ವಾರದ ಪ್ರಮುಖ ಸುದ್ದಿಗಳ ಗುಚ್ಛವನ್ನು ಕೃಷಿ ಜಾಗರಣ ನಿಮಗಾಗಿ ನೀಡುತ್ತಿದೆ. ಈ ವಾರದ ಕೃಷಿ ಹಾಗೂ ಪ್ರಮುಖ ಸುದ್ದಿಗಳು ಇಲ್ಲಿವೆ.
- ರೈತರು ವ್ಯಾಪಾರಿ, ವಿಜ್ಞಾನಿ ಆಗದೆ ಲಾಭವಿಲ್ಲ: ಭಗವಂತ್ ಖೂಬಾ
- ಸೀಟ್‌ಬೆಲ್ಟ್ ಧರಿಸದ ಬ್ರಿಟನ್ ಪ್ರಧಾನಿ ರಿಷಿ ಸುನಕ್‌ಗೆ ಪೊಲೀಸರಿಂದ ದಂಡ!
- ದೆಹಲಿಯಲ್ಲಿ ಎರಡು ದಿನಗಳ ಸಿರಿಧಾನ್ಯ ಸಮ್ಮೇಳನ ಮತ್ತು ಎಕ್ಸ್‌ಪೋ
- ಮಹಿಳೆಯರು ಮನೆ ನಿರ್ವಹಣೆ ಮಾಡಲು ಸರ್ಕಾರದಿಂದ ಮಾಸಿಕ ಹಣ
- ಚಿಕ್ಕಬಳ್ಳಾಪುರದಲ್ಲಿ ಆಲೂಗಡ್ಡೆಗೆ ಅಂಗಮಾರಿ ರೋಗ: ರೈತ ಕಂಗಾಲು
- ಗುಜರಿ ವಾಹನಗಳ ವಿಲೇವಾರಿಗೆ ಸರ್ಕಾರದಿಂದ ಸಿದ್ಧತೆ
- ರಾಜ್ಯದ ಪ್ರತಿ ಬಿಪಿಎಲ್ ಕುಟುಂಬಕ್ಕೆ ಸಿಗಲಿದೆ ಮಾಸಿಕ 2 ಸಾವಿರ
- ಡೀಸೆಲ್ ಖರೀದಿಸಲು ರೈತರಿಗೆ ಸರ್ಕಾರದಿಂದ 1,250 ರೂಪಾಯಿ ಸಹಾಯಧನ
- ವಿದ್ಯುತ್ ಕಳ್ಳವು ಮಾಡುತ್ತಿದ್ದವರಿಗೆ ಬೆಸ್ಕಾಂ ಚುರುಕು: 2.59 ಕೋಟಿ ದಂಡ ಸಂಗ್ರಹ
- ಪ್ರತಿ ತಿಂಗಳು 2 ಸಾವಿರ ಸಹಾಯಧನ ನೀಡುವ ಗೃಹಲಕ್ಷ್ಮಿ ಯೋಜನೆ ಪರಿಚಯ
- ರಾಜ್ಯದಲ್ಲಿ ಅಂಗಾಂಗ ದಾನ ಹೆಚ್ಚಳ: 389 ಜನರಿಗೆ ಮರುಜೀವ
- ರಾಜ್ಯದಲ್ಲಿ ಹಾಲು ಸಂಗ್ರಹಣೆ ಕುಸಿತ: ಐದು ವರ್ಷಗಳಲ್ಲಿ ಇದೇ ಮೊದಲು
- ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಪರಿಷ್ಕೃತ ವೇಳಾಪಟ್ಟಿ ಪ್ರಕಟ
- ಕೃಷಿ ಯಂತ್ರೋಪಕರಣ ಖರೀದಿಸಲು ಅರ್ಜಿ ಆಹ್ವಾನ
-
ರಾಜ್ಯದಲ್ಲಿ ಇಲ್ಲಿಯವರೆಗೆ 3 ಲಕ್ಷಕ್ಕೂ ಹೆಚ್ಚು ಜಾನುವಾರುಗಳಲ್ಲಿ ಚರ್ಮಗಂಟು ಸೋಂಕು
ರೈತರು ರೈತರಷ್ಟೇ ಆಗದೆ ಸಂಶೋಧಕ, ವ್ಯಾಪಾರಿ ಹಾಗೂ ವಿಜ್ಞಾನಿಯೂ ಆಗಬೇಕು. ಇದು ಈಗಿನ ತುರ್ತು ಎಂದು ಕೇಂದ್ರದ ರಾಸಾಯನಿಕ, ರಸಗೊಬ್ಬರ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಭಗವಂತ್ ಖೂಬಾ ಹೇಳಿದರು. ಮೈಸೂರಿನ ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ಅಂಗವಾಗಿ ಶನಿವಾರ ನಡೆದ ಕೃಷಿ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಮಣ್ಣಿನ ಫಲವತ್ತತೆಯನ್ನು ರಸಗೊಬ್ಬರ ಹಾಳು ಮಾಡುತ್ತದೆ ಎನ್ನುವುದರಲ್ಲಿ ಅಲ್ಪ ಸತ್ಯಾಂಶವಿದೆ. ಆದರೆ, ವೈಜ್ಞಾನಿಕವಾಗಿ ಬಳಸಿದರೆ ಖಂಡಿತವಾಗಿಯೂ ಲಾಭವಿದೆ ಎಂದರು. ಕಾರ್ಯಕ್ರಮದಲ್ಲಿ ಸಿರಿಧಾನ್ಯದಿಂದ ತಿನಿಸು ತಯಾರಿಕೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
--------------
ಕಾರಿನಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಸೀಟ್ ಬೆಲ್ಟ್ ಧರಿಸದ ಕಾರಣಕ್ಕೆ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರಿಗೆ ಪೊಲೀಸರು ದಂಡ ವಿಧಿಸಿರುವ ಘಟನೆ ನಡೆದಿದೆ. ಉತ್ತರ ಇಂಗ್ಲೆಂಡ್‌ಗೆ ಕಾರಿನಲ್ಲಿ ಪ್ರಯಾಣಿಸುವಾಗ ಸಾಮಾಜಿಕ ಮಾಧ್ಯಮಕ್ಕಾಗಿ ವಿಡಿಯೊ ಚಿತ್ರೀಕರಣ ಮಾಡಲು ತಾತ್ಕಾಲಿಕವಾಗಿ ಸೀಟ್ ಬೆಲ್ಟ್ ಅನ್ನು ಅವರು ತೆಗೆದಿದ್ದರು. ದೇಶದಾದ್ಯಂತ ಹಮ್ಮಿಕೊಂಡಿರುವ 100ಕ್ಕೂ ಅಧಿಕ ಕಾರ್ಯಕ್ರಮಗಳ ಕುರಿತ ಪ್ರಚಾರಕ್ಕಾಗಿ ಮಾಡಿದ್ದ ವಿಡಿಯೊ ಇದಾಗಿತ್ತು. ಅದನ್ನು ಸುನಕ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು. ಅದರಲ್ಲಿ ಅವರು ಸೀಟ್ ಬೆಲ್ಟ್ ಧರಿಸದಿರುವುದನ್ನು ಸಾರ್ವಜನಿಕರು ಗಮನಿಸಿದ್ದರು. ಈ ವಿಷಯದ ಬಗ್ಗೆ ತನಿಖೆ ಮಾಡುವುದಾಗಿ ಪೊಲೀಸರು ತಿಳಿಸಿದ್ದರು. ಇದೀಗ ಈ ಪ್ರಕರಣ ವಿವಾದ ಸ್ವರೂಪವನ್ನು ಪಡೆದುಕೊಂಡಿದ್ದು, ಈ ಪ್ರಮಾದಕ್ಕಾಗಿ ರಿಷಿ ಸುನಕ್ ಅವರು ಕ್ಷಮೆಯನ್ನೂ ಕೇಳಿದ್ದಾರೆ. ಬ್ರಿಟನ್‌ನಲ್ಲಿ ವೈದ್ಯಕೀಯ ಕಾರಣಗಳನ್ನು ಹೊರತುಪಡಿಸಿ, ಕಾರಿನ ಸೀಟ್‌ಬೆಲ್ಟ್ ಧರಿಸದವರಿಗೆ ಸ್ಥಳದಲ್ಲೇ 100 ಪೌಂಡ್ ದಂಡ ವಿಧಿಸಲಾಗುತ್ತದೆ. ಪ್ರಕರಣ ನ್ಯಾಯಾಲಯಕ್ಕೆ ಹೋದರೆ 500 ಪೌಂಡ್ ದಂಡ ಪಾವತಿಸಬೇಕು ಎನ್ನುವ ನಿಯಮ ಜಾರಿಯಲ್ಲಿದೆ. ಪ್ರಧಾನಿ ಬೋರಿಸ್ ಜಾನ್ಸನ್ ಅವರೊಂದಿಗೆ ಕೋವಿಡ್ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪೊಲೀಸರು ಸುನಕ್ ಅವರಿಗೆ ದಂಡ ವಿಧಿಸಿದರು. ಅದಾದ ನಂತರ ಎರಡನೇ ಬಾರಿಗೆ ಸುನಕ್ ಅವರಿಗೆ ಪೊಲೀಸರು ದಂಡ ವಿಧಿಸಿದ್ದಾರೆ.
--------------
ಸಿರಿಧಾನ್ಯಗಳು ಮತ್ತು ಸಿರಿಧಾನ್ಯ ಮೌಲ್ಯವರ್ಧಿತ ಉತ್ಪನ್ನಗಳಿಗೆ ಬದ್ಧವಾಗಿರುವ ಭಾರತದ ಮೊದಲ ಅಗ್ರಿಟೆಕ್ ಸ್ಟಾರ್ಟ್ಅಪ್, ಮಿಲೆಟ್ ಮಾರ್ಟ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ಸಹಯೋಗದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಸಿರಿಧಾನ್ಯ 2023ರ ರಾಷ್ಟ್ರೀಯ ಸಮ್ಮೇಳನ ದೆಹಲಿಯಲ್ಲಿ ಪ್ರಾರಂಭವಾಗಿದೆ. ಈ ಸಮ್ಮೇಳನ ಮತ್ತು ವಸ್ತುಪ್ರದರ್ಶನವು ಗ್ರಾಮೀಣ ಭಾಗದ ಉದ್ಯಮಶೀಲತೆ ಅಭಿವೃದ್ಧಿಯನ್ನು ಉತ್ತೇಜಿಸಲು ಎಲ್ಲಾ ಪಾಲುದಾರರನ್ನು ಒಂದೇ ವೇದಿಕೆಯಡಿ ತರುತ್ತಿದೆ. ಅಲ್ಲದೇ ಗ್ರಾಮೀಣ ಅಭಿವೃದ್ಧಿ ಚಟುವಟಿಕೆಗಳಿಂದ ವರ್ಧಿಸಲ್ಪಟ್ಟ ಸಿರಿಧಾನ್ಯ ಆಧಾರಿತ ಜೀವನೋಪಾಯವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಎರಡು ದಿನಗಳ ಸಮ್ಮೇಳನ ಮತ್ತು ಎಕ್ಸ್‌ಪೋ ಟಾಲ್ಕಟೋರಾ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ವಿಷಯ ಪರಿಣಿತ ಡಾ.ಸುಧಾಂಶು ಕಾರ್ಯದರ್ಶಿ ಉಪಸ್ಥಿತರಿದ್ದರು. ಸಂಸ್ಥೆಗಳು ಮತ್ತು ಸಂಸ್ಥಾಪಕರಿಗೆ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿವೃದ್ಧಿಗಾಗಿ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಗುತ್ತದೆ.
--------------
ಮಹಿಳೆಯರು ಮನೆ ನಿರ್ವಹಣೆ ಮಾಡಲು ಆರ್ಥಿಕ ನೆರವು ನೀಡುವ ಯೋಜನೆಯನ್ನು ಮುಂದಿನ ಬಜೆಟ್‌ನಲ್ಲಿ ಘೋಷಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಮುಂದಿನ ಬಜೆಟ್‌ನಲ್ಲಿ ಜನಪರ ಯೋಜನೆಗಳನ್ನು ಪರಿಚಯಿಸಲು ಸರ್ಕಾರವು ಸಿದ್ಧತೆ ಮಾಡಿಕೊಳ್ಳುತ್ತಿದೆ. ಒಂದು ಕುಟುಂಬದ ಮಹಿಳೆ ಸ್ವತಂತ್ರವಾಗಿ ಕನಿಷ್ಠ ಮನೆ ನಿರ್ವಹಣೆಗೆ ಅಗತ್ಯವಿರುವ ಆರ್ಥಿಕ ನೆರವು ನೀಡಲಾಗುವುದು. ಪ್ರತಿ ಕುಟುಂಬಕ್ಕೆ ಮನೆ ನಡೆಸಲು ವಿಶೇಷ ಕಾರ್ಯಕ್ರಮವನ್ನು ಹೆಣ್ಣು ಮಕ್ಕಳಿಗೆ ನೀಡಲಾಗುವುದು. ಪ್ರತಿ ಕುಟುಂಬದ ಅಗತ್ಯವನ್ನು ನೋಡಿಕೊಂಡು ಒಂದು ಸಾವಿರ, 1500, 2 ಸಾವಿರ ಅಥವಾ ಎಷ್ಟು ವೆಚ್ಚವಾಗುತ್ತದೆ ಎನ್ನುವುದನ್ನು ಪರಿಗಣಿಸಿ ಮನೆಯ ಜವಾಬ್ದಾರಿ ನೋಡಿಕೊಳ್ಳುವ ಮಹಿಳೆಗೆ ಆರ್ಥಿಕ ನೆರವು ನೀಡಲಾಗುವುದು ಎಂದಿದ್ದಾರೆ.
--------------
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪ್ರಮುಖ ತೋಟಗಾರಿಕೆ ಬೆಳೆಯಾದ ಆಲೂಗಡ್ಡೆ ಬೆಳೆಯಲ್ಲಿ ಅಂಗಮಾರಿ ರೋಗ ಕಾಣಿಸಿಕೊಂಡಿರುವುದರಿಂದ ರೈತರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಜಿಲ್ಲೆಯ ಬಹುತೇಕ ರೈತರು ಪ್ರತಿ ವರ್ಷ ಅಕ್ಟೋಬರ್ ತಿಂಗಳಿನಿಂದ ಜನವರಿ ಅಂತ್ಯದವರೆಗೂ ಆಲೂಗಡ್ಡೆ ಬಿತ್ತನೆ ಮಾಡುತ್ತಾರೆ. ಈ ಬಾರಿಯೂ ರೈತರು ನೂರಾರು ಹೆಕ್ಟೇರ್‌ನಲ್ಲಿ ಆಲೂಗಡ್ಡೆ ಬಿತ್ತನೆ ಮಾಡಿದ್ದಾರೆ. ಆದರೆ, ಡಿಸೆಂಬರ್ ತಿಂಗಳ ಮಧ್ಯ ಭಾಗದಲ್ಲಿ ಕಾಣಿಸಿಕೊಂಡ ಮಾಂಡೌಸ್ ಚಂಡಮಾರುತದಿಂದಾಗಿ ಸಂಕಷ್ಟ ಎದುರಾಗಿದೆ. ನಿರಂತರ ಮಳೆಯಿಂದಾಗಿ ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿ ಹೂ ಬಿಡುವ ಮುನ್ನವೇ ಆಲೂಗಡ್ಡೆ ಬೆಳೆಗೆ ಅಂಗಮಾರಿ ರೋಗ ಕಾಣಿಸಿಕೊಂಡಿದೆ.
---------------
ರಾಜ್ಯದಲ್ಲಿ ಹಳೆಯ ವಾಹನಗಳನ್ನು ಗುಜರಿಗೆ ಹಾಕಲು ಸರ್ಕಾರವು ಸಿದ್ಧತೆ ಮಾಡಿಕೊಳ್ಳುತ್ತಿದ್ದು, 15 ವರ್ಷ ಮೇಲ್ಪಟ್ಟ ವಾಣಿಜ್ಯ ವಾಹನಗಳು ಹಾಗೂ 20 ವರ್ಷ ಮೇಲ್ಪಟ್ಟ ಖಾಸಗಿ ವಾಹನಗಳನ್ನು ನಿಷೇಧಿಸಲು ಸಿದ್ಧತೆ ಮಾಡಿಕೊಂಡಿದೆ. ಇದನ್ನು ಮೊದಲು ಬೆಂಗಳೂರಿನಲ್ಲಿ ಪರಿಣಾಮಕಾರಿಯಾಗಿ ಜಾರಿ ಮಾಡಲು ಉದ್ದೇಶಿಸಲಾಗಿದೆ. ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ವಿಪರೀತವಾಗಿದೆ. ಅಲ್ಲದೇ ಹಳೆ ವಾಹನಗಳಿಂದ ತೀವ್ರವಾದ ಮಾಲಿನ್ಯ ಸೃಷ್ಟಿಯಾಗುತ್ತಿದ್ದು, ಇದನ್ನು ತಪ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಗುಜರಿ ನೀತಿಯನ್ನು ಜಾರಿ ಮಾಡಲು ಮಾಸ್ಟರ್ ಪ್ಲಾನ್ ಮಾಡಿದೆ. ಈ ಸಂಬಂಧ ಸರ್ಕಾರ ಗುಜರಿಗೆ ನೀತಿಗೆ ಅನುಮೋದನೆ ನೀಡಿದ್ದು, ತಿಂಗಳೊಳಗೆ ಅನುಷ್ಠಾನಕ್ಕೆ ಯೋಜನೆ ರೂಪಿಸಿದೆ.
----------
ರಾಜ್ಯದ ಪ್ರತಿ ಬಿಪಿಎಲ್ ಕುಟುಂಬಗಳಿಗೆ ಮಾಸಿಕ 2000 ನೆರವು ನೀಡಲು ನಿರ್ಧರಿಸಲಾಗಿದ್ದು, ಬರುವ ಬಜೆಟ್‌ನಲ್ಲಿ ಯೋಜನೆ ಪರಿಚಯಿಸುವುದಾಗಿ ಕಂದಾಯ ಸಚಿವ ಆರ್. ಅಶೋಕ ಘೋಷಿಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೆಚ್ಚಿನ ಮಾಹಿತಿ ನೀಡಲಿದ್ದಾರೆ ಎಂದರು. ಚುನಾವಣೆ ಸಮೀಪಸುತ್ತಿದ್ದಂತೆಯೇ ಬಹುತೇಕ ಪಕ್ಷಗಳನ್ನು ಜನರನ್ನು ಸೆಳೆಯಲು ವಿಭಿನ್ನವಾದ ಯೋಜನೆಗಳನ್ನು ಘೋಷಿಸುತ್ತಿವೆ. ಇತ್ತೀಚೆಗಷ್ಟೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗೃಹಿಣಿಯರಿಗೆ ಮನೆ ನಿರ್ವಹಣೆ ಮಾಡಲು ಆರ್ಥಿಕ ನೆರವು ನೀಡುವ ಸುಳಿವು ನೀಡಿದ್ದರು. ಇದರ ಬೆನ್ನಲ್ಲೇ ಕಾಂಗ್ರೆಸ್ ಗೃಹಿಣಿಯರಿಗೆ 2 ಸಾವಿರ ರೂಪಾಯಿ ಆರ್ಥಿಕ ನೆರವು ನೀಡುವುದಾಗಿ ಘೋಷಣೆ ಮಾಡಿತ್ತು.
----------
ರೈತಾಪಿ ಕೃಷಿಕರ ಮೇಲಿನ ಹೊರೆ ತಪ್ಪಿಸಲು ಬಜೆಟ್‌ನಲ್ಲಿ ಘೋಷಿಸಿ
ದಂತೆ ರೈತ ಶಕ್ತಿ ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶೀಘ್ರ ಚಾಲನೆ ನೀಡಲಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ ತಿಳಿಸಿದ್ದಾರೆ. ಪ್ರತಿ ಎಕರೆಗೆ 250 ರೂಪಾಯಿಯಂತೆ ಗರಿಷ್ಠ ಐದು ಎಕರೆಗೆ 1,250 ರೂಪಾಯಿಯಂತೆ ನೇರ ನಗದು ವರ್ಗಾವಣೆ ಮೂಲಕ ಡೀಸೆಲ್‌ಗೆ ಸಹಾಯಧನ ನೀಡುವ ರೈತ ಶಕ್ತಿ ಯೋಜನೆಗೆ ಇದೇ ತಿಂಗಳ ಅಂತ್ಯದಲ್ಲಿ ಚಾಲನೆ ನೀಡಲಿದ್ದಾರೆ ಎಂದರು. ಈ ಕುರಿತು ಮಾತನಾಡಿದ ಅವರು, 45 ಲಕ್ಷಕ್ಕೂ ಹೆಚ್ಚು ರೈತರ ಖಾತೆಗೆ ಮುಖ್ಯಮಂತ್ರಿ ಸಹಾಯಧನ ಬಿಡುಗಡೆ ಮಾಡಲಿದ್ದಾರೆ. ಇಲಾಖೆಯ ಎಲ್ಲ ಯೋಜನೆಗಳನ್ನು ವೆಬ್‌ಸೈಟ್ ಮೂಲಕ ರೈತರ ನೋಂದಣಿ ಗುರುತಿನ ಸಂಖ್ಯೆ ಬಳಸಿ ಕಿಸಾನ್ ತಂತ್ರಾಂಶದ ಮೂಲಕ ಅನುಷ್ಠಾನ ಮಾಡಲಾಗುತ್ತಿದೆ. ರೈತರು ಪ್ರತ್ಯೇಕವಾಗಿ ಅರ್ಜಿಸಲ್ಲಿಸುವ ಅಗತ್ಯವಿಲ್ಲ. ವೆಬ್‌ಸೈಟ್‌ನಲ್ಲಿ ಲಭ್ಯವಿರುವ ದತ್ತಾಂಶದ ಆಧಾರದಲ್ಲಿ ದಾಖಲೆಗಳನ್ನು ಪರಿಶೀಲಿಸಲಾಗುವುದು. ವೆಬ್‌ಸೈಟ್‌ನಲ್ಲಿ ನಮೂದಿಸಿದ ಕೃಷಿ ಭೂಮಿಯ ವಿಸ್ತೀರ್ಣದ ಆಧಾರದಲ್ಲಿ ರೈತರ ಖಾತೆಗೆ ಡೀಸೆಲ್ ಸಹಾಯಧನ ವರ್ಗಾಯಿಸಲಾಗುವುದು ಎಂದು ತಿಳಿಸಿದ್ದಾರೆ.
----------
PM Kisan| ಕೇಂದ್ರ ಸರ್ಕಾರದಿಂದ ಸಿಹಿಸುದ್ದಿ: ಪಿಎಂ ಕಿಸಾನ್ ಮೊತ್ತದಲ್ಲಿ ಹೆಚ್ಚಳ ಸಾಧ್ಯತೆ!
----------
ವಿದ್ಯುತ್ ಕಳ್ಳತನ ಮಾಡುತ್ತಿದ್ದವರಿಗೆ ಬೆಸ್ಕಾಂ ಚುರುಕು ಮುಟ್ಟಿಸಿದ್ದು, 2.59 ಕೋಟಿ ದಂಡ ಸಂಗ್ರಹಿಸಿದೆ. ಈಗಾಗಲೇ ವಿದ್ಯುತ್ ಕಳ್ಳತನ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಬೆಸ್ಕಾಂನ ಜಾಗೃತ ದಳ ಕಳೆದ 4 ತಿಂಗಳಲ್ಲಿ 10,908 ವಿದ್ಯುತ್ ಸ್ಥಾವರಗಳ ತಪಾಸಣೆ ನಡೆಸಿದೆ. ಅಲ್ಲದೇ ಕಳ್ಳತನ ಮಾಡಿದ ಗ್ರಾಹಕರಿಗೆ ಬರೋಬ್ಬರಿ 2.59 ಕೋಟಿ ರೂಪಾಯಿ ದಂಡ ವಿಧಿಸಿದೆ. ಬಾಕಿ ವಿದ್ಯುತ್ ಬಿಲ್ ವಸೂಲಿಗೂ ಬೆಸ್ಕಾಂ ಕ್ರಮಗೊಂಡಿದ್ದು, ಕಳೆದ 3 ತಿಂಗಳಲ್ಲಿ ಬಾಕಿ ಇದ್ದ 1,417.45 ಕೋಟಿ ರೂಪಾಯಿಯಲ್ಲಿ 358.3 ಕೋಟಿ ರೂಪಾಯಿ ಬಿಲ್ ಮೊತ್ತವನ್ನು ಸಂಗ್ರಹಿಸಿದೆ. ಬಿಲ್ ಪಾವತಿಸದ ಸುಮಾರು 23 ಲಕ್ಷ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ.
-------------------
ಪ್ರತಿ ಕುಟುಂಬದಲ್ಲಿ ಒಬ್ಬ ಗೃಹಿಣಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ಸಹಾಯಧನ ನೀಡುವ ಗೃಹಲಕ್ಷ್ಮಿ ಯೋಜನೆಯನ್ನು ಕಾಂಗ್ರೆಸ್ ಪ್ರಕಟಿಸಿದೆ. ನಗರದ ಅರಮನೆ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ 'ನಾ ನಾಯಕಿ' ಸಮಾವೇಶದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಈ ಯೋಜನೆಗೆ ಸಂಬಂಧಿಸಿದ ಭಿತ್ತ ಪತ್ರ ಅನಾವರಣ ಮೂಲಕ ಅಧಿಕೃತವಾಗಿ ಯೋಜನೆಯನ್ನು ಘೋಷಿಸಿದರು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಪಡೆದು ಅಧಿಕಾರಕ್ಕೇರಿದರೆ ರಾಜ್ಯದ ಪ್ರತಿ ಕುಟುಂಬದ ಯಜಮಾನಿಗೆ ತಿಂಗಳಿಗೆ ರೂ. 2,000 ನೀಡಲಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
-------------------
ರಾಜ್ಯದಲ್ಲಿ ಅಂಗಾಂಗ ದಾನ ಮಾಡುವರರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಕಳೆದ ಒಂದೇ ವರ್ಷದಲ್ಲಿ 389 ಜನರಿಗೆ ಮರು ಜೀವ ದೊರೆತಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ರಾಜ್ಯದಲ್ಲಿ ಒಟ್ಟು 19 ಅಂಗಾಂಗ ದಾನ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಇದಕ್ಕೂ ಮೊದಲು ರಾಜ್ಯದಲ್ಲಿ ಒಂದೇ ಅಂಗಾಗ ದಾನ ಕೇಂದ್ರ ಇತ್ತು ಎಂದಿದ್ದಾರೆ. ಇನ್ನು ಕರ್ನಾಟಕದಲ್ಲಿ ಇತರರ ಜೀವ ಉಳಿಸಬಹುದಾದ ಅಂಗಾಂಗ ದಾನದ ಪ್ರಮಾಣ ಹೆಚ್ಚುತ್ತಿರುವುದು ಸಂತಸದ ಸಂಗತಿ. ಕಳೆದ ವರ್ಷ ನಡೆದ ಅಂಗಾಂಗ ದಾನಗಳಿಂದ ಸಂಕಷ್ಟದಲ್ಲಿದ್ದ 389 ಜನರಿಗೆ ಮರುಜೀವ ಸಿಕ್ಕಂತಾಗಿದೆ ಎಂದು ತಿಳಿಸಿದ್ದಾರೆ. ಅಕಾಲಿಕ ಮರಣ ಅಥವಾ ಅಪಘಾತದಲ್ಲಿ ಮೃತಪಟ್ಟ 389 ಜನರ ಅಂಗಾಂಗಗಳನ್ನು ಅವರ ಕುಟುಂಬದವರ ಅನುಮತಿ ಪಡೆದು ಸಂಕಷ್ಟದಲ್ಲಿ ಇರುವವರಿಗೆ ಅಳವಡಿಸಲಾಗುತ್ತಿದೆ. ಈ ಮೂಲಕ ರಾಜ್ಯದಲ್ಲಿ 389 ಜನ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
-------------------
ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಹಾಲು ಸಂಗ್ರಹಣೆಯಲ್ಲಿ ಕುಸಿತ ಕಂಡುಬಂದಿದೆ. ಇತ್ತೀಚಿನ ದಿನಗಳಲ್ಲಿ ಜಾನುವಾರುಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಚರ್ಮಗಂಟು, ಕಾಲುಬಾಯಿ ರೋಗ, ಮೇವಿನ ಕೊರತೆ ಸೇರಿದಂತೆ ಹಲವು ಕಾರಣಗಳಿಂದ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಹಾಲು ಸಂಗ್ರಹಣೆಯಲ್ಲಿ ಕುಸಿತ ಕಂಡಿದೆ. ಕೆಎಂಎಫ್ ನೀಡಿರುವ ಮಾಹಿತಿಯ ಅನ್ವಯ 2022 ಜುಲೈ ತಿಂಗಳಿಂದ ಪ್ರತಿನಿತ್ಯ 9-10 ಲಕ್ಷ ಲೀಟರ್ ಹಾಲು ಕಡಿಮೆ ಸಂಗ್ರಹವಾಗುತ್ತಿದೆ. ಕೆಎಂಎಫ್ ಅಧೀನದ 14 ಒಕ್ಕೂಟಗಳಿಂದ ನಿತ್ಯ ಸರಾಸರಿ 75.6 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. 2021-22ರಲ್ಲಿ 26 ಲಕ್ಷಕ್ಕೂ ಹೆಚ್ಚು ಹಾಲು ಉತ್ಪಾದಕರಿಂದ ಒಟ್ಟು 84.5 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿತ್ತು. ಚರ್ಮಗಂಟು ರೋಗ (ಎಲ್‌ಎಸ್‌ಡಿ), ಕಾಲು ಬಾಯಿ ರೋಗ (ಎಫ್‌ಎಂಡಿ), ಪ್ರವಾಹ, ಕಳಪೆ ಮೇವಿನಿಂದಾಗಿ ಹಾಲಿನ ಉತ್ಪಾದನೆ ಕುಸಿದಿದೆ. ಬೇಸಿಗೆಯಲ್ಲಿ ಹಸಿರು ಮೇವಿನ ಕೊರತೆ ಉಂಟಾಗಿ, ಹಾಲಿನ ಉತ್ಪಾದನೆ ಮತ್ತಷ್ಟು ಕುಸಿಯುವ ಆತಂಕವೂ ಎದುರಾಗಿದೆ. ಈ ಬೆಳವಣಿಗೆ ಹೈನುಗಾರಿಕೆಯನ್ನೇ ನೆಚ್ಚಿಕೊಂಡಿರುವವರಿಗೆ ಆತಂಕ ಮೂಡಿಸಿದೆ. ಇದು ಪರೋಕ್ಷವಾಗಿ ಗ್ರಾಹಕರಿಗೂ ಹೊರೆಯಾಗುವ ಸಾಧ್ಯತೆ ಇದೆ. ಹಾಲಿನ ಸಂಗ್ರಹ ದಿಢೀರ್ ಕುಸಿತದಿಂದಾಗಿ ಉಪ ಉತ್ಪನ್ನಗಳಾದ ತುಪ್ಪ, ಬೆಣ್ಣೆ, ಪನೀರ್ ಮತ್ತು ಇತರೆ ಉತ್ಪನ್ನಗಳ ಬೆಲೆ ಹೆಚ್ಚಲಿದೆ. ಕೆಎಂಎಫ್ ಅಧೀನದ 16 ಹಾಲು ಒಕ್ಕೂಟಗಳು ಕ್ಷೀರ ಭಾಗ್ಯ ಯೋಜನೆಯಡಿ ಶಾಲೆಗಳಿಗೆ ಸರಬರಾಜು ಮಾಡುವ ಹಾಲಿನ ಪುಡಿ ಉತ್ಪಾದನೆಯೂ ಕುಸಿಯಲಿದೆ. ಇನ್ನು ಈಗಾಗಲೇ, ಶಾಲೆಗಳಲ್ಲಿ ಏಪ್ರಿಲ್‌ವರೆಗೆ ಸಾಕಷ್ಟು ದಾಸ್ತಾನು ಇರುವುದರಿಂದ ಹಾಲಿನ ಪುಡಿ ಬೇಡಿಕೆ ಸ್ಥಿರವಾಗಿದೆ. ಹಾಲಿಗೆ ಬೇಡಿಕೆ ಹೆಚ್ಚುತ್ತಿರುವ ಸಂದರ್ಭದಲ್ಲೇ ಉತ್ಪಾದನೆ ಕುಸಿದಿದೆ. ಪೂರೈಕೆ ಕೊರತೆಯಿಂದಾಗಿ ಸಣ್ಣ ಚಿಲ್ಲರೆ ಮಳಿಗೆಗಳು ಮಾರಾಟ ಸ್ಥಗಿತಗೊಳಿಸಿವೆ.
-------------------
2022- 2023ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಯ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದ್ದು, ಪರಿಷ್ಕೃತ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಏ.4ರಂದು ಮಹಾವೀರ ಜಯಂತಿಯಂದು ಇದ್ದು, ರಜೆ ಘೋಷಿಸಿರುವ ಹಿನ್ನೆಲೆಯಲ್ಲಿ ಪರೀಕ್ಷಾ ವೇಳಾಪಟ್ಟಿಯನ್ನು ಹೊಸದಾಗಿ ಬದಲಾಯಿ
ಸಲಾಗಿದೆ. ಮಾರ್ಚ್ 31 ರಿಂದ ಏಪ್ರಿಲ್ 15 ವರೆಗೆ ಪರೀಕ್ಷೆ ನಡೆಸಲು ದಿನಾಂಕ ನಿಗದಿ ಮಾಡಲಾಗಿದೆ. ಈ ಹಿಂದೆ ಘೋಷಿಸಿದಂತೆ ಮಾರ್ಚ್ 31 ರಿಂದ ಏಪ್ರಿಲ್ 15 ರವರೆಗೆ ಪರೀಕ್ಷೆ ನಡೆಯಲಿದ್ದು, ಏಪ್ರಿಲ್ 4 ರಂದು ನಡೆಯಬೇಕಿದ್ದ ಗಣಿತ ಮತ್ತು ಸಮಾಜಶಾಸ್ತ್ರ ಪರೀಕ್ಷೆಗಳು ಈಗ ಏಪ್ರಿಲ್ 3 ರಂದು ನಡೆಯಲಿದೆ. ಏಪ್ರಿಲ್ 4 ರಂದು ಸರ್ಕಾರಿ ರಜೆ ಇರುವ ಕಾರಣ ಈ ಹಿಂದೆ ಪ್ರಕಟಿಸಿದ್ದ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ನಿರ್ದೇಶಕ ಗೋಪಾಲಕೃಷ್ಣ ಎಚ್.ಎನ್ ತಿಳಿಸಿದ್ದಾರೆ.
-------------------
ಕೃಷಿ ಯಂತ್ರೋಪಕರಣ ಖರೀದಿಸಲು ಹಾಗೂ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ವಿವಿಧ ಘಟಕಗಳಡಿ ತೋಟಗಾರಿಕೆ ಬೆಳೆ ಬೆಳೆಯುವ ರೈತರಿಗೆ ಸಹಾಯ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ತೋಟಗಾರಿಕೆ ಇಲಾಖೆಯ 2022-23ನೇ ಸಾಲಿನ ರಾಷ್ಟ್ರೀಯ ಕೃಷಿ ವಿಸ್ತರಣೆ ಮತ್ತು ತಂತ್ರಜ್ಞಾನ ಅಭಿಯಾನ ಯೋಜನೆ, ಕೃಷಿ ಯಾಂತ್ರೀಕರಣ ಉಪ ಅಭಿಯಾನದಡಿ ಕೃಷಿ ಯಂತ್ರೋಪಕರಣ ಖರೀದಿಸುವ ತೋಟಗಾರಿಕೆ ಬೆಳೆ ರೈತರಿಗೆ ಸಹಾಯಧನ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಪ್ರಸಕ್ತ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ವಿವಿಧ ಘಟಕಗಳಡಿ ತೋಟಗಾರಿಕೆ ಬೆಳೆ ಬೆಳೆಯುವ ರೈತರಿಗೆ ಸಹಾಯಧನ ಸೌಲಭ್ಯ ನೀಡಲಾಗುವುದು. ರಾಷ್ಟ್ರೀಯ ಕೃಷಿ ವಿಸ್ತರಣೆ ಮತ್ತು ತಂತ್ರಜ್ಞಾನ ಅಭಿಯಾನ ಯೋಜನೆ ಮತ್ತು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಆಸಕ್ತ ರೈತರು ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-------------------
ರಾಜ್ಯದಲ್ಲಿ ಇಲ್ಲಿಯವರೆಗೆ 3 ಲಕ್ಷಕ್ಕೂ ಹೆಚ್ಚು ಜಾನುವಾರುಗಳಲ್ಲಿ ಚರ್ಮಗಂಟು ಸೋಂಕು ಕಾಣಿಸಿಕೊಂಡಿರುವುದು ವರದಿಯಾಗಿದೆ. ಈ ವೈರಸ್ ರಾಜ್ಯದಲ್ಲಿ 27 ಸಾವಿರ ಜಾನುವಾರುಗಳನ್ನು ಬಲಿ ಪಡೆದುಕೊಂಡಿದೆ. ಎಲ್‌ಎಸ್‌ಡಿ ಝೂನೋಟಿಕ್ ಕಾಯಿಲೆಯಲ್ಲ. ಆದರೆ, ಸೋಂಕು ಪ್ರಾಣಿಗಳ ಅಥವಾ ಸೋಂಕುಳ್ಳ ಪ್ರದೇಶದಿಂದ ಹಾಲನ್ನು ಮಾನವ ಬಳಕೆಗಾಗಿ ಕುದಿಸಬೇಕು ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ವೈರಸ್ ನೇರ ಸಂಪರ್ಕ, ಸೊಳ್ಳೆಗಳು, ನೊಣಗಳು ಮತ್ತು ಉಣ್ಣಿಗಳಂತಹ ವಾಹಕಗಳು, ಕಲುಷಿತ ನೀರು ಮತ್ತು ಆಹಾರದ ಮೂಲಕ ಹರಡುತ್ತದೆ. ಭಾರತದಲ್ಲಿ, ರಾಜಸ್ಥಾನ ಮತ್ತು ಗುಜರಾತ್‌ನಂತಹ ರಾಜ್ಯಗಳು ಕಳೆದ ವರ್ಷ ಶೇಕಡಾ 10ರಷ್ಟು ಹೆಚ್ಚಿನ ಮರಣ ಪ್ರಮಾಣವನ್ನು ವರದಿ ಮಾಡಿದೆ. ವೈರಸ್ ಹರಡುವಿಕೆಯನ್ನು ನಿಯಂತ್ರಿಸುವ ಏಕೈಕ ಮಾರ್ಗವೆಂದರೆ ಸಾಮೂಹಿಕ ಲಸಿಕೆಯಾಗಿದೆ ಎಂದು ತಿಳಿಸಿದ್ದಾರೆ.
--------------------