News

ರಾಜ್ಯದಲ್ಲಿ ಚುರುಕುಗೊಂಡ ಮುಂಗಾರು- ತುಂಬಿ ಹರಿಯುತ್ತಿರುವ ನದಿಗಳು

09 July, 2020 11:04 AM IST By:

ಕರಾವಳಿ, ಮಲೆನಾಡಿನಲ್ಲಿ ಬುಧವಾರವೂ ಜೋರಾಗಿ ಮಳೆ ಸುರಿದಿದೆ. ನದಿ ಪಾತ್ರಗಳಲ್ಲಿ ಗಣನೀಯ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ದಕ್ಷಿಣ ಮಹಾರಾಷ್ಟ್ರದಲ್ಲಿಯೂ ಮಳೆ ಬಿರುಸಾಗಿರುವುದರಿಂದ ಕೃಷ್ಣಾ ನದಿ ನೀರಿನ ಮಟ್ಟ ಹೆಚ್ಚಳವಾಗಿದೆ. ಲಿಂಗನಮಕ್ಕಿ ಜಲಾಶಯಕ್ಕೆ ಒಂದೇ ದಿನ ಎರಡುವರೆ ಅಡಿ ನೀರು ಬಂದಿದೆ. ಜಲಾಶಯದ ನೀರನ ಮಟ್ಟ 1761.25 ಅಡಿಗೆ ತಲುಪಿದೆ.  ಆಲಮಟ್ಟಿ ಅಣೆಕಟ್ಟೆಯ ಕೆಳಭಾಗದ ಪ್ರದೇಶದ ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ಮನ್ನೆಚ್ಚರಿಕೆ ನೀಡಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನೇತ್ರಾವತಿ ನದಿ ನೀರಿನ ಮಟ್ಟ ಗರಿಷ್ಠ 8.5 ಮೀಟರ್‌ ಇದ್ದು, ಬುಧವಾರ 5.2 ಮೀಟರ್‌ ದಾಖಲಾಗಿದೆ. ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆ ಸುರಿದಿದೆ. ಹಾರಂಗಿ ಜಲಾಶಯದ ಒಳಹರಿವು ಮತ್ತಷ್ಟು ಏರಿಕೆಯಾಗಿದೆ. 

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ ತಾಲ್ಲೂಕಿನಲ್ಲಿ ಮಳೆ ಅಬ್ಬರ ಮುಂದುವರಿದಿದೆ. ಜೋರು ಮಳೆಯಿಂದಾಗಿ ನದಿಗಳು ತುಂಬಿ ಹರಿಯುತ್ತಿವೆ.

ಉಡುಪಿಯ ಕೊಲ್ಲೊರಿನಲ್ಲಿ ಅತೀ ಹೆಚ್ಚು 20 ಸೆ.ಮೀ ಮಳೆಯಾಗಿದೆ. ಉಳಿದಂತೆ ಮಂಕಿಯಲ್ಲಿ 17 ಸೇಂ.ಮೀ, ಕೊಟದಲ್ಲಿ 17, ಕಾರ್ಕಳದಲ್ಲಿ 13 ಸೆಂ.ಮೀ ಮಳೆಯಾಗಿದೆ. ಪುತ್ತೂರನಲ್ಲಿ 12, ಕುಂದಾಪುರನಲ್ಲಿ 12, ಸಿದ್ದಾಪುರದಲ್ಲಿ 10 ಸೆಂ.ಮೀ ಮಳೆಯಾಗಿದೆ.

ಬೆಳಗಾವಿ ಜಿಲ್ಲೆಯ ಎರಡು ಸೇತವೆ ಮುಳುಗಡೆ: ಬೆಳಗಾವಿಯಲ್ಲಿ ಸಹ ವರುಣನ ಅಬ್ಬರ ಮುಂದುವರೆದಿದೆ. ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ನಿರಂತರ ಮಳೆಯಾಗುತ್ತಿದ್ದರಿಂದ ಕೃಷ್ಣಾ ನದಿ ಉಕ್ಕಿ ಹರಿಯುತ್ತಿದೆ. ನಿಪ್ಪಾಣಿ ತಾಲೂಕಿನ ಕಾರದಗಾ-ಭೋಜ ಕೆಳಹಂತದ ಸೇತುವೆ ಹಾಗೂ ಮಾಂಜರಿ-ರಾಯಬಾಗ ತಾಲೂಕಿನ ಭಾವಸೌಂದತ್ತಿ ಮಾರ್ಗದ ಬ್ರಿಡ್ಜ್ ಕಂ ಬಾಂದಾರ ಮುಳುಗಡೆಯಾಗಿದೆ.. 

ತುಂಬಿ ಹರಿಯುತ್ತಿರುವ  ತುಂಗೆ: ಶಿವಮೊಗ್ಗ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ತುಂಗೆ, ಭದ್ರೆ, ಶರಾವತಿ, ನದಿಗಳು ತುಂಬಿ ಹರಿಯುತ್ತಿವೆ. ಗಾಜನೂರು ತುಂಗಾ ಡ್ಯಾಂ ಭರ್ತಿಯಾಗಿದ್ದು, ತುಂಗಾನದಿ ಐತಿಹಾಸಿಕ ಮಂಟಪ ಮುಳುಗಲು ಇನ್ನು 2 ಅಡಿ ಬಾಕಿ ಇದೆ. ತುಂಗಾನದಿಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದೆ.

ಕೃಷ್ಣಾ ನದಿ ಒಳಹರಿವು ಹೆಚ್ಚಳ: ಕೃಷ್ಣಾ ನದಿ ಪಾತ್ರದಲ್ಲಿ ವ್ಯಾಪಕವಾಗಿ ಮಳೆ ಸುರಿಯುತ್ತಿದ್ದು, ವಿಜಯಪುರದ ಆಲಮಟ್ಟಿ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಹೆಚ್ಚಾಗಿದೆ. 

 ಧಾರವಾಡ, ಬೆಳಗಾವಿ, ಉತ್ತರ ಕನ್ನಡ, ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ಹಾಗೂ ಹೊಸಪೇಟೆಯಲ್ಲಿ ಅಲ್ಲಲ್ಲಿ ಚದುರಿದ ಮಳೆಯಾಗಿದೆ.

ಸೂಚನೆ: ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯದಿಂದ ಯಾವುದೇ ಕ್ಷಣದಲ್ಲಿ ನೀರನ್ನು ಹೊರಬಿಡುವ ಸಾಧ್ಯತೆ ಇರುವುದರಿಂದ ಅಣೆಕಟ್ಟಿ ಕೆಳಭಾಗದ ಪ್ರದೇಶಗಳಲ್ಲಿ ಮುಳುಗಡೆಯಾಗಲಿರುವ ಎಲ್ಲ ಪಟ್ಟಣ ಹಾಗೂ ಹಳ್ಳಿಗಳ ಸಾರ್ವಜನಿಕರು ತಮ್ಮ ಜಾನುವಾರುಗಳೊಂದಿಗೆ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರವಾಗಬೇಕು ಎಂದು ಆಣೆಕಟ್ಟು ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ತಿಳಿಸಿದ್ದಾರೆ.