News

ರೈತರಿಗೆ ಸಂತಸದ ಸುದ್ದಿ: ಹಸುವಿನ ಹಾಲಿಗೆ 2 ರೂಪಾಯಿ, ಎಮ್ಮೆ ಹಾಲಿಗೆ 3 ರೂಪಾಯಿ ದರ ಹೆಚ್ಚಳ

26 January, 2021 12:00 AM IST By: KJ Staff
Milk

ಹೈನುಗಾರಿಕೆ ಮಾಡುವ ರೈತರಿಗೆ ಸಂತಸದ ಸುದ್ದಿ. ಕಲಬುರಗಿ, ಬೀದರ್, ಯಾದಗಿರಿ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವು ಹಾಲು ಉತ್ಪಾದಕರಿಗೆ (ರೈತರಿಗೆ) ಪ್ರತಿ ಲೀಟರ್ ಹಸುವಿನ ಹಾಲಿಗೆ ಎರಡು ರೂಪಾಯಿ ಹಾಗೂ ಎಮ್ಮೆಯ ಹಾಲಿಗೆ ಮೂರು ರೂಪಾಯಿ ಹೆಚ್ಚುವರಿಯಾಗಿ ನೀಡಲಿದೆ.

 ಹೌದು, ಕಳೆದ 25 ವರ್ಷದ ಹಾಲು ಒಕ್ಕೂಟದ ಇತಿಹಾಸದಲ್ಲಿಯೇ ಪ್ರಥಮ ಭಾರಿಗೆ ಬಂದಿರುವ ಲಾಭದಿಂದ ಹಾಲು ಉತ್ಪಾದಿಸುವ ರೈತರಿಗೆ ಪ್ರತಿ ಲೀಟರ್ ಹಸುವಿನ ಹಾಲಿಗೆ 2 ರೂ. ಹಾಗೂ ಎಮ್ಮೆ ಹಾಲಿಗೆ 3 ರೂ. ಗಳಂತೆ ಹೆಚ್ಚುವರಿ ದರವನ್ನು ನೀಡಲಾಗುತ್ತಿದೆ ಎಂದು ಕಲಬುರಗಿ, ಬೀದರ ಹಾಗೂ ಯಾದಗಿರಿ ಸಹಕಾರ ಹಾಲು ಉತ್ಪಾದಕ ಸಂಘಗಳ ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪ. ಕೆ. ಪಾಟೀಲ್ ತಿಳಿಸಿದ್ದಾರೆ.

ಕಲಬುರಗಿ, ಬೀದರ ಹಾಗೂ ಯಾದಗಿರಿ ಸಹಕಾರ ಹಾಲು ಉತ್ಪಾದಕ ಸಂಘಗಳ ಒಕ್ಕೂಟದ ತರಬೇತಿ ಕೇಂದ್ರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಸಕ್ತ 2019-2020 ನೇ ಸಾಲಿನಲ್ಲಿ ಒಕ್ಕೂಟವು 2 ಕೋಟಿ ರೂಪಾಯಿಗಳ ಲಾಭಗಳಿಸಿದೆ. ಆಡಳಿತ ಮಂಡಳಿ ತೀರ್ಮಾನದಂತೆ 2021 ರ ಫೆಬ್ರವರಿ 1 ರಿಂದ ಮೇ 31 ರವರೆಗೆ ಹಾಲು ಖರೀದಿಸುವ ದರದಲ್ಲಿ ಹೆಚ್ಚಳ ಮಾಡಲಿದ್ದೇವೆ. ನಂದಿನಿ ಗೋಲ್ಡ್ ಪಶು ಆಹಾರ ಪ್ರತಿ ಟನ್‍ಗೆ 1000 ರೂ.ಗಳ ರಿಯಾಯಿತಿ, ನಂದಿನಿ ಬೈಪಾಸ್ ಪಶು ಆಹಾರದಲ್ಲಿ ಪ್ರತಿ ಟನ್ 1000 ರೂ.ಗಳ ರಿಯಾಯಿತಿ ಹಾಗೂ ನಂದಿನಿ ಖನಿಜ ಮಿಶ್ರಣ ಪ್ರತಿ ಕೆ.ಜಿ.ಗೆ 10 ರೂಪಾಯಿಗಳ ದರವನ್ನು ಕಡಿತಗೊಳಿಸಿ ರಿಯಾಯಿತಿ ನೀಡಲಾಗುವುದು ಎಂದು ವಿವರಿಸಿದರು.

ಬಂದಿರುವ 2 ಕೋಟಿ ಲಾಭದಲ್ಲಿ ಒಕ್ಕೂಟದ ವತಿಯಿಂದ 1.25 ಕೋಟಿ ಹಣವನ್ನು ಮೂರು ಜಿಲ್ಲೆಗಳ ಒಟ್ಟು 11,200 ಹಾಲು ಉತ್ಪಾದಕ ರೈತರು ಪಡೆಯಲಿದ್ದಾರೆ. ಪ್ರಸ್ತುತ ಒಕ್ಕೂಟವು ಪ್ರತಿದಿನ 51 ಸಾವಿರ ಲೀಟರ್ ಹಾಲು ಶೇಖರಣೆಯಾಗುತ್ತಿದ್ದು, ಮುಂದಿನ 5 ತಿಂಗಳ ಬೇಸಿಗೆ ಕಾಲವಾಗಿದ್ದರಿಂದ ಮೇವಿನ ಕೊರತೆ ನಿಗಿಸಿಕೊಂಡು ಹಾಲು ಉತ್ಪಾದನಾ ವೆಚ್ಚ ಕಡಿಮೆ ಮಾಡಲು ರೂ. 1000 ಪಶು ಆಹಾರ ದರದಲ್ಲಿ ಕಡಿಮೆ ಮಾಡಲಾಗಿದೆ ಎಂದು ಹೇಳಿದರು.

ರೈತರರು ಹಸಿರು ಮೇವು ಬೆಳೆಯಲು ಮೇವಿನ ಬಿತ್ತನೆ ಕಡ್ಡಿಗಳನ್ನು ಉಚಿತವಾಗಿ ನೀಡಲಾಗುವುದು. ಇದರ ಸದುಪಯೋಗ ಪಡೆದು ರೈತರು ಗುಣಮಟ್ಟದ ಹಾಲು ನೀಡಬೇಕು. ಯಾವುದೇ ಸಮಸ್ಯೆ ಕಂಡುಬಂದಲ್ಲಿ ನಂದಿನಿಯ ಟೋಲ್ ಫ್ರೀ 080-66660000 ನಂಬರಗೆ ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದು ತಿಳಿಸಿದರು.