News

ತಾಂತ್ರಿಕ ಕಾರಣದಿಂದ 1.67 ಲಕ್ಷ ಅರ್ಹ ರೈತರಿಗಿಲ್ಲ ಸಾಲ ಮನ್ನಾ ಸೌಲಭ್ಯ!

09 October, 2020 8:00 AM IST By:

ರೈತರ ಬೆಳೆ ಸಾಲಮನ್ನಾ ಒಂದಲ್ಲ ಒಂದು ಕಾರಣಕ್ಕೆ ಚರ್ಚೆಗೆ ಬರುತ್ತಲೇ ಇದೆ. ಸಾಲಮನ್ನಾದ ಹಣ ಬ್ಯಾಂಕಿಗೆ ಜಮೆಯಾಗಿದ್ದರೂ ಸಹ ರೈತರ ಸಾಲ ಮನ್ನಾ ಜಮೆಯಾಗುತ್ತಿಲ್ಲ. ಬೆಳೆನಷ್ಟದ ಹಣವನ್ನು ಸಾಲಮನ್ನಾ ಹಣದ ಖಾತೆಗೆ ವರ್ಗಾವಣೆ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿದೆ.  ಆದರೆ ಈಗ ಹತ್ತಾರು ತಾಂತ್ರಿಕ ಕಾರಣಗಳಿಂದ ಸಾಲಮನ್ನಾ ಯೋಜನೆಯಿಂದ 1.67 ರೈತರು ಹೊರಗುಳಿದಿದ್ದಾರೆ. ಇದೇ ತಾಂತ್ರಿಕ ಕಾರಣಗಳನ್ನು ಮುಂದಿಟ್ಟು ರೈತರನ್ನು ಸತಾಯಿಸಲಾಗುತ್ತಿದೆ.

ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ.ಕುಮಾರಸ್ವಾಮಿಯವರು  2018ರಲ್ಲಿ ಸಾಲ ಮನ್ನಾ ಯೋಜನೆ ಘೋಷಿಸಿದ್ದರು. ಸಹಕಾರ ಸಂಘಗಳಿಂದ ಪಡೆದ 1 ಲಕ್ಷ ರೂಪಾಯಿ ವರೆಗಿನ ಬೆಳೆ ಸಾಲ ಮನ್ನಾ ಮಾಡುವುದಾಗಿ ಘೋಷಿಸಿ ಎರಡು ವರ್ಷಗಳೇ ಕಳೆದಿವೆ. ಆದರೆ ಸಮರ್ಪಕವಾದ ದಾಖಲೆಗಳನ್ನು ಸಲ್ಲಿಸದ ಕಾರಣಕ್ಕೆ ಸುಮಾರು 1.67 ಲಕ್ಷ ರೈತರು ತೊಂದರೆಗೆ ಸಿಲುಕಿದ್ದಾರೆ. ಅತಂತ್ರ ಸ್ಥಿತಿಯಲ್ಲಿರುವ ಈ ರೈತರನ್ನು ಯಾವ ಕಾರಣಕ್ಕೆ ಸಾಲ ಮನ್ನಾಕ್ಕೆ ಪರಿಗಣಿಸಿಲ್ಲ ಎಂಬುದನ್ನು ಪಟ್ಟಿ ಮಾಡಲಾಗಿದೆ.

19.14 ಲಕ್ಷ ರೈತರ ಒಟ್ಟು ಸಾಲದ ಮೊತ್ತ 11,032 ಕೋಟಿ ಎಂದು ಗುರುತಿಸಲಾಗಿತ್ತು. ಇದರಲ್ಲಿ  1 ಲಕ್ಷದವರೆಗಿನ ಸಾಲದ ಮೊತ್ತ  8,480 ಕೋಟಿ. ಒಟ್ಟಾರೆ ಇದುವರೆಗೆ 16.41 ಲಕ್ಷ ಅರ್ಹ ರೈತರ  7,637 ಕೋಟಿ ಮೊತ್ತದ ಸಾಲ ಮನ್ನಾ ಮಾಡಲಾಗಿದೆ. ಬ್ಯಾಂಕ್‌ ಖಾತೆ ವಿವರ ನೀಡದ ವೇತನದಾರರು, ಪಿಂಚಣಿ ಪಡೆಯುತ್ತಿರುವವರು, ಆದಾಯ ತೆರಿಗೆ ಪಾವತಿದಾರರು ಹಾಗೂ ಸರ್ಕಾರ ವಿಧಿಸಿದ್ದ ಷರತ್ತುಗಳನ್ನು ಪಾಲಿಸದ ರೈತರನ್ನು ಈ ಯೋಜನೆಗೆ ಪರಿಗಣಿಸಿಲ್ಲ. ಸಾಲಮನ್ನಾ ಯೋಜನೆಯಿಂದ ಹೊರಗುಳಿದ 1.67 ಲಕ್ಷ ರೈತರ ಎಲ್ಲ ದಾಖಲೆ ಪರಿಶೀಲಿಸಿ ಅರ್ಹರನ್ನು ಗುರುತಿಸುವ ಅಂತಿಮ ಕಾರ್ಯವನ್ನು ಅಕ್ಟೋಬರ್‌ 15ರೊಳಗೆ ಮುಗಿಸುವಂತೆ ಸೂಚಿಸಿದೆ.

ಒಂದೇ ಕುಟುಂಬದವರು ಬೇರೆ ಬೇರೆ ಪಡಿತರ ಚಿಟಿ ಪಡೆದಿರುವ ಪ್ರಕರಣಗಳು ಹೆಚ್ಚು:

ಸಾಲಮನ್ನಾ ಘೋಷಣೆಯಾದನಂತರ ಒಂದೇ ಕುಟುಂಬದವರು ಬೇರೆ ಬೇರೆ ಪಡಿತರ ಚೀಟಿ ಮಾಡಿಸಿಕೊಂಡು ಸಾಲ ಪಡೆದಿರುವ ಪ್ರಕರಣಗಳೇ ಹೆಚ್ಚಿವೆ. 2020ರ ಜುಲೈ 20ರ ಬಳಿಕ ಪಡಿತರ ಚೀಟಿ ಪಡೆದಿದ್ದರೆ ಅದನ್ನು ಮನೆಗೇ ಭೇಟಿ ನೀಡಿ ಪರಿಶೀಲಿಸಬೇಕು.

ಒಬ್ಬರಿಗೆ ಎರಡು ಸಹಕಾರ ಸಂಘಗಳಿಂದ ಸಾಲ ಪಡೆಯಲು ಅವಕಾಶ ಇಲ್ಲದಿದ್ದರೂ 23,528 ರೈತರು ಒಂದೇ ಆಧಾರ್‌ ಸಂಖ್ಯೆಯಲ್ಲಿ ಎರಡಕ್ಕಿಂತ ಹೆಚ್ಚು ಸಾಲದ ಖಾತೆ ಹೊಂದಿದ್ದಾರೆ ಎಂಬ ಅಂಶ ಬಯಲಾಗಿದೆ.

ಒಂದೇ ಕುಟುಂಬದಲ್ಲಿ ಬೇರೆ ಬೇರೆಯವರು ಚೀಟಿ ಪಡೆದಿದ್ದರೆ ಮೂಲ ಪಡಿತರ ಚೀಟಿ ಬಿಟ್ಟು ಉಳಿದ ಸಾಲದ ಅರ್ಜಿಗಳನ್ನು ತಿರಸ್ಕರಿಸಬೇಕು ಎಂದು ಸೂಚಿಸಲಾಗಿದೆ.

ಕ್ಷಣಮಾತ್ರದಲ್ಲಿ ಮಾಹಿತಿ ಲಭ್ಯವಾಗುವ ಈ ಕಾಲದಲ್ಲಿ ಸಾಲ ಹೇಗೆ ಎರಡು ಕಡೆ ನೀಡಲಾಯಿತು:

ಆಧಾರ್‌ ಸಂಖ್ಯೆ ನಮೂದಿಸುತ್ತಿ ದ್ದಂತೆಯೇ ಆ ವ್ಯಕ್ತಿ ಬೇರೆ ಎಲ್ಲಿ ಖಾತೆ ಹೊಂದಿದ್ದಾರೆ ಎಂಬ ಮಾಹಿತಿ ಕ್ಷಣಮಾತ್ರದಲ್ಲಿ ಲಭ್ಯವಾಗುವಂತಹ ಈ ಕಾಲದಲ್ಲಿ ಇದೆಲ್ಲಾ ಹೇಗೆ ಸಾಧ್ಯವಾಯಿತು? ಇದರಲ್ಲಿ ಸಹಕಾರ ಸಂಘಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯ ನಿರ್ಲಕ್ಷ್ಯ ಅಥವಾ ಜಾಣಕುರುಡುತನ ಕೆಲಸ ಮಾಡಿರುವ ಶಂಕೆ ಮೂಡುತ್ತದೆ.

ಸಾಲಮನ್ನಾ ಘೋಷಣೆಗಿಂತ ಮುಂಚಿತವಾಗಿ ಸಮಗ್ರ ಮಾಹಿತಿ ಪಡೆಯಬೇಕಿತ್ತು:

ಸಾಲ ಮನ್ನಾ ಘೋಷಿಸುವ ಮೊದಲೇ ಸರ್ಕಾರ ಅದಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿಕೊಳ್ಳಬೇಕಿತ್ತು. ಅರ್ಹರಾರು, ಅನರ್ಹರಾರು ಎಂಬುದನ್ನು ಆಗಲೇ ತಿಳಿದುಕೊಂಡಿದ್ದರೆ ಈ ರೀತಿಯ ಗೊಂದಲವನ್ನು ತಪ್ಪಿಸಬಹುದಿತ್ತು. ಪೂರ್ವಸಿದ್ಧತೆಯಿಲ್ಲದೆ ಯೋಜನೆಯನ್ನು ಪ್ರಕಟಿಸಿದ್ದರಿಂದ ಆಗಿರುವ ಅನನುಕೂಲ ಇದು. ಸರ್ಕಾರ ಯಾವುದೇ ಕಾರ್ಯಕ್ರಮ, ಯೋಜನೆಯನ್ನು ಪ್ರಕಟಿಸಿದರೆ ಅದರ ಲಾಭ ಅರ್ಹರಿಗೆ ತ್ವರಿತವಾಗಿ ಸಿಗುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಅಧಿಕಾರಿಗಳದ್ದು. ಇದರ ಅನುಷ್ಠಾನಕ್ಕಾಗಿ ಕೆಳ ಹಂತದ ಸಿಬ್ಬಂದಿಗೆ ಸಮರ್ಪಕವಾದ ಸೂಚನೆಗಳನ್ನು ನೀಡಿ, ಕಾಲಮಿತಿಯೊಳಗೆ ಕೆಲಸ ಆಗುವಂತೆ ಅವರು ಮಾಡಬೇಕು. ಈ ಯೋಜನೆಯ ಅನುಷ್ಠಾನದಲ್ಲಿ ಸಹಕಾರ ಇಲಾಖೆಯಿಂದ ಆಗಿರುವ ವಿಳಂಬವನ್ನು ಸಮರ್ಥಿಸಲು ಆಗದು. ಸಹಕಾರ ಇಲಾಖೆಯು ಈ ತಿಂಗಳ 15ರ ಒಳಗೆ ಈ ಎಲ್ಲ ರೈತರ ದಾಖಲೆಗಳ ಸತ್ಯಾಸತ್ಯತೆ ಪರಿಶೀಲಿಸಿ, ವರದಿ ನೀಡುವಂತೆ ಡಿಸಿಸಿ ಬ್ಯಾಂಕ್‌ಗಳಿಗೆ ಈಗ ಸೂಚಿಸಿದೆ.

ಹೊಸ ಸುತ್ತೋಲೆ ರವಾನೆ:

ಸಾಲ ಮನ್ನಾ ಯೋಜನೆಗೆ ಅರ್ಹತೆ ಪಡೆಯಲು ಬಾಕಿ ಇರುವ ರೈತರ ದಾಖಲೆಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡುವಂತೆ ಜಿಲ್ಲಾ ಸಹಕಾರಿ ಸಂಘಗಳಿಗೆ ಸುತ್ತೋಲೆ ಕಳುಹಿಸಲಾಗಿದೆ.

ಸಾಲಮನ್ನಾ ಯೋಜನೆಯಿಂದ ಕೆಲವು ಕಾರಣಗಳಿಂದ ಹೊರಗುಳಿದ ರೈತರನ್ನು ಇನ್ನಾದರೂ ಸೇರಿಸಿ ಅವರ ಸಾಲಮನ್ನಾ ಮಾಡಲಾಗುತ್ತದೆಯೋ ಎಂಬುದನ್ನು ಕಾದು ನೋಡಬೇಕಾಗಿದೆ.