News

ಖರೀದಿಗೆ ಜನ ಮುಂದೆ ಬರದೆ ಗೋದಾಮಿನಲ್ಲಿಯೇ ಕೊಳೆಯುತ್ತಿವೆ ಮಾವು, ದ್ರಾಕ್ಷಿ

26 April, 2020 8:07 PM IST By:

ಕೊರೋನಾ ಸೋಂಕು ಹರಡುವುದನ್ನು ತಡೆಯಲು ಸರ್ಕಾರ ವಿಧಿಸಿದ ಲಾಕ್‍ಡೌನ್‍ನಿಂದಾಗಿ ಬೇಸಿಗೆ ಕಾಲದ ಮಾವಿನ ಹಣ್ಣು,ದ್ರಾಕ್ಷಿ ಸೇರಿದಂತೆ ಇತರ ಹಣ್ಣಿನ ವ್ಯಾಪಾರಸ್ಥರು ತೀವ್ರ ಸಂಕಷ್ಟದಲ್ಲಿದ್ದಾರೆ.

ಇಷ್ಟು ದಿನ ತರಕಾರಿಗಳಿಗೆ ಬೆಲೆ ಸಿಗದೆ ರೈತರು ರಸ್ತೆ ಮೈಲೆ ಚೆಲ್ಲಿದ್ದಾಯಿತು. ಈಗ ಅಗ್ಗದ ದರಕ್ಕೆ ಮಾರಾಟವೂ ಮಾಡಿದ್ದಾಯಿತು. ಆದರೆ ಈಗ  ಕೊಳೆತ ಮಾವಿನ ಹಣ್ಣು ಹಾಗೂ ಬಾಳೆಹಣ್ಣುಗಳನ್ನು ಸಾಕು ಪ್ರಾಣಿಗಳಿಗೆ ಹಾಕುವಂತಾಗಿದೆ. ಬಹುತೇಕ ಫಲ ತಿಪ್ಪೆಗುಂಡಿ ಸೇರುತ್ತಿರುವುದು ವಿಷಾದದ ವಿಚಾರ.

ಇತ್ತ ಮಾರುಕಟ್ಟೆಗೂ ಸಾಗಿಸದೆ ಅತ್ತ ಮನೆಯಲ್ಲಿಯೂ ಇಟ್ಟುಕೊಳ್ಳದೆ ಕಣ್ಣೀರು ಹಾಕುತ್ತಿರುವ ರೈತರ ಪರಿಸ್ಥಿತಿ ಒಂದೆಡೆಯಾದರೆ ಖರೀದಿಗೂ ಮುಂದಾಗದೆ ಖರೀದಿಸಿದರೆ ವ್ಯಾಪಾರವೂ ಆಗದೆ ಹಾನಿಯಾಗಬಹುದೆಂಬ ಚಿಂತೆಯಲ್ಲಿದ್ದಾರೆ ವರ್ತಕರು.

ಮಾರುಕಟ್ಟೆಯಲ್ಲಿ ಸಾಗಿಸಲು ಸೂಕ್ತ ವಾಹನದ ವ್ಯವಸ್ಥೆಯಿಲ್ಲದೆ ತರಕಾರಿ, ಹಣ್ಣುಗಳು ಕೊಳೆಯುತ್ತಿದ್ದರೆ, ನಗರ ಪ್ರದೇಶಗಳಲ್ಲಿ ಖರೀದಿಗೆ ಜನ ಹಿಂದೇಟು ಹಾಕುತ್ತಿದ್ದರಿಂದ ರಾಶಿ ರಾಶಿ ಹಣ್ಣುಗಳು ಗೋದಾಮಿನಲ್ಲಿಯೇ ಕೊಳೆಯುತ್ತಿದೆ.

ಲಾಕ್ಡೌನ್ ಘೋಷಣೆಯಿಂದ ತೀವ್ರ ಅರ್ಥಿಕ ಸಂಕಷ್ಟ ಎದುರಿಸುತ್ತಿರುವ ಜನರು ಖರೀದಿಸುವ ಶಕ್ತಿಯನ್ನೇ ಕಳೆದುಕೊಂಡಿದ್ದಾರೆ. ಮಾರುಕಟ್ಟೆಗೆ ಬೀಗ ಬಿದ್ದಿದ್ದು, ರಾಶಿ ರಾಶಿ ಹಣ್ಣುಗಳು ನಗರದ ಗೋದಾಮಿನಲ್ಲಿಯೇ ಬಿದ್ದಿದೆ. ಇನ್ನೆರಡು ವಾರ ಇದೇ ರೀತಿ ಪರಿಸ್ಥಿತಿ ಮುಂದುವರೆದರೆ ವ್ಯಾಪಾರ ವಹಿವಾಟು ನಡೆಯದೆ ರೈತರು ನಷ್ಟ ಅನುಭವಿಸಬೇಕಾಗುತ್ತದೆ.

ಉತ್ತಮ ಆದಾಯ ನಿರೀಕ್ಷಿಸಿ ಸಾಲ ಸೂಲ ಮಾಡಿ ಬೆಳೆದ ಮಾವಿನಹಣ್ಣು, ಕಲ್ಲಂಗಡಿ, ದ್ರಾಕ್ಷಿ, ಬಾಳೆಹಣ್ಣು, ಪಪ್ಪಾಯಿ ಹೀಗೆ ವಿವಿಧ ರೀತಿಯ ಹಣ್ಣುಗಳನ್ನು ಬೆಳೆದಿರುವ ರೈತರ ಪಾಲಿಗೆ ಈ ವರ್ಷ ಮಹಾಮಾರಿ ಕೊರೊನಾ ಭಾರಿ ಹೊಡೆತ ನೀಡಿದೆ. ಕಳೆದ ಒಂದು ತಿಂಗಳಿಂದ ಜಾರಿಯಲ್ಲಿರುವ  ಲಾಕ್ಡೌನ್ ಮತ್ತು ಸೀಲ್ ಡೌನ್ ಹೊಡೆತಕ್ಕೆ ಸಿಕ್ಕು ಗೃಹ ಬಂಧನಕ್ಕೊಳಗಾಗಿರುವ ಜನರು ಮಾರುಕಟ್ಟೆಗೆ ಬರದಂತಾಗಿದ್ದು, ತಾವು ಸಾಲ ಸೂಲ ಮಾಡಿ ಬೆಳೆದ ಹಣ್ಣುಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲು ರೈತರು ಪಡಬಾರದ ಕಷ್ಟ ಪಡುತ್ತಿದ್ದರೆ ಎಂತಹವರ ಹೃದಯವೂ ಕರಗುತ್ತದೆ.

ಬೆಲೆ ಕುಸಿತದ ಮಧ್ಯೆ ಬೆಳೆದ ತೋಟದ ಹಣ್ಣುಗಳನ್ನು ಮಾರುಕಟ್ಟೆಗೆ ಕಳುಹಿಸುತ್ತಿರುವ ರೈತರು, ಬಿರುಬಿಸಿಲಿನಲ್ಲಿ ಕುಳಿತುಕೊಳ್ಳುವ ಗ್ರಾಹಕರಿಗಾಗಿ ಚಾತಕ ಪಕ್ಷಿಯಂತೆ ಕಾಯಬೇಕಾದ ದುಸ್ಥಿತಿ ಎದುರಾಗಿದೆ.  ಬಹುತೇಕ ತೋಟಗಳಲ್ಲಿಯೇ ಹಣ್ಣುಗಳು ಮಣ್ಣು ಪಾಲಾಗುತ್ತಿದ್ದರೆ, ಇತ್ತ ನಗರದ ಗೋದಾಮುಗಳಲ್ಲಿ ಸಂಗ್ರಹಿಸಲಾಗುತ್ತಿರುವ ರುಚಿ ಮಾವು, ಬಾಳೆ, ದ್ರಾಕ್ಷಿ ಕೊಳೆತು ಹಾಳಾಗುತ್ತಿವೆ. ಇದರಿಂದ ರೈತರು ಮತ್ತು ವ್ಯಾಪಾರಿಗಳು ಭಾರಿ ನಷ್ಟ ಅನುಭವಿಸುತ್ತಿದ್ದಾರೆ.

ವ್ಯಾಪಾರವಾಗದೆ ಹಣ್ಣುಗಳು ಗೋದಾಮಿನಲ್ಲಿ ಬಿದ್ದು ಕೊಳೆಯುತ್ತಿವೆ. ಕೊರೊನಾ ನಿಯಂತ್ರಣದ ಹೋರಾಟದಲ್ಲಿ ಎಲ್ಲೆಡೆ ಮಾರುಕಟ್ಟೆಗಳು ಲಾಕ್ ಆಗಿವೆ. ಪರಿಣಾಮ ವ್ಯವಹಾರದಲ್ಲಿ ಕುಸಿತ ಕಂಡಿದೆ. ಖರೀದಿಸಿ ತರಲಾದ ಹಣ್ಣುಗಳು ಬಜಾರಿನಲ್ಲಿ ಬಿಕರಿಯಾಗುತ್ತಿಲ್ಲ. ಇದರಿಂದ ವ್ಯಾಪಾರಿಗಳೂ ಸಹ ನಷ್ಟದ ಹೊಡೆತಕ್ಕೆ ಸಿಲುಕಿ ಒದ್ದಾಡುತ್ತಿದ್ದಾರೆ. ರೈತರು ವ್ಯಾಪಾರಸ್ಥರು ಬೇಗ ಈ ಕೊರೋನಾದಿಂದ ಮುಕ್ತಗೊಳಿಸಬೇಕೆಂದು ಪ್ರಾರ್ಥಿಸುತ್ತಿದ್ದಾರೆ.