News

ತಿಪ್ಪೆ ದೊಡ್ಡದಿದ್ದರೆ ಆ ಮನೆಯವರು ಶ್ರೀಮಂತರು ಎಂದು ನಿರ್ಧರಿಸುತ್ತಿದ್ದ ಕಾಲವೂ ಇತ್ತು!

11 June, 2021 4:16 PM IST By:

ಇದು ಸರಿಸುಮಾರು ಎಂಟು- ಒಂಭತ್ತು ದಶಕಗಳ ಹಿಂದಿನ ಮಾತು. ಆಗಿನ್ನೂ ತಂತ್ರಜ್ಞಾನ ಕ್ಷೇತ್ರ ಅಷ್ಟಾಗಿ ವಿಕಸನ ಹೊಂದಿರಲಿಲ್ಲ. ಸೈಕಲ್ ಇದ್ದವರೆಲ್ಲಾ ಶ್ರೀಮಂತರು, ಎತ್ತಿನ ಬಂಡಿ ಹೊಂದಿದ್ದವರೆಲ್ಲಾ ದೊಡ್ಡ ಧನಿಕರು. ಕಾರು, ಬೈಕುಗಳೇನಿದ್ದರೂ ದೊಡ್ಡ ಅಧಿಕಾರಿಗಳು (ಬ್ರಿಟಿಷರು), ರಾಜ ಮನೆತನದವರು ಮತ್ತು ಆಗರ್ಭ ಶ್ರೀಮಂತರ ಸೊತ್ತಾಗಿದ್ದವು. ಇವೆಲ್ಲಾ ಆಡಂಬರದ ಐಶಾರಾಮಿ ಸವಲತ್ತುಗಳನ್ನು ಹೊಂದಿದವರು ಹೆಚ್ಚಾಗಿ ಪಟ್ಟಣ ಸೇರಿರುತ್ತಿದ್ದರು. ಹೀಗಾಗಿ ಹಳ್ಳಿಗಳಲ್ಲಿ ಸೈಕಲ್ಲು, ಬಂಡಿಗಳೇ ಪ್ರಮುಖ ಸಾರಿಗೆ ಸಾಧನಗಳಾಗಿದ್ದವು. ಅಲ್ಲದೆ, ಕಾರು, ಬೈಕುಗಳನ್ನು ಹಳ್ಳಿ ಜನ ನೋಡುವುದೇ ಅಪರೂಪವಾಗಿತ್ತು.

ಹೀಗಿದ್ದ ಆಗಿನ ಕಾಲದಲ್ಲಿ ಅತಿ ಹೆಚ್ಚು ದನಕರುಗಳನ್ನು ಹೊಂದಿರುವವರೇ ‘ಭಾರೀ ಶ್ರೀಮಂತ’ ಎಂದು ಕರೆಸಿಕೊಳ್ಳುತ್ತಿದ್ದರು. ಮನೆ ತುಂಬಾ ಜನ, ದೊಡ್ಡಿಯಲ್ಲಿ ನೂರಾರು ದನಕರು, ಜನರ, ಜಾನುವಾರುಗಳ ಚಾಕರಿ ಮಾಡಲು ಕೈಗೊಬ್ಬ-ಕಾಲ್ಗೊಬ್ಬ ಆಳು... ಭಾರೀ ಶ್ರೀಮಂತರ ಮನೆಯಲ್ಲಿ ಇಂತಹ ವೈಭೋಗಳಿಗೇನೂ ಕೊರತೆ ಇರುತ್ತಿರಲಿಲ್ಲ. ಇನ್ನೊಂದೆಡೆ ದನಕರು ಹೆಚ್ಚಾಗಿರುವವರ ಮನೆಯವರ ಆಸ್ತಿ-ಪಾಸ್ತಿ, ಹೊಲ ಗದ್ದೆಯೂ ಹೆಚ್ಚಾಗೇ ಇರುತ್ತಿತ್ತು. ಹೀಗಾಗಿ, ಮದುವೆಗೆ ಸಂಬಂಧ ಹುಡುಕುವಾಗ ಹೆಣ್ಣಿನ ಕಡೆಯವರು ಗಂಡಿನ ಮನೆಗ ಅಥವಾ ಗಂಡಿನ ಮನೆಯವರು ಹೆಣ್ಣಿನ ಮನೆಗೆ ಹೋದಾಗ ಆ ಮೆನಯವರ ಕಣ ಅಥವಾ ಹಿತ್ತಲಲ್ಲಿ ಇರುತ್ತಿದ್ದ ದನಗಳ ಸಗಣಿಯ ರಾಶಿ ಹಾಕುತ್ತಿದ್ದ ತಿಪ್ಪೆಯನ್ನು ಜೊತೆಗೆ ಹುಲ್ಲಿನ/ಮೇವಿನ ಬಣವೆಯನ್ನು ನೋಡಲು ಮರೆಯುತ್ತಿರಲಿಲ್ಲವಂತೆ.

ತಿಪ್ಪೆ ನೋಡಿ ಹೆಣ್ಣು ಕೊಡು

ಹೆಣ್ಣನ್ನು ಮದುವೆ ಮಾಡಿ ಕಳುಹಿಸುವ ಮೊದಲು ಸಂಬಂಧ ಬೆಳೆಸಲಿರುವ ಮನೆಯ ತಿಪ್ಪೆಯನ್ನು ನೋಡುವ ಸಂಪ್ರದಾಯ ಆಗ ಸರ್ವೇಸಾಮಾನ್ಯವಾಗಿತ್ತು. ಗಂಡು ನೋಡುವ ಶಾಸ್ತ್ರಕ್ಕೆ ಹೋದಾಗ ಹೆಣ್ಣಿನ ಕಡೆಯವರು ಗಂಡಿನ ಮನೆಯ ಹಿತ್ತಲು, ಕಣ ಇಲ್ಲವೇ ಹೊಲದಲ್ಲಿ ರಾಶಿ ಹಾಕುತ್ತಿದ್ದ ದನಗಳ ಸಗಣಿಯ ತಿಪ್ಪೆಯನ್ನೊಮ್ಮೆ ನೋಡಿ ಬರುತ್ತಿದ್ದರು. ತಿಪ್ಪೆ ದೊಡ್ಡದಿದೆ ಎಂದರೆ ಆ ಮನೆಯವರು ಶ್ರೀಮಂತರು ಎಂದು ನಿರ್ಧರಿಸುತ್ತಿದ್ದ ಹೆಣ್ಣು ಹೆತ್ತವರು, ಆ ಮನೆಗೆ ಹೋದರೆ ಮಗಳು ಸುಖವಾಗಿರುತ್ತಾಳೆ ಎಂದೆಣಿಸಿ ಮದುವೆ ಮಾಡಿಕೊಡುತ್ತಿದ್ದರು. ‘ನನ್ನ ಅಪ್ಪನೂ ನನ್ನ ಮದುವೆ ಮಾಡೋ ಮೊದ್ಲು ನಮ್ಮವರ ಊರಿಗೆ ಹೋಗಿ ಬಂದಿದ್ದರು. ಅಲ್ಲಿಂದ ನಮ್ಮೂರಿಗೆ ಮರಳಿ ಬಂದ ನಂತರ ಗಂಡಿನ ಮನೆಯವರ ತಿಪ್ಪೆಯ ಗಾತ್ರ, ಅವರ ಮನೆಯಲ್ಲಿ ಸಾಕಿರುವ ದನಕರುಗಳ ಬಗ್ಗೆಯೇ ಗಂಟೆಗಟ್ಟಲೆ ಚರ್ಚೆ ನಡೆದಿತ್ತು. ಅಪ್ಪನಂತೂ ಬೀಗರ ಮನೆಯ ತಿಪ್ಪೆ ಎಷ್ಟು ದೊಡ್ಡದಿದೆ ಗೊತ್ತಾ? ಅರ್ಧ ಎಕರೆ ಹೊಲದಲ್ಲಿ ಬರೀ ತಿಪ್ಪೆಯೇ ಕಾಣುತ್ತೆ ಎಂದು ಅದೆಷ್ಟು ಬಾರಿ ಹೇಳಿದ್ದರೋ ಗೊತ್ತಿಲ್ಲ. ಆಗೆಲ್ಲಾ ‘ತಿಪ್ಪೆ ನೋಡಿ ಹೆಣ್ಣುಕೊಡು’ ಎಂಬ ಮಾತು ಪ್ರಚಲಿತದಲ್ಲಿತ್ತು,’ ಎಂದು ನೆನಪಿನ ಬುತ್ತಿ ಬಿಚ್ಚಿಟ್ಟವರು 92 ವರ್ಷದ ಕಮಲಜ್ಜಿ.

ಒಂಭತ್ತು ದಶಕಗಳ ಹಿಂದಿನ ಮಾತನ್ನು ಬಿಡಿ. ಈಗ್ಗೆ ಬರೀ ಹತ್ತು ವರ್ಷಗಳ ಹಿಂದೆ ಕೂಡ ಕೆಲವರು ಮನೆಯಲ್ಲಿ ನೂರಾರು ಹಸುಗಳನ್ನು ಕಟ್ಟಿದ್ದನ್ನು ನೋಡಿದ್ದೇವೆ. ಈಗಲೂ ಒಂದೊಂದು ಹಳ್ಳಿಗಳಲ್ಲಿ ಕೆಲ ದೊಡ್ಡ ಮನೆಯವರು, ಹಿರಿಯರಿಂದ ಬಳುವಳಿಯಾಗಿ ಬಂದಿರುವ ದನಗಳನ್ನು ಜತನದಿಂದ ಕಾಪಾಡಿಕೊಂಡು ಬಂದಿದ್ದು, ಈಗಲೂ ಎಲ್ಲ ದನಕರುಗಳನ್ನು ಒಟಿಗೇ ದೊಡ್ಡಿಯಲ್ಲಿ ಕೂಡುತ್ತಾರೆ.

ರೈತರಿಗೆ ಹೆಣ್ಣು ಕೊಡೋರೇ ಇಲ್ಲ!

ಹಿಂದೆಲ್ಲಾ ತಿಪ್ಪೆ ಗಾತ್ರ ನೋಡಿ ಹೆಣ್ಣು ಕೊಟ್ಟರೆ, ಈಗ ರೈತರಿಗೆ ಹೆಣ್ಣು ಕೊಡುವವರೇ ಇಲ್ಲ. ಒಬ್ಬನೇ ಮಗ, 20 ಎಕರೆ ನೀರಾವರಿ ಗದ್ದೆ, ತೋಟವಿದೆ. ಹುಡುಗನಿಗೆ ಯಾವ ದುರಭ್ಯಾಸವೂ ಇಲ್ಲ ಎಂದರೂ ಆತ ರೈತ ಎಂಬ ಒಂದೇ ಒಂದು ಕಾರಣಕ್ಕೆ ಹೆಣ್ಣು ಕೊಡಲು ಹೆತ್ತವರು ಹಿಂದೇಟು ಹಾಕುತ್ತಿದ್ದಾರೆ. ಬೇರೆಯವರ ವಿಷಯ ಬಿಡಿ, ರೈತ ಕುಟುಂಬದವರೇ ತಮ್ಮ ಮನೆಯ ಹೆಣ್ಣು ಮಕ್ಕಳನ್ನು ರೈತರಿಗೆ ಕೊಟ್ಟು ಮದುವೆ ಮಾಡುತ್ತಿಲ್ಲ. ಬದಲಿಗೆ ಎಂಜಿನಿಯರ್, ವೈದ್ಯ, ಬ್ಯುಸಿನೆಸ್ ಮಾಡುವ ಹುಡುಗರನ್ನು ಹುಡುಕಿಕೊಂಡು ಹೋಗುತ್ತಾರೆ. ಕಷ್ಟಪಟ್ಟು ಬೆವರಿಳಿಸಿ ದುಡಿಯುವ, ಶ್ರಮಜೀವಿ ರೈತನನ್ನು ಅಳಿಯನನ್ನಾಗಿಸಿಕೊಳ್ಳಲು ರೈತರಿಗೇ ಇಷ್ಟವಿಲ್ಲದಿದ್ದರೆ ಮತ್ತಾರು ತಾನೇ ಅವನಿಗೆ ಹೆಣ್ಣು ಕೊಟ್ಟಾರು!

ಈ ಬಗ್ಗೆ ಚರ್ಚೆ ನಡೆದಿತ್ತು

ಅನ್ನದಾತ ಎಂದು ಕರೆಸಿಕೊಳ್ಳುವ ರೈತರಿಗೆ ಯಾರೂ ಹೆಣ್ಣು ಕೊಡುತ್ತಿಲ್ಲ ಎಂಬ ವಿಷಯದ ಕುರಿತಂತೆಯೇ ಹಿಂದೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಕಾವೇರಿದ ಚರ್ಚೆ ನಡೆದಿತ್ತು. ಹೆಣ್ಣು ಸಿಗದೆ ನೊಂದು, ಬೆಂದ ಅವಿವಾಹಿತ ಯುವ ರೈತರು, ದೇಶದ ಪ್ರಗತಿಗೆ ರೈತನ ಕೊಡುಗೆ, ಆಹಾರೋತ್ಪಾದನೆಯಲ್ಲಿ ಆತನ ಅಸ್ತಿತ್ವದ ಮಹತ್ವವನ್ನೆಲ್ಲಾ ವಿವರಿಸಿ ವಿಡಿಯೋ ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದರೆ, ಒಂದೊಂದು ಪೋಸ್ಟ್ಗೂ ಸಾವಿರಾರು ಲೈಕು, ಅಷ್ಟೇ ಕಮೆಂಟುಗಳು ಇರುತ್ತಿದ್ದವು. ನೂರಾರು ಮಂದಿ, ಹೌದು ರೈತ ಗ್ರೇಟ್, ರೈತ ದೇಶದ ಬೆನ್ನೆಲುಬು, ರೈತ ಹಾಗೆ... ರೈತ ಹೀಗೆ... ಎಂದೆಲ್ಲಾ ಹೊಗಳಿ ಕಮೆಂಟ್ ಮಾಡಿದ್ದರು. ಆದರೆ ಪರಿಸ್ಥಿತಿ ಮಾತ್ರ ಬದಲಾಗಿಲ್ಲ. ಯುವ ರೈತರು ಮಾಡಿದ ಆ ವಿಡಿಯೋಗಳು ಈಗಲೂ ಫೇಸ್‌ಬುಕ್, ಚುಟುಕು ವಿಡಿಯೋ ತಾಣ ಮೋಜ್, ಇನ್‌ಸ್ಟಾ ರೀಲ್ಸ್ ಇತರೆಡೆಗಳಲ್ಲಿ ಕಾಣಸಿಗುತ್ತವೆ.