News

ಅಕ್ಕಡಿ ಬೆಳೆ ಬೆಳೆದರೆ ರೈತರ ಆದಾಯ ವೃದ್ಧಿ: ಸಂಸದ ಜಿ.ಎಂ.ಸಿದ್ದೇಶ್ವರ

11 June, 2021 8:43 PM IST By:
ಆನಗೋಡು ರೈತ ಸಂಪರ್ಕ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ ಅವರು ರೈತರಿಗೆ ತೊಗರಿ ಬೀಜದ ಕಿರುಚೀಲಗಳನ್ನು ವಿತರಿಸಿದರು.

ಆಹಾರ ಉತ್ಪಾದನೆಯಲ್ಲಿ ದೇಶವು ಸ್ವಾವಲಂಬನೆ ಸಾಧಿಸಲು ಹಾಗೂ ರೈತರು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುವ ದೃಷ್ಟಿಯಿಂದ ಅಕ್ಕಡಿ ಬೆಳೆಗಳನ್ನು ಬೆಳೆಯುವುದು ಅತಿ ಮಖ್ಯವಾಗಿದ್ದು, ರೈತರು ತಾವು ಬಿತ್ತುವ ಮೆಕ್ಕೆಜೋಳ ಮತ್ತಿತರ ಪ್ರಮುಖ ಬೆಳೆಗಳ ನಡುವೆ ಅಕ್ಕಡಿ ಬೆಳೆಗಳನ್ನು ಬೆಳೆಯಲು ಮುಂದಾಗಬೇಕು ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಮನವಿ ಮಾಡಿದರು.

ದಾವಣಗೆರೆ ಜಿಲ್ಲೆಯ ಆನಗೋಡು ರೈತ ಸಂಪರ್ಕ ಕೇಂದ್ರದ ಆವರಣದಲ್ಲಿ ಹಮ್ಮಿಕೊಂಡಿದ್ದ ರೈತರಿಗೆ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯ ತರಬೇತಿ ಮತ್ತು ಬೀಜದ ಕಿರುಚೀಲ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ದಾವಣಗೆರೆ ಜಿಲ್ಲೆ ವ್ಯಾಪ್ತಿಯಲ್ಲಿ ಸುಮಾರು ಹತ್ತು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ದ್ವಿದಳ ಧಾನ್ಯ ಬೆಳೆಯನ್ನು ಪ್ರೋತ್ಸಾಹಿಸಲು 2 ಕೆ.ಜಿ ತೂಕದ ತೊಗರಿ ಕಿರು ಚೀಲಗಳನ್ನು ವಿತರಿಸಲಾಗುತ್ತಿದೆ. ರೈತರು ಈ ಯೋಜನೆಯ ಸದುಪಯೋಗ ಪಡೆದು ಮೆಕ್ಕೆಜೋಳ ಬೆಳೆಯೊಂದಿಗೆ ಅಕ್ಕಡಿ ಬೆಳೆಗಳನ್ನು ಬೆಳೆದು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಬೇಕೆಂದು ವಿನಂತಿ ಮಾಡಿದರು.

ಆಹಾರ ಉತ್ಪಾದನೆಯಲ್ಲಿ ಭಾರತ ಸ್ವಾವಲಂಬನೆ ಸಾಧಿಸಲು ಮತ್ತು ಹೆಚ್ಚಿನ ಪ್ರಮಾಣದಲ್ಲಿ ಗುಣಮಟ್ಟದ ಆಹಾರ ಧಾನ್ಯಗಳನ್ನು ಉತ್ಪಾದನೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ರೈತರಿಗಾಗಿ ರಾಷ್ಟ್ರೀಯ ಆಹಾರ ಭದ್ರತಾ ಯೋಜನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ದಾವಣಗೆರೆ ಜಿಲ್ಲೆಗೆ ಬೇಡಿಕೆ ಇರುವಷ್ಟು ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳ ದಾಸ್ತಾನು ಇರಿಸಲಾಗಿದ್ದು, ಜಿಲ್ಲೆಯಲ್ಲಿ ಇಲ್ಲಿಯವರೆಗೂ ಬೀಜ ಮತ್ತು ರಸಗೊಬ್ಬರ ಸಮಪರ್ಕವಾಗಿ ವಿತರಣೆಯಾಗುತ್ತಿದೆ. ಕೊರೊನಾ ಸೋಂಕಿನ ಸಂಕಷ್ಟದಿAದ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗದಿರಲಿ ಎಂಬ ಕಾರಣಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಕೆಲಸಗಳ ಮೇಲೆ ಯಾವುದೇ ನಿರ್ಬಂಧ ವಿಧಿಸಿಲ್ಲ. ಆದರೆ, ರೈತರು ಸ್ವಯಂ ಸುರಕ್ಷತೆಯ ಬಗ್ಗೆ ನಿರ್ಲಕ್ಷö್ಯವಹಿಸದೆ, ಕೋವಿಡ್ ನಿಯಮಗಳನ್ನು ಪಾಲಿಸಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ಅನವಶ್ಯಕವಾಗಿ ರಸಗೊಬ್ಬರ ಉಪಯೋಗಿಸದೆ ಅವಶ್ಯವಿರುವಷ್ಟು ಮಾತ್ರ ಖರೀದಿಸಬೇಕು. ಕೃಷಿ ಅಧಿಕಾರಿಗಳು ತಜ್ಞರು ಶಿಫಾರಸು ಮಮಾಡುವಷ್ಟು ಪ್ರಮಾಣದ ರಸಗೊಬ್ಬರವನ್ನು ಮಾತ್ರ ಬೆಳೆಗಳಿಗೆ ನೀಡಬೇಕು ಎಂದು ಸಲಹೆ ನೀಡಿದರು.

ಲಕ್ಷ ಕ್ವಿಂಟರ್ ಉತ್ಪಾದನೆ ಗುರಿ

ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ಅವರು ಮಾತನಾಡಿ, ಜಿಲ್ಲೆಯು ಕರ್ನಾಟಕದ ಮೆಕ್ಕೆಜೋಳದ ಕಣಜವಾಗಿದೆ. ಹಿಂದಿನ ದಿನಗಳಲ್ಲಿ ಮೆಕ್ಕೆಜೋಳ ಹಾಗೂ ಜೋಳದೊಂದಿಗೆ ಅಕ್ಕಡಿ ಬೆಳೆಯಾಗಿ ತೊಗರಿ, ಅಲಸಂದಿ, ಹೆಸರು ಮತ್ತು ಉದ್ದು ಬೆಳೆಗಳನ್ನು ಬೆಳೆಯುವ ಪದ್ಧತಿ ಇತ್ತು. ಕಾಲ ಕ್ರಮೇಣ ರೈತರು ಏಕ ಬೆಳೆ ಪದ್ಧತಿಗೆ ಮಾರು ಹೋಗಿದ್ದಾರೆ. ಆದ್ದರಿಂದ ಜಿಲ್ಲೆಯ ರೈತರಿಗೆ ಏನಾದರೊಂದು ವಿಶೇಷ ಯೋಜನೆಯನ್ನು ಇಲಾಖೆಯಿಂದ ಹಮ್ಮಿಕೊಳ್ಳಬೇಕು ಎಂದು ಯೋಚಿಸಿ ಎಲ್ಲಾ ಜನಪ್ರತಿನಿಧಿಗಳ ಸಹಕಾರದಿಂದ ನಮ್ಮ ಜಿಲ್ಲೆಗೆ ಸುಮಾರು 16 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಒಂದು ಲಕ್ಷ ಕ್ವಿಂಟಾಲ್ ತೊಗರಿ ಉತ್ಪಾದನೆಯ ಗುರಿಯೊಂದಿಗೆ ಈ ಕಾರ್ಯಕ್ರಮವನ್ನು ರೂಪಿಸಿ ಅನುಷ್ಠಾನ ಮಾಡುತ್ತಿದ್ದೇವೆ ಎಂದರು.

ಈ ಯೋಜನೆ ಯಶಸ್ಸಿಗೆ ಎಲ್ಲಾ ಅಧಿಕಾರಿಗಳು ಶ್ರಮ ವಹಿಸಿ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಈ ಬಾರಿ ಉತ್ತಮ ಮಳೆಯಾದರೆ ಯೋಜನೆಯು ಯಶಸ್ವಿಯಾಗುವುದರಲ್ಲಿ ಯಾವುದೇ ಅನುಮಾನಗಳಿಲ್ಲ. ಜೊತೆಗೆ ರೈತರು ಸಹ ಕೆಲ ತಾಂತ್ರಿಕತೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ತೊಗರಿ ಬೆಳೆಯು ಮೂವತ್ತರಿಂದ ನಲವತ್ತು ದಿನಗಳು ಇದ್ದಾಗ ಕುಡಿ ಚಿವುಟುವುದು. ಹೀಗೆ ಮಾಡುವುದರಿಂದ ರಂಬೆಗಳ ಸಂಖ್ಯೆ ಹೆಚ್ಚಾಗಿ ಇಳುವರಿಯಲ್ಲಿ ಗಣನೀಯ ಏರಿಕೆಯಾಗುತ್ತದೆ. ನಂತರ ಹೂವಾಡುವ ಹಂತದಲ್ಲಿ ಒಂದು ಕೀಟ ನಾಶಕ ಸಿಂಪರಣೆ ಮತ್ತು ಕಾಯಿ ಬಿಡುವಾಗ ಮತ್ತೊಂದು  ಸಿಂಪರಣೆ ಕೈಗೊಂಡಲ್ಲಿ, ಅಕ್ಕಡಿ ಬೆಳೆಯಲ್ಲಿ ಎಕರೆಗೆ ಕನಿಷ್ಠ ಮೂರು ಕ್ವಿಂಟಾಲ್ ಮತ್ತು ಏಕ ಬೆಳೆ ಪದ್ಧತಿಯಲ್ಲಿ ಎಕರೆಗೆ ಕನಿಷ್ಠ ಎಂಟು ಕ್ವಿಂಟಾಲ್ ತೊಗರಿ ಇಳುವರಿ ಪಡೆಯಬಹುದು. ಆದಾಯ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ರೈತರು ಅಕ್ಕಡಿ ಬೆಳೆ ಪದ್ಧತಿ ಅಳವಡಿಸಿ ಬಿತ್ತನೆ ಮಾಡಬೇಕು ಎಂದು ಮನವಿ ಮಾಡಿದರು.

ರೈತರು ಇಲಾಖೆಯ ಸೌಲಭ್ಯಗಳನ್ನು, ತಾಂತ್ರಿಕತೆಗಳನ್ನು ಉಪಯೋಗಿಸಿಕೊಂಡು ಕೊರೋನಾ ನಿಯಮಗಳನ್ನು ಪಾಲಿಸಿ, ಆರೋಗ್ಯ ಕಾಪಾಡಿಕೊಂಡು ಕೃಷಿ ಚಟುವಟಿಕೆ ಮಾಡಲು ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಅಣಬೇರು ಜೀವನ ಮೂರ್ತಿ, ಮನವಿ ಮಾಡಿದರು. ಉಪ ಕೃಷಿ ನಿರ್ದೇಶಕ ತಿಪ್ಪೇಸ್ವಾಮಿ ಆರ್., ಇಲಾಖೆಯ ಸೌಲಭ್ಯಗಳ ಬಗ್ಗೆ ಹಾಗೂ ಬೀಜೋಪಚಾರದ ತಾಂತ್ರಿಕತೆಯ ಪ್ರಾತ್ಯಕ್ಷತೆ ಮೂಲಕ ರೈತರಿಗೆ ಮಾಹಿತಿ ನೀಡಿದರು. ಸಹಾಯಕ ಕೃಷಿ ನಿರ್ದೇಶಕ  ರೇವಣಸಿದ್ದನಗೌಡ ಎಚ್.ಕೆ., ಕೃಷಿ ಅಧಿಕಾರಿಗಳಾದ ರವಿಕುಮಾರ್, ಚಂದ್ರಪ್ಪ, ಸುರೇಶ್ ಹಾಗೂ ರೇಷ್ಮಾ ಹಾಜರಿದ್ದರು.