ಶಿಶುವಿನಹಾಳವನ್ನು ಅಂತಾರಾಷ್ಟ್ರ್ರೀಯ ಪ್ರವಾಸಿ ತಾಣವನ್ನಾಗಿ ಮಾಡಲು ರೂ 50 ಕೋಟಿ ವೆಚ್ಚದ ಮಾಸ್ಟರ್ ಪ್ಲ್ಯಾನ್ ಮಾಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೇಳಿದರು.
ಶಿಗ್ಗಾಂವಿ ಕ್ಷೇತ್ರದ ಶಿಶುವಿನಹಾಳ, ಹುಲಗೂರು ಹಾಗೂ ಬಸವನಾಳು ಗ್ರಾಮಗಳಲ್ಲಿ ರೋಡ್ ಶೋ ನಡೆಸಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು.
ಸಂತ ಶಿಶುನಾಳ ಶರೀಫರ ಸಮಾನತೆ, ಧರ್ಮ ಚೌಕಟ್ಟು ಮೀರಿದ ತತ್ವಜ್ಞಾನ ವಿಶ್ವದೆಲ್ಲೆಡೆ ತಲುಪಿದೆ. ಶಿಶುವಿನ ಹಾಳ ಶರೀಫರನ್ನು ಆರಾಧಿಸಿದವರ ಸಂಕಲ್ಪ ಈಡೇರುತ್ತದೆ.
ತಮ್ಮ ಪ್ರೀತಿ ವಿಶ್ವಾಸದಿಂದ ನಾನು ಮುಖ್ಯಮಂತ್ರಿ ಸ್ಥಾನದಲ್ಲಿ ಇದ್ದೇನೆ. 2018ರಲ್ಲಿ ನಿಮ್ಮ ಆಶೀರ್ವಾದದಲ್ಲಿ ಟ್ರಿಪಲ್ ಪವರ್ ಇತ್ತು.
ಶಾಸಕನಾಗಿ, ಸಚಿವನಾಗಿ ಹಾಗೂ ಮುಖ್ಯಮಂತ್ರಿ ಆಗಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ನಾನು ಕ್ಷೇತ್ರದ ಹೊರಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ಕ್ಷೇತ್ರಕ್ಕೆ ಬಂದಾಗ ನಿಮ್ಮ ಬಸವರಾಜ ಅಷ್ಟೇ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಬಿಜೆಪಿ ಅಧಿಕಾರಕ್ಕೆ ಬರುವುದು ಶತ ಸಿದ್ದ
ನಾನು ರಾಜ್ಯದ ಉದ್ದಗಲಕ್ಕೆ ಓಡಾಡಿದ್ದೇನೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಬರುವುದು ಶತ ಸಿದ್ದ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಒಂದಿಲ್ಲೊಂದು ಯೋಜನೆ ಪ್ರತಿ ಕ್ಷೇತ್ರದ ಶೇ 30 ರಿಂದ 40 ಸಾವಿರ ಮನೆಗಳಿವೆ ತಲುಪಿವೆ.
ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ ಶಿಗ್ಗಾಂವಿ ತಾಲ್ಲೂಕಿನಲ್ಲಿ 22 ಸಾವಿರ ರೈತರು ಫಲಾನುಭವಿಗಳು ಆಗಿದ್ದಾರೆ. ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ ಐದು ಲಕ್ಷ ರೂ ಸಾಲ ನೀಡಲಾಗುತ್ತಿದೆ.
ಪ್ರತಿಯೊಬ್ಬ ರೈತರಿಗೆ ಜೀವವಿಮೆ ಮಾಡಿಸಲಾಗುತ್ತಿದೆ. ಜೂನ್ ತಿಂಗಳಲ್ಲಿ ಬೀಜ, ರಸಗೊಬ್ಬರ ಖರೀದಿಗೆ ರೂ 10 ಸಾವಿರ ನೇರವಾಗಿ ರೈತರ ಅಕೌಂಟ್ ಗೆ ಹಾಕುತ್ತಿದ್ದೇವೆ.
ಹಿಂದುಳಿದ ವರ್ಗದ ಮಕ್ಕಳಿಗೆ ಶಾಲೆ, ಹಾಸ್ಟೆಲ್ಗಳ ಸೌಲಭ್ಯ ನೀಡುತ್ತಿದ್ದೇವೆ. ಕುರಿಗಾಹಿಗಳಿಗೂ ವಿಶೇಷ ಕಾರ್ಯಕ್ರಮ ಮಾಡಿ ಅವರನ್ನು ಸಬಲರನ್ನಾಗಿ ಮಾಡುತ್ತಿದ್ದೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಹುಲಗೂರಿನಲ್ಲಿ ಮಿನಿ ಟೆಕ್ಸ್ ಟೈಲ್ ಪಾರ್ಕ್
ಹುಲಗೂರು ಗ್ರಾಮ ಮೂರು ತಾಲ್ಲೂಕುಗಳ ಕೇಂದ್ರ. ಶಿಗ್ಗಾಂವಿ ತಾಲೂಕಿನಲ್ಲಿ ಹುಲಗೂರು ಗ್ರಾಮ ಪಂಚಾಯಿತಿಗೆ ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೆ ಏರುವ ಅರ್ಹತೆ ಇದೆ.
ಇಲ್ಲಿ ಕಾಂಕ್ರೀಟ್ ರಸ್ತೆ, ಸಮುದಾಯ ಭವನಗಳು, ಹೊಸ ಬಸ್ ನಿಲ್ದಾಣ, ಶಾದಿ ಮಹಲ್, ಆಸ್ಪತ್ರೆ ಶಾಲೆಗಳು ಎಲ್ಲ ವರ್ಗಕ್ಕೂ ಸಮನಾದ ಅಭಿವೃದ್ಧಿ ಮಾಡಿದ್ದೇವೆ.
ಪ್ರತಿ ಮನೆಗೂ ನಲ್ಲಿ ಮೂಲಕ ನೀರು ಕೊಡುವ ಯೋಜನೆ ಜಾರಿ ಮಾಡಿದ್ದೇವೆ. ಶಿಗ್ಗಾಂವಿಯಲ್ಲಿ ಟೆಕ್ಸ್ ಟೈಲ್ ಪಾರ್ಕ್ ಮಾಡಿದ್ದೇನೆ.
ಹುಲಗೂರಿನಲ್ಲಿ ಮಿನಿ ಟೆಕ್ಸ್ ಟೈಲ್ ಮಾಡುತ್ತೇನೆ. ಕನಿಷ್ಟ 5 ಸಾವಿರ ಜನರಿಗೆ ಉದ್ಯೋಗ ಕೊಡುವ ಕೆಲಸ ಮಾಡುತ್ತೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ನಿಮಗೆ ತುಂಗಭದ್ರಾ ನೀರು ಕೊಡುತ್ತಿದ್ದೇನೆ
ಜಲಜೀವನ್ ಮಿಷನ್ ಅಡಿಯಲ್ಲಿ ಮನೆಮನೆಗೆ ಗಂಗೆ ಬರುತ್ತಿದೆ. ಬಸವನಾಳದಲ್ಲಿ ಕಾಮಗಾರಿ ಮುಗಿಯುತ್ತಾ ಬಂದಿದೆ. 438 ಕೋಟಿ ವೆಚ್ಚದಲ್ಲಿ ಕ್ಷೇತ್ರದ ಪ್ರತಿ ಮನೆಗೆ ನೀರು ಕೊಡುವ ಯೋಜನೆ ಇದೆ.
180 ಕಿಲೋಮೀಟರ್ ದೂರದ ತುಂಗಭದ್ರಾ ನದಿಯಿಂದ ನೀರು ತರಲಿದ್ದೇವೆ. ಇದು ಕೇಂದ್ರದ ಸಹಾಯದಿಂದ ಮಾಡಲು ಸಾಧ್ಯವಾಯಿತು.
3 ವರ್ಷದಲ್ಲಿ 40 ಲಕ್ಷ ಮನೆಗಳಿಗೆ ನೀರು ಕೊಟ್ಟಿದ್ದೇವೆ. ನಾವು ನುಡಿದಂತೆ ನಡೆಯುವ ಸರ್ಕಾರ ಕೊಟ್ಟಿದ್ದೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.