News

ರೈಲ್ವೆಯಲ್ಲಿ ಮಹಿಳೆಯರ ಸುರಕ್ಷತೆಗಾಗಿ ಮೇರಿ ಸಹೇಲಿ..! ಪ್ರಯಾಣದುದ್ದಕ್ಕೂ ಜೊತೆಯಲ್ಲಿರಲಿದೆ ಆರ್‌ಪಿಎಫ್‌

01 November, 2020 8:01 PM IST By:

ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ನೈರುತ್ಯ ರೈಲ್ವೆಯ ಮೈಸೂರು ವಿಭಾಗೀಯ ರೈಲುಗಳಲ್ಲಿ ಮೇರಿ ಸಹೇಲಿ (ನನ್ನ ಗೆಳತಿ) ಎಂಬ ಹೊಸ ವಿನೂತನ ಕಾರ್ಯಕ್ರಮ ಆರಂಭಿಸಲಾಗಿದೆ. ಈ ಮೂಲಕ ಮಹಿಳೆಯರ ಸಂಪೂರ್ಣ ಪ್ರಯಾಣದ ವೇಳೆ ಅವರಿಗೆ ರಕ್ಷಣೆ ನೀಡುವ ಕೆಲಸವನ್ನು ಆರ್.ಪಿ.ಎಫ್  ಮಾಡಲಿದೆ.

ದೀಪಾವಳಿ ಸೇರಿದಂತೆ ಮುಂದೆ ಬರುವ ಹಬ್ಬಗಳ ವೇಳೆ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ರೈಲುಗಳಲ್ಲಿ ಸಂಚರಿಸುತ್ತಾರೆ. ಹೀಗಾಗಿ, ಅವರ ರಕ್ಷಣೆಗೆ ರೈಲ್ವೆ ಪೊಲೀಸ್‌ ಪಡೆಯು ಆರಂಭಿಕ ಸ್ಥಳದಿಂದ, ಅಂತ್ಯದವರೆಗೆ ಸುರಕ್ಷತೆ ಹಾಗೂ ಭದ್ರತೆ ನಿಟ್ಟಿನಲ್ಲಿ ನಿಗಾ ವಹಿಸಲಿದೆ. ಮಹಿಳೆಯರು ಸುರಕ್ಷಿತವಾಗಿ ತಮ್ಮ ಮನೆ ಸೇರಲಿ. ರೈಲ್ವೆಯಲ್ಲಿ ಒಂಟಿ ಮಹಿಳೆಯರನ್ನು ಟಾರ್ಗೇಟ್ ಮಾಡಿ ಚಿನ್ನಾಭರಣಗಳನ್ನು ಕಳವು ಮಾಡುವುದನ್ನು ತಡೆಯುವುದಕ್ಕಾಗಿ ಈ ಹೊಸ ವಿನೂತನ ಪ್ರಯೋಗಕ್ಕೆ ಆರ್.ಪಿ.ಎಫ್ ಮುಂದಾಗಿದೆ.

ಮೇರಿ ಸಹೇಲಿಯಿಂದ ಕಾರ್ಯವೈಖರಿ ಹೇಗೆ..?

ರೈಲು ನಿಲ್ದಾಣ ಬಿಡುವುದಕ್ಕೂ ಮುಂಚೆ ಆರ್‌ಪಿಎಫ್‌ ಮಹಿಳಾ ಸಿಬ್ಬಂದಿ, ಮಹಿಳಾ ಪ್ರಯಾಣಿಕರೊಂದಿಗೆ ಸಂವಾದ ನಡೆಸುತ್ತಾರೆ. ಅವರ ಸೀಟಿನ ಸಂಖ್ಯೆ ಮತ್ತು ಮೊಬೈಲ್‌ ಸಂಖ್ಯೆ ಪಡೆದು, ಪ್ರಯಾಣದುದ್ದಕ್ಕೂ ಅವರೊಂದಿಗೆ ಆರ್‌ಪಿಎಫ್‌ ಸಿಬ್ಬಂದಿ ಸಂಪರ್ಕದಲ್ಲಿರುತ್ತಾರೆ.

ಪ್ರಯಾಣದ ಸಂದರ್ಭದಲ್ಲಿ ಸುರಕ್ಷತೆ ದೃಷ್ಟಿಯಿಂದ ಮಹಿಳೆಯರು ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆಯೂ ಪ್ರಯಾಣಿಕರಿಗೆ ಮಾಹಿತಿ ನೀಡುತ್ತಾರೆ. ತುರ್ತು ಸಂದರ್ಭದಲ್ಲಿ ಭದ್ರತಾ ಸಹಾಯವಾಣಿ ಸಂಖ್ಯೆ 182 ಸಂಪರ್ಕಿಸುವಂತೆ ಆರ್‌ಪಿಎಫ್‌ ಸಿಬ್ಬಂದಿ ಮಹಿಳಾ ಪ್ರಯಾಣಿಕರಿಗೆ ತಿಳಿಸುತ್ತಾರೆ.

ಅಲ್ಲದೆ  ಪ್ರಯಾಣದ ನಡುವೆ ಬರುವ ನಿಲ್ದಾಣಗಳಲ್ಲಿನ ಆರ್‌ಪಿಎಫ್‌ ಸಿಬ್ಬಂದಿ ಕೂಡ ಸಂಬಂಧಪಟ್ಟ ಬೋಗಿಗಳ ಮೇಲೆ ನಿಗಾ ಇಡುತ್ತಾರೆ. ಯಾವುದಾದರೂ ಸಮಸ್ಯೆ ಇದ್ದರೆ ಅದರ ಬಗ್ಗೆಯೂ ಮಹಿಳಾ ಪ್ರಯಾಣಿಕರನ್ನು ಆರ್‌ಪಿಎಫ್‌ ಸಿಬ್ಬಂದಿ ಕೇಳುತ್ತಾರೆ ಎಂದು ಮೈಸೂರು ವಿಭಾಗೀಯ ರೈಲ್ವೆ  ಪ್ರಕಟಣೆಯಲ್ಲಿ ತಿಳಿಸಿದೆ.