News

ಮುಂಗಾರು ಚುರುಕು-ಬಿರುಸಿನಿಂದ ನಡೆಯುತ್ತಿದೆ ಕೃಷಿ ಚಟುವಟಿಕೆ

07 July, 2020 12:16 PM IST By:

ರಾಜ್ಯದಲ್ಲಿ ಕಳೆದ ಒಂದು ತಿಂಗಳಿಂದ ಮುಂಗಾರು ಚುರುಕುಗೊಂಡಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದ್ದರಿಂದ ಕೃಷಿ ಚಟುವಟಿಕೆ ಬಿರುಸಿನಿಂದ ಆರಂಭವಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಮುಂಗಾರು ಮಳೆಯಾಗಿದೆ. ಕಲ್ಯಾಣ ಕರ್ನಾಟಕ ಬೀದರ್, ಕಲಬುರಗಿ, ರಾಯಚೂರು, ಬಳ್ಳಾರಿ, ಯಾದಗಿರಿ ಜಿಲ್ಲೆಯಲ್ಲಿಯೂ ಬಿತ್ತನೆ ಕಾರ್ಯ ಚುರುಕಿನಿಂದ ಸಾಗಿದೆ. ಜೂನ್‌ ಮಧ್ಯ ಭಾಗದ ವೇಳೆಗೆ ಸುಮಾರು 6.8 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಆಗಿದೆ.

ಕಳೆದ ವರ್ಷಕ್ಕಿಂತಲೂ ಈ ವರ್ಷ ಹೆಚ್ಚು ಪ್ರಮಾಣದಲ್ಲಿ ಬಿತ್ತನೆ ಆಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ(ಜೂನ್‌ ಮಧ್ಯ ಭಾಗ) 5.93 ಲಕ್ಷ ಹೆಕ್ಟೇರ್‌ಗಳಲ್ಲಿ ಬಿತ್ತನೆ ಆಗಿತ್ತು. ರಾಜ್ಯದ ಒಟ್ಟು ಬಿತ್ತನೆ ಆಗಬೇಕಾದ ಪ್ರದೇಶ 73 ಲಕ್ಷ ಹೆಕ್ಟೇರ್‌ಗಳು. ಆಗಸ್ಟ್ ತಿಂಗಳವರೆಗೆ ಬಿತ್ತನೆ ಚಟುವಟಿಕೆ ಇನ್ನಷ್ಟು ಹೆಚ್ಚಾಗಲಿದೆ.

 ಹಾವೇರಿ ಜಿಲ್ಲೆಯಲ್ಲಿ ಶೇ 84, ಧಾರವಾಡ ಶೇ 73, ದಕ್ಷಿಣ ಒಳನಾಡಿನ ಮೈಸೂರು ಶೇ 57, ಚಾಮರಾಜನಗರ ಶೇ 51, ಶಿವಮೊಗ್ಗ ಶೇ 40 ರಷ್ಟು ಬಿತ್ತನೆ ಆಗಿದೆ. ಜೂನ್ ಅಂತ್ಯದವರೆಗೆ 2.67 ಲಕ್ಷ ಕ್ವಿಂಟಲ್ ಬಿತ್ತನೆ ಬೀಜ ವಿತರಣೆ ಮಾಡಲಾಗಿದೆ. ಮುಂಗಾರು ಹಂಗಾಮಿಗೆ ಒಟ್ಟು 5.97 ಲಕ್ಷ ಕ್ವಿಂಟಲ್‌ ಬಿತ್ತನೆ ಬೀಜ ಅಗತ್ಯವಿದೆ. 9.57 ಲಕ್ಷ ಮೆಟ್ರಿಕ್‌ ಟನ್‌ ರಸಗೊಬ್ಬರವನ್ನೂ ವಿತರಿಸಲಾಗಿದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.