ಜನ ಮರೆಯುವಂತೆ ಮಾಡಿವೆ. ಹಳ್ಳಿಗಳಲ್ಲಿ ಜನರಿಗೆ ಸಿರಿಧಾನ್ಯಗಳ ಮಹತ್ವ ಗೊತ್ತಿದ್ದರೂ ಅವುಗಳನ್ನು ಬಳಸುತ್ತಿಲ್ಲ. ಗುಣಮಟ್ಟ, ರುಚಿ, ಬಾಳಿಕೆ ಎಲ್ಲಾ ದೃಷಿಯಿಂದ ನೋಡಿದಾಗಲೂ ಸಿರಿ ಧಾನ್ಯಗಳಿಗೆ ಯಾವ ಹಂತದಲ್ಲೂ ಈ ಹೈಬ್ರೀಡ್ ಕಾಳುಗಳು ಸರಿಸಾಟಿಯಾಗಿ ನಿಲ್ಲಲಾರವು. ಆದರೂ ಜನ ಸಿರಿಧಾನ್ಯಗಳನ್ನು ತಿರಸ್ಕರಿಸುತ್ತಿರಲು ಕಾರಣ ಮಾತ್ರ ತಿಳಿಯುತ್ತಿಲ್ಲ.

ಆಧುನಿಕತೆಯ ಅಬ್ಬರ

ಸಿರಿಧಾನ್ಯಗಳಿಗೆ ಮುಳುವಾಗಿರುವುದು ಆಧುನಿಕತೆಯ ಅಬ್ಬರ. ಒಂದು ಹಂತಕ್ಕೆ ನೋಡುವುದಾದರೆ ರೇಡಿಯೋ ಇದ್ದ ಕಾಲವೇ ಚೆನ್ನಾಗಿತ್ತು. ಈ ಟೀವಿ ಬಂದ ನಂತರ ಜನರ ರೀತಿ-ನೀತಿ, ನಡೆ-ನುಡಿ, ಭಾಷೆ-ಬಟ್ಟೆ, ಆಟ-ಪಾಠ, ಆಹಾರ-ವಿಹಾರ, ಆಚರಣೆ, ಸಂಬAಧ, ಜೀವನಶೈಲಿ ಹೀಗೆ ಎಲ್ಲವೂ ಬದಲಾಗುತ್ತಾ ಹೋಯಿತು. ಈ ಬದಲಾವಣೆ ಅದೆಷ್ಟು ನಾಜೂಕಾಗಿತ್ತೆಂದರೆ, ತಾವು ಬದಲಾಗುತ್ತಿರುವುದು ಸ್ವತಃ ಬದಲಾಗುತ್ತಿದ್ದ ಜನರ ಅರಿವಿಗೂ ಬರಲಿಲ್ಲ. ಕೊನೆಗೆ ಹಳೆಯದೆಲ್ಲವೂ ಪಕ್ಕಕ್ಕೆ ಸರಿದು ಹೊಸತನಗಳಿಗೆ ದಾರಿ ಮಾಡಿಕೊಟ್ಟಾಗ ಅದಕ್ಕೆ ಆಧುನಿಕತೆ ಎಂದು ನಾಮಕರಣ ಮಾಡಲಾಯಿತು. ಈ ಪ್ರಕ್ರಿಯೆಯಲ್ಲಿ ಹಳ್ಳಿಗಳೂ ಸೇರ್ಪಡೆಗೊಂಡವು. ಪರಿಣಾಮ, ಗ್ರಾಮೀಣ ಸೊಗಡು ಸೊರಗತೊಡಗಿತು. ಆ ಸೊರಗಿದ ಸೊಗಡಿನಲ್ಲಿ ಸಿರಿಧಾನ್ಯಗಳೂ ಇದ್ದವು.

ಅಡುಗೆ ಮನೆಗೆ ಹೈಬ್ರೀಡ್ ದಾಳಿ

ಇದು ನಾಲ್ಕು ದಶಕಗಳ ಹಿಂದಿನ ಮಾತು. ಆಗಿನ್ನೂ ಹಳ್ಳಿ ಮಾತ್ರವಲ್ಲ, ಪಟ್ಟಣದ ಮನೆಗಳ ಅಡುಗೆ ಕೋಣೆಗಳಲ್ಲೂ ರಾಗಿ, ನವಣೆ, ಸಾಮೆ, ಸಜ್ಜೆ, ಜೋಳ ಸೇರಿ ಹಲವಾರು ಸಿರಿಧಾನ್ಯಗಳಿದ್ದವು. ರಟ್ಟೆ ಮುರಿದು ದುಡಿಯುವ ರೈತರಿಗೆ ರೊಟ್ಟಿಯೇ ಪ್ರಧಾನ ಆಹಾರವಾಗಿತ್ತು. ಮುಂಜಾನೆದ್ದು ರಾಗಿ ಗಂಜಿ ಕುಡಿದರೆ ಅದುವೇ ತಿಂಡಿ, ಊಟಕ್ಕೆ ಜೋಳ, ರಾಗಿ, ಸಜ್ಜೆಯ ರೊಟ್ಟಿ, ನವಣೆಯ ಅನ್ನ ಸೇವಿಸುತ್ತಿದ್ದ ರೈತ ಗಟ್ಟಿಮುಟ್ಟಾಗಿ, ಆರೋಗ್ಯದಿಂದಿದ್ದ. ಆದರೆ ಆಧುನಿಕತೆಯ ಪ್ರಭಾವ ನ್ಮಮ ಹಳ್ಳಿ ಅಡುಗೆ ಕೋಣೆಗಳನ್ನೂ ಬಿಡಲಿಲ್ಲ. ಕೃಷಿ ವಿಜ್ಞಾನ, ವಿಜ್ಞಾನಿಗಳು ಸೃಷ್ಟಿಸಿದ ಹೊಸ ತಳಿಗಳು ಸಿರಿ ಧಾನ್ಯಗಳನ್ನು ಹಂತ ಹಂತವಾಗಿ ಹತ್ತಿಕ್ಕುತ್ತಾ ಬಂದವು. ದಿನ ಕಳೆದಂತೆ ಒಂದೊAದೇ ಸಿರಿ ಧಾನ್ಯಗಳು ಅಡುಗೆ ಕೋಣೆಯಿಂದ ಹೊರ ದೂಡಲ್ಪಟ್ಟವು. ಅವುಗಳ ಸ್ಥಾನವನ್ನು ಹೈಬ್ರೀಡ್ ಕಾಳುಗಳು, ವಿದೇಶಿ ಧಾನ್ಯಗಳು ಆವರಿಸಿದವು. ರೊಟ್ಟಿ ಬಡಿಯುತ್ತಿದ್ದ ಕೈಗಳಿಗೆ ಲಟ್ಟಣಿಗೆ ಬಂದು, ಗೋಧಿಯ ಚಪಾತಿ ಲಟ್ಟಿಸುವ ಕೆಲಸ ಶುರುವಾಯಿತು. ಚಿತ್ರಾನ್ನ, ರೈಸ್ ಬಾತು, ಇಡ್ಲಿ ದೋಸೆ, ಪಡ್ಡು... ಹೀಗೆ ಬಗೆಬಗೆಯ ತಿಂಡಿಗಳನ್ನು ಸೃಷ್ಟಿಸುವ ಅಕ್ಕಿಯು, ರಾಗಿ ಗಂಜಿಯ ಸ್ಥಾನವನ್ನು ಕಿತ್ತುಕೊಂಡಿತು. ಜೊತೆಗೆ ನವಣೆಗೆ ಗೇಟ್‌ಪಾಸ್ ಕೊಟ್ಟಿದ್ದು ಕೂಡ ಇದೇ ಬಿಳುಪು, ಬಿನ್ನಾಣದ ಹೈಬ್ರೀಡ್ ಅಕ್ಕಿ. ಈಗೇನಿದ್ದರೂ ಅಡುಗೆ ಮನೆಗಳಲ್ಲಿ ಹೈಬ್ರೀಡ್ ಹಾವಳಿ. ಪ್ರಸ್ತುತ ಮಧ್ಯ ಕರ್ನಾಟಕ, ಹಳೇ ಮೈಸೂರು ಭಾಗ ಮತ್ತು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಉಳಿದಿರುವ ‘ಸಿರಿ’ ಎಂದರೆ ಜೋಳ ಮತ್ತು ರಾಗಿ ಎರಡೇ. ಅವುಗಳಲ್ಲೂ ಹೈಬ್ರೀಡ್ ತಳಿಗಳಿವೆ. ಜೊತೆಗೆ ಇವು ಹಳ್ಳಿ ಮನೆಗಳಿಗೆ ಸೀಮಿತವಾಗಿವೆ ಎಂಬುದೇ ವಿಪರ್ಯಾಸ!

ಸಿರಿಧಾನ್ಯ ಉಳ್ಳವರ ಸೊತ್ತು

ಈಗಲೂ ರಾಜ್ಯದ ಹಲವೆಡೆ ಸಿರಿಧಾನ್ಯಗಳನ್ನು ಬೆಳೆಯಲಾಗುತ್ತದೆ. ಆದರೆ ಬೆಳೆಯಯುವ ರೈತರ ಸಂಖ್ಯೆ ಕಡಿಮೆ. ಜೊತೆಗೆ ಇಳುವರಿ ಕಡಿಮೆ ಎಂಬ ಭಾವನೆಯಿಂದ ದೊಡ್ಡ ರೈತರಾರೂ ರಾಗಿ, ನವಣೆ, ಸಜ್ಜೆ ಬೆಳೆಯಲು ಮುಂದಾಗುವುದಿಲ್ಲ. ಜೊತೆಗೆ ಇವುಗಳ ಬೆಲೆಯೂ ಅಷ್ಟಕ್ಕಷ್ಟೇ ಎಂಬ ಹಿಂಜರಿಕೆ ಕೂಡ. ಇತ್ತೀಚೆಗೆ ಬೆಂಗಳೂರು, ಮೈಸೂರು ಮತ್ತಿತರ ಮಹಾನಗರಗಳಲ್ಲಿ ಸಿರಿ ಧಾನ್ಯಗಳಿಗೆ ಸಂಬAಧಿಸಿದಂತೆ ಜನ ಸಾಕಷ್ಟು ಜಾಗೃತರಾಗಿದ್ದಾರೆ. ಸಿರಿಧಾನ್ಯ ಮಳಿಗೆಗಳೂ ತಲೆಯೆತ್ತಿ ನಿಂತಿವೆ. ಆದರೆ ಸಿರಿಧಾನ್ಯಗಳಿಗೆ ಈಗ ಕಾರ್ಪೊರೇಟ್ ರೂಪ ದೊರೆತಿದೆ. ರೈತರಿಂದ ಅತಿ ಕಡಿಮೆ ಬೆಲೆಗೆ ಧಾನ್ಯ ಕೊಳ್ಳುವ ವ್ಯಾಪಾರಿಗಳು, ಅವುಗಳನ್ನು ಪ್ಯಾಕ್ ಮಾಡಿ, ಮೇಲೊಂದು ಬ್ರಾಂಡ್‌ನ ಚೀಟಿ ಅಂಟಿಸಿ ದುಬಾರಿ ಬೆಲೆಗೆ ಮಾರುತ್ತಿದ್ದಾರೆ. ಹೀಗಾಗಿ ಸಿರಿ ಧಾನ್ಯಗಳು ಉಳ್ಳವರ ಸ್ವತ್ತಾಗಿವೆ. ಬಂಗಾರದAತೆ!  

ಸಿರಿಧಾನ್ಯಗಳೇಕೆ ಬೇಕು

ಮೊದಲೇ ಹೇಳಿದಂತೆ ಸಿರಿಧಾನ್ಯಗಳು ಹಲವಾರು ವೋಷಕಾಂಶಗಳಿAದ ಸಂಪದ್ಭರಿತವಾಗಿವೆ. ವಿಟಮಿನ್, ಪ್ರೋಟೀನ್, ಕ್ಯಾಲ್ಷಿಯಂ, ಕಬ್ಬಿಣ, ನಾರು ಸೇರಿ ಆರೋಗ್ಯವಂತ ಮನುಷ್ಯನಿಗೆ ಅಗತ್ಯವಿರುವ ಎಲ್ಲ ರೀತಿಯ ಪೋಷಕಾಂಶಗಳನ್ನು ಕೇವಲ ಒಂದೇ ಬಗೆಯ ಸಿರಿಧಾನ್ಯ ಒದಗಿಸಬಲ್ಲದು ಎಂದರೆ ನಿಮಗೆ ಅಚ್ಚರಿಯಾಗಬಹುದು. ರಾಗಿಯಯಲ್ಲಿ 7.70 ಗ್ರಾಂ. ಪ್ರೋಟೀನ್, 67 ಗ್ರಾಂ. ಸಿಎಚ್‌ಒ, 350 ಮಿಲಿ ಗ್ರಾಂ. ಕ್ಯಾಲ್ಷಿಯಂ, 3.9 ಮಿ.ಗ್ರಾಂ. ಕಬ್ಬಿಣ, 3.6 ಗ್ರಾಂ. ನಾರಿನ ಅಂಶವಿರುತ್ತದೆ. ಇನ್ನು ನವಣೆಯಲ್ಲಿ 5 ಗ್ರಾಂ. ಪ್ರೋಟೀನ್, 60.9 ಗ್ರಾಂ. ಸಿಎಚ್‌ಒ, 15 ಮಿಲಿ ಗ್ರಾಂ. ಕ್ಯಾಲ್ಷಿಯಂ, 31 ಮಿ.ಗ್ರಾಂ. ಕಬ್ಬಿಣ, 4.3 ಗ್ರಾಂ. ನಾರಿನ ಅಂಶವಿದೆ. ಸಜ್ಜೆ ಅತ್ಯಂತ ಸಂಪತ್ಭರಿತವಾಗಿದ್ದು, ಇದರಲ್ಲಿ 11.80 ಗ್ರಾಂ. ಪ್ರೋಟೀನ್, 72 ಗ್ರಾಂ. ಸಿಎಚ್‌ಒ, 42 ಮಿಲಿ ಗ್ರಾಂ. ಕ್ಯಾಲ್ಷಿಯಂ, 11 ಮಿ.ಗ್ರಾಂ. ಕಬ್ಬಿಣ, 2.3 ಗ್ರಾಂ. ನಾರಿನ ಅಂಶವಿರುತ್ತದೆ. ಇದರೊಂದಿಗೆ ಅಗತ್ಯ ಪ್ರಮಾಣದ ಕೊಬ್ಬಿನ ಅಂಶ ಕೂಡ ಇವುಗಳಲ್ಲಿದೆ. ಹೀಗಾಗಿ ಸಂಸ್ಕರಿಸಿ ತಯಾರಾದ ಪೌಡರ್ ಸೇವನೆ ಮತ್ತು ಹೈಬ್ರೀಡ್ ಧಾನ್ಯಗಳಿಗಿಂತಲೂ ಸಿರಿಧಾನ್ಯಗಳ ಬಳಕೆ ಸೂಕ್ತ ಎನ್ನುತ್ತಾರೆ ತಜ್ಞರು.