News

ಮೆಕ್ಕೆಜೋಳಕ್ಕೆ ಸೈನಿಕ ಹುಳಗಳ ಬಾಧೆ- ರೈತರಲ್ಲಿ ಆತಂಕ

22 August, 2020 4:38 PM IST By:

ವಾಣಿಜ್ಯ ಬೆಳೆ ಮೆಕ್ಕೆ (maize) ಜೋಳಕ್ಕೆ ಹುಳುಗಳ ಬಾಧೆ ವಿಪರೀತವಾಗಿದ್ದರಿಂದ ರೈತರು ದಿಕ್ಕುತೋಚದಂತಾಗಿದ್ದಾರೆ. ಇದರೊಂದಿಗೆ ಎಲೆಗಳ ಮೇಲೆ ಚುಕ್ಕೆಗಳಂಥ ಗುರುತುಗಳಾಗಿ ಕ್ರಮೇಣ ಎಲೆ ಪೂರ್ಣ ನಾಶವಾಗುತ್ತವೆ. ರೈತರಿಗೆ ಕೊರೊನಾಕ್ಕಿಂತ ಸೈನಿಕ ಹುಳು(army worm) ವಿನದ್ದೇ ದೊಡ್ಡ ಚಿಂತೆಯಾಗಿದೆ. ಕೀಟ ಬೆಳೆಯ ಎಲೆಯನ್ನು ಸಂಪೂರ್ಣ ತಿಂದು ಹಾಕುವುದರಿಂದ ಬೆಳವಣಿಗೆಯಲ್ಲಿ ಕುಂಠಿತವಾಗುವುದಲ್ಲದೆ ಇಳುವರಿಯೂ ಕಡಿಮೆಯಾಗುವ ಸಾಧ್ಯತೆಯಿದೆ.

ಉತ್ತಮುವಾಗಿ ಸುರಿದ ಮಳೆಯಿಂದಾಗಿ ಸಮೃದ್ಧವಾಗಿ ಬೆಳೆದ ಮೆಕ್ಕೆಜೋಳಕ್ಕೆ ತಗುಲಿದ ಈ ರೋಗಗಳು ರೈತರ ನೆಮ್ಮದಿಯನ್ನೇ ಕಸಿದುಕೊಂಡಿದೆ. ಬೆಳೆ ರಕ್ಷಿಸಿಕೊಳ್ಳಲು ರೈತರು ಹೈರಾಣರಾಗುತ್ತಿದ್ದಾರೆ. ಈ ಹುಳಗಳು 80 ಬಗೆಯ ಬೆಳಗಳ ಎಲೆಯನ್ನು ತಿನ್ನುತ್ತವೆ. ನಿಯಂತ್ರಿಸದಿದ್ದರೆ  ಉತ್ಪಾದನೆ ಭಾರಿ ಪ್ರಮಾಣದಲ್ಲಿ ಆಹಾರ ಉತ್ಪಾದನೆ ಕುಸಿಯಲಿದೆ ಎಂದು ಕೃಷಿ ತಜ್ಞರು ತಿಳಿಸಿದ್ದಾರೆ.

ಜೋಳದ ಸುಳಿಯಲ್ಲಿ ಹುಳು :

ಅನೇಕ ಬೆಳೆಗಳಿಗೆ ಈ ಹುಳು ಬಾಧಿಸುವುದು ಒಂದೆಡೆಯಾದರೆ ಇದೀಗ ಇದರ ಹೊಸ ಪ್ರಭೇದ ಮೆಕ್ಕೆಜೋಳದ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತಿದೆ. ಹುಳು ಜೋಳದ ಸುಳಿಗೆ ನಿಧಾನವಾಗಿ ಸೇರಿಕೊಳ್ಳುತ್ತದೆ. ಒಂದು ಹುಳು ಕನಿಷ್ಠ 1 ಸಾವಿರ ಮೊಟ್ಟೆ ಇಡಲಿದ್ದು, ಜೀವನಚಕ್ರ 1 ತಿಂಗಳಲ್ಲಿ ಮುಗಿದು ಹುಳು ಸಂಖ್ಯೆ ಹೆಚ್ಚಾಗುತ್ತವೆ. ಎಲೆಗಳನ್ನು ತಿಂದು ಹಾಕುತ್ತವೆ. ಪ್ರಾರಂಭದಲ್ಲಿಯೇ ಸೂಕ್ತ ಔಷಧ ಸಿಂಪಡಿಸಿ ನಿಯಂತ್ರಿಸದಿದ್ದರೆ ಗಿಡವೇ ನಾಶವಾಗುತ್ತದೆ ಎಂದು ಇಲಾಖೆ ಎಚ್ಚರಿಸಿದೆ.

ಸೈನಿಕ ಹುಳಗಳಿಂದ ರಕ್ಷಣೆ:

ಸೈನಿಕ ಹುಳಗಳು ದೊಡ್ಡ ಪ್ರಮಾಣದಲ್ಲಿದ್ದರೆ ಕೂಡಲೇ ಅವುಗಳನ್ನು ಕೈಯಿಂದ ಹೆಕ್ಕಿ ತೆಗೆದು ನಾಶಪಡಿಸಬೇಕು. ಜೈವಿಕ ಶಿಲೀಂದ್ರ ಕೀಟನಾಶಕಗಳಾದ ನ್ಯುಮೇರಿಯಾ ರಿಲೈ ಅಥವಾ ಮೆಟಾರೈಜಿಯಂ ಅನಿಸೋಫ್ಲಿಯೆಯನ್ನುಪ್ರತಿ ಲೀ. ನೀರಿಗೆ 2ಗ್ರಾಂ. ಬೆರೆಸಿ ಸಿಂಪಡಿಸಬೇಕು. ಮೊನೋಕ್ರೊಟೋಪಾಸ್‌ ವಿಷ ಪಾಶಾಣವನ್ನು ತಯಾರಿಸಿ ಬೆಳೆಯ ಸುಳಿಗೆ ಹಾಕಬೇಕು. ಇಲ್ಲವೇ ಹಿಮಾಮೆಟಿಕ್‌ ಬೆಂಜೋವಿಟ್‌ನ್ನು ಸಿಂಪಡಿಸುವಂತೆ ಸಲಹೆ ನೀಡಿದ್ದಾರೆ.

ಸೈನಿಕ ಹುಳ ಕೀಟ ಬಾಧೆ ನಿಯಂತ್ರಿಸಲು ಬೆಳೆಯಲ್ಲಿ ಕೀಟಭಕ್ಷಕ ಪಕ್ಷಿಗಳಿಗೆ ಕುಳಿತುಕೊಳ್ಳಲು ಆಶ್ರಯತಾಣ ಒದಗಿಸುವುದು. ಪ್ರತಿ ಎಕರೆಗೆ 10 ಪಕ್ಷಿಗಳ ಆಶ್ರಯತಾಣ ಅಳವಡಿಸುವುದು ಸೂಕ್ತ ಅಥವಾ ಬೆಳೆಯು 10-15 ದಿನಗಳಿರುವಾಗ ಪ್ರತಿ ಎಕರೆಗೆ 15 ಫೆರೇಮೋನ್‌ ಬಲೆಗಳನ್ನು ಅಳವಡಿಸಬೇಕೆಂದು ಕೃಷಿ ಇಲಾಖೆ ಸಲಹೆ ನೀಡಿದೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಕೃಷಿ ಇಲಾಖೆ ಅಥವಾ ರೈತ ಸಂಪರ್ಕ ಕಚೇರಿಗೆ ಸಂಪರ್ಕಿಸಲು ಕೋರಲಾಗಿದೆ.