News

ಮಳೆ ಕೊರತೆಯಿಂದಾಗಿ ಕಳೆ ಕಳೆದುಕೊಂಡಿದೆ ರಾಗಿ

31 August, 2020 11:45 AM IST By:

ಕರ್ನಾಟಕದಲ್ಲಿ ಒಂದೆಡೆ ಭಾರಿ ಮಳೆಯಿಂದ ಬೆಳೆ ಹಾಳಾದರೆ ಇನ್ನೊಂದೆಡೆ ಮಳೆಯ ಕೊರತೆಯಿಂದಾಗಿ ಬೆಳೆ ಹಾನಿಯಾಗಿದೆ.ಇದು ಈ ವರ್ಷ ಅಷ್ಟೇ ಅಲ್ಲ, ಪ್ರತಿವರ್ಷ ರೈತರೊಂದಿಗೆ ಮಳೆ ಕಣ್ಣಾಮುಚ್ಚಾಲೆ ಆಟ ಆಡುತ್ತಲೇ ಇದೆ.

ಈ ವರ್ಷ ಕರಾವಳಿ ಹಾಗೂ ಉತ್ತರ ಕರ್ನಾಟಕದ ಕೆಲವು ಕಡೆ ಭಾರಿ ಮಳೆಯಿಂದಾಗಿ ಹೆಸರು, ಉದ್ದು, ಮುಸುಕಿನ ಜೋಳ, ಈರುಳ್ಳಿ, ಕರಾವಳಿ ಭಾಗದಲ್ಲಿ ಅಡಕೆ ಸೇರಿದಂತೆ ಇತರ ಬೆಳೆಗಳು ಹಾಳಾಗಿದ್ದರಿಂದ ರೈತರು ಸಂಕಷ್ಟದಲ್ಲಿ ಸಿಲುಕಿದ್ದರು. ನಿರಂತರ ಮಳೆಯಿಂದಾಗಿ ವಿವಿಧ ರೋಗಗಳಿಗೆ ಬೆಳೆಗಳು ತುತ್ತಾದವು. ಆದರೆ ಬೆಂಗಳೂರು ಮತ್ತು ರಾಮನಗರ ಜಿಲ್ಲೆಯಲ್ಲಿ ರಾಗಿ (Millet) ಬೆಳೆಗಳು ಮಳೆಯ ಕೊರತೆಯಿಂದಾಗಿ ಒಣಗುತ್ತಿವೆ.

ಈ ವರ್ಷ ಉತ್ತಮ ಮುಂಗಾರು ಪ್ರವೇಶವಾಗಿದ್ದರಿಂದ ರಾಜ್ಯಾದ್ಯಂತ ರೈತರಲ್ಲಿ ಮಂದಹಾಸ ಮೂಡಿತ್ತು. ಬಿತ್ತಣಿಕೆಯೂ ಸಹ ನಿರೀಕ್ಷೆಗಿಂತೆ ಹೆಚ್ಚಾಗಿತ್ತು.  ಫಸಲು ಸಹ ನಳನಳಿಸಿ ರೈತರಲ್ಲಿ  ಇಳುವರಿಯಲ್ಲಿ ಹೆಚ್ಚಾಗುವ  ಸಾಧ್ಯತೆಯಿತ್ತು. ಆದರೆ ಕಳೆದ ಹದಿನೈದು ದಿನಗಳಿಂದ ಬೆಂಗಳೂರು ಮತ್ತು ರಾಮನಗರ ಸುತ್ತಮುತ್ತ ಮಳೆಯ ಕೊರತೆಯಿಂದಾಗಿ ರಾಗಿ ಬೆಳೆ ಕಳೆ ಕಳೆದುಕೊಂಡಿದೆ.

ನೆಲಮಂಗಲ ತಾಲೂಕಿನ ಸೋಂಪುರ ಹೋಬಳಿಯು ಮಳೆಯಾಧಾರಿತ ಪ್ರದೇಶವಾಗಿದ್ದು, ಬಹುತೇಕ ರೈತರು ಮುಂಗಾರು ಹಂಗಾಮಿನಲ್ಲಿ ತೊಗರಿ, ಮುಸುಕಿನ ಜೋಳ, ಅವರೆ, ಅಲಸಂದೆ, ನೆಲಗಡಲೆ ಹಾಗೂ ರಾಗಿಯನ್ನು ಬೆಳೆಯುತ್ತಾರೆ. ವರ್ಷದ ಆರಂಭದಲ್ಲೇ ಉತ್ತಮ ಮಳೆ ಬಿದ್ದರಿಂದ ಭೂಮಿ ಪಾಳು ಬಿಡದೆ ವಿವಿಧ ಬೆಳೆಗಳನ್ನು ಬಿತ್ತಿದ್ದರು. ಬಿತ್ತಿದ ಬೆಳೆಗಳು ಹಸಿರು ತುಂಬಿ ಬೆಳೆದು ನಿಂತಿದೆ. ಆದರೆ ಈಗ 15 ದಿನಗಳಿಂದ ಮಳೆ ಇಲ್ಲದೇ ಬೆಳೆಗಳು ಒಣಗುತ್ತಿವೆ. 

ಮಾಗಡಿ ಶಿವನಸಂಧ್ರದ ಬಳಿ ಮಳೆಯಿಲ್ಲದೆ ಒಣಗಿರುವ ರಾಗಿ:

ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ  ಶಿವನಸಂದ್ರ ಸುತ್ತಲಿನ ಗ್ರಾಮಗಳಲ್ಲಿ ಮಳೆಯಿಲ್ಲದೆ ರಾಗಿ ಫಸಲು ಒಣಗುತ್ತಿದೆ  ಆರಂಭದಲ್ಲಿ ವಾಡಿಕೆಗಿಂತ ಅಧಿಕವಾಗಿ ಮಳೆ ಬಿದ್ದಿತಾದರೂ 20 ದಿನಗಳಿಂದ ಹನಿಮಳೆ ಬಿದ್ದಿಲ್ಲ. ನಳನಳಿಸುತ್ತಿದ್ದ ರಾಗಿ, ಅವರೆ ಫಸಲು ಒಣಗುತ್ತಿವೆ. ಮುಂದಿನ ವಾರದಲ್ಲಿ ಮಳೆ ಬೀಳದಿದ್ದರೆ ರಾಗಿ ಫಸಲು ಸಂಪೂರ್ಣವಾಗಿ ಒಣಗಲಿದೆ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ