News

ಮುಂಗಾರು ಬೆಳೆಗಳಲ್ಲಿ ಕೀಟ ಮತ್ತು ರೋಗಗಳ ನಿರ್ವಹಣೆ ಕುರಿತು ತರಬೇತಿ ಜೂನ್ 26ರಂದು

25 June, 2021 4:52 PM IST By:

ಬಿತ್ತಿದಂತೆ ಬೆಳೆ ಎನ್ನುವ ಗಾದೆಯನ್ನು ಹಲವು ಆಯಾಮಗಳಲ್ಲಿ ಅರ್ಥೈಸಬಹುದು. ಇಳುವರಿಯನ್ನು ಗಮನದಲ್ಲಿ ಇರಿಸಿಕೊಂಡಾಗ, ಬೀಜ ಬಿತ್ತನೆಯ ಸಮಯ, ಹವಾಗುಣ, ಮಣ್ಣಿನ ಫಲವತ್ತತೆಯ ಜೊತೆಗೆ ಬೆಳೆಗಳನ್ನು ಕಾಡುವ ವಿವಿಧ ರೋಗಗಳನ್ನು ಹಾಗೂ ಕೀಟ ಬಾಧೆಗಳನ್ನೂ ಗಮನಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ವಿವಿಧ ಬೆಳೆಗಳಿಗೆ ತಗಲುವ ನಾನಾ ರೋಗಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಬೇಕಾಗುತ್ತದೆ. ಆಧುನಿಕ ಬೇಸಾಯ ಕ್ರಮಗಳನ್ನು ಅಳವಡಿಸಿಕೊಂಡಲ್ಲಿ ಬೆಳೆ ರೋಗಗಳನ್ನು ತಡೆದು, ಆಗಬಹುದಾದ ನಷ್ಟದ ಪ್ರಮಾಣವನ್ನು ತಗ್ಗಿಸಬಹುದು.

ಅಂತಹ ನಿರ್ವಹಣಾ ಕ್ರಮಗಳ ಕುರಿತು ಸಮಗ್ರ ಮಾಹಿತಿ ನೀಡುವ ಉದ್ದೇಶದಿಂದ ಬೀದರ್ ಕೃಷಿ ವಿಜ್ಞಾನ ಕೇಂದ್ರವು ಜೂನ್ 26ರಂದು ಶನಿವಾರ ‘ಮುಂಗಾರು ಬೆಳೆಗಳಲ್ಲಿ ಕೀಟ ಮತ್ತು ರೋಗಗಳ ನಿರ್ವಹಣೆ’ ಕುರಿತು ಆನ್‌ಲೈನ್ ತರಬೇತಿ ಕಾರ್ಯಾಗಾರ ಹಮ್ಮಿಕೊಂಡಿದೆ. ಜೂನ್ 26ರಂದು ಶನಿವಾರ ಬೆಳಗ್ಗೆ 11 ಗಂಟೆಗೆ ಸರಿಯಾಗಿ ಕಾರ್ಯಾಗಾರವು ಆರಂಭವಾಗಲಿದೆ. ಗೂಗಲ್ ಮೀಟ್ ವೇದಿಕೆಯಲ್ಲಿ ತರಬೇತಿ ನೀಡಲಾಗುತ್ತಿದ್ದು, ಆಸಕ್ತ ರೈತರು ಪಾಲ್ಗೊಳ್ಳಬಹುದಾಗಿದೆ.

ರೈತರು ಬೆಳೆಯುವ ಪ್ರತಿಯೊಂದು ಬೆಳೆಯೂ (ಕೃಷಿ ಅಥವಾ ತೋಟಗಾರಿಕೆ ಬೆಳೆ) ಒಂದಾದ ರೊಂದು ರೋಗಕ್ಕೆ ತುತ್ತಾಗುವದು ಸಾಮಾನ್ಯ. ಅವುಗಳಿಂದ ಆಗುವ ಹಾನಿ ಕೂಡ ಅಪಾರ. ಈ ರೋಗಗಳಿಗೆ ಕಾರಣವಾದ ರೋಗಾಣು, ಅವುಗಳ ಜೀವನ ಚರಿತ್ರೆ, ಅವು ಹರಡುವ ವಿಧಾನಗಳನ್ನು ತಿಳಿದುಕೊಂಡಲ್ಲಿ ಅವುಗಳನ್ನು ಪರಿಣಾಮಕಾರಿಯಾಗಿ ನಾಶಪಡಿಸುವ ವಿಧಾನ ಅನುಸರಿಸಲು ಸಾಧ್ಯವಾಗುತ್ತದೆ. ಸಂರಕ್ಷಣಾ ಕ್ರಮಗಳು ಒಂದೇ ರೀತಿಯಾಗಿರದೇ ನಾನಾ ವಿಧವಾಗಿರುತ್ತವೆ. ಅವುಗಳನ್ನೆಲ್ಲಾ ಅರಿತು ಸಂದರ್ಭಕ್ಕೆ ಅನುಗುಣವಾಗಿ ಸೂಕ್ತ ಕ್ರಮಗಳನ್ನು ಕೈ ಕೊಂಡಲ್ಲಿ ಸಸ್ಯ ರೋಗಗಳ ತೀವ್ರತೆಯನ್ನು ಕಡಿಮೆಗೊಳಿಸಬಹುದು. ಅಲ್ಲದೆ, ಅಧಿಕ ಇಳುವರಿ ಹಾಗೂ ಹೆಚ್ಚಿನ ಆದಾಯವನ್ನು ಕೂಡ ಪಡೆಯಲು ಸಾಧ್ಯವಾಗುತ್ತದೆ.

ಬೇಳೆಕಾಳುಗಳ ಕಣಜ ಎಂಬ ಖ್ಯಾತಿ ಹೊಂದಿರುವ ಬೀದರ್ ಜಿಲ್ಲೆಯಲ್ಲಿ ಪ್ರಮುಖವಾಗಿ ತೊಗರಿ, ಹೆಸರು, ಉದ್ದು, ಸೋಯಾ ಅವರೆ, ಜೋಳ, ಸಜ್ಜೆ ಹಾಗೂ ಇತರೆ ಸಿರಿಧಾನ್ಯಗಳನ್ನು ಬೆಳೆಯಲಾಗುತ್ತಿದೆ. ಈಗಾಗಲೆ ಮುಂಗಾರು ಬೆಳೆಗಳ ಬಿತ್ತನೆ ಮುಗಿಯವ ಹಂತದಲ್ಲಿದ್ದು, ಕೆಲವೊಂದು ಪ್ರದೇಶಗಳಲ್ಲಿ ಮೊಳಕೆ ಬಂದಿದೆ. ಇನ್ನೂ ಕೆಲವು ಕಡೆ 15 ರಿಂದ 20 ದಿನಗಗಳ ಬೆಳೆಗಳಿವೆ. ಈ ಸಂದರ್ಭದಲ್ಲಿ ಅನೇಕ ರಸಹೀರುವ ಕೀಟ, ಕಾಂಡ ನೋಣ ಹಾಗೂ ಎಲೆ ತಿನ್ನುವ ಕೀಟಗಳ ಜೋತಗೆ ರೋಗಗಳು ದಾಳಿವಿಡುವ ಸಂಭವವಿದೆ. ಇದಲ್ಲದೆ ಸದ್ಯದ ಬೆಳಗಳಲ್ಲಿ ಬಸವನ ಹುಳು, ದುಡ್ಡಿನ ಹುಳು ಅಥವಾ ಗಾಣದ ಹುಳಿವಿನ ಬಾಧೆ ಕಂಡುಬAದಿದೆ.

ವಿವಿಧ ಬೆಳೆಗಳಿಗೆ ಸಂಬAಧಿಸಿದ ಈ ಸಮಸ್ಯೆಗಳಿಗೆ ಪೂರಕವಾಗಿ ಕೋವಿಡ್-19 ಸಮಯದಲ್ಲಿ ರೈತರಿಗೆ ಬೇಕಾದ ತಾಂತ್ರಿಕತೆಗಳನ್ನು ಅವರಿರುವಲ್ಲಿಗೇ ತಲುಪಿಸುವ ಉದ್ದೇಶದಿಂದ ಬೀದರ್ ಕೃಷಿ ವಿಜ್ಞಾನ ಕೇಂದ್ರವು ನಡೆಸಿಕೊಂಡು ಬರುತ್ತಿರುವ ಸರಣಿ ಆನ್ ಲೈನ್ ಕಾರ್ಯಕ್ರಮ ‘ಕೆವಿಕೆ ಕೃಷಿ ಪಾಠ ಶಾಲೆ’ ಅಡಿಯಲ್ಲಿ ಈ ಶನಿವಾರ (ಜುನ್ 26) ರೈತರಿಗಾಗಿ ‘ಮುಂಗಾರು ಬೆಳೆಗಳಲ್ಲಿ ಕೀಟ ಮತ್ತು ರೋಗಗಳ ನಿರ್ವಹಣೆ’ ಹಾಗೂ ಶಂಖದ ಹುಳುವಿನ ಸಮಗ್ರ ನಿರ್ವಹಣೆ ಕುರಿತು ವಿಷಯ ಮಂಡನೆ ಹಾಗೂ ಚರ್ಚೆ ನಡೆಯಲಿದೆ.

ಈ ತರಬೇತಿಯಲ್ಲಿ ಮುಂಗಾರು ಬೆಳೆಗಳಾದ ತೊಗರಿ, ಹೆಸರು, ಉದ್ದು, ಸೋಯಾ ಅವರೆ, ಜೋಳ ಹಾಗೂ ಇನ್ನಿತರ ಬೆಳೆಗಳಲ್ಲಿ ಬರುವ ಕೀಟಗಳ ನಿರ್ವಹಣೆ ಬಗ್ಗೆ ಬೀದರ್ ಕೆವಿಕೆ ಮುಖ್ಯಸ್ಥರು ಹಾಗೂ ಹಿರಿಯ ವಿಜ್ಞಾನಿ ಡಾ.ಸುನೀಲಕುಮಾರ ಎನ್.ಎಂ ಹಾಗೂ ರೋಗಗಳ ನಿರ್ವಹಣೆ ಬಗ್ಗೆ ಕೃಷಿ ವಿಜ್ಞಾನ ಕೇಂದ್ರ ಕಲಬುರಗಿಯ ಸಸ್ಯರೋಗ ತಜ್ಞರಾದ ಡಾ.ಜಹೀರ ಅಹಮದ್ ಮಾಹಿತಿ ನೀಡಲಿದ್ದಾರೆ. ತರಬೇತಿ ಕಾರ್ಯಾಗಾರ ಮುಗಿದ ಬಳಿಕ ರೈತರೊಂದಿಗೆ ಚರ್ಚೆ ನಡೆಯಲಿದೆ.

ಗೂಗಲ್ ಮೀಟ್ ವೇದಿಕೆಯಯಲ್ಲಿ ಈ ತರಬೇತಿ ಕಾರ್ಯಾಗಾರ ನಡೆಯಲಿದ್ದು, ಆಸಕ್ತ ರೈತರು meet.google.com/ssf-xmuy-ofu ಈ ಲಿಂಕ್ ಬಳಸಿಕೊಂಡು ಭಾಗವಹಿಸಬಹುದು. ಹೆಚ್ಚಿನ ಸಸಂಖ್ಯೆಯ ರೈತರು ಭಾಗವಹಿಸಿ ಈ ತರಬೇತಿಯ ಪ್ರಯೋಜನ ಪಡೆಯಬೇಕು ಎಂದು ಡಾ. ಸುನೀಲಕುಮಾರ ಎನ್.ಎಂ ಅವರು ಮನವಿ ಮಾಡಿದ್ದಾರೆ.