News

ಅಡಕೆ ಸಂಶೋಧನೆಗೆ ರಾಜ್ಯ ಸರ್ಕಾರ ನಿರ್ಧಾರ: ಎಂಎಸ್‌ ರಾಮಯ್ಯ ಅಪ್ಲೈಡ್‌ ಸೈನ್ಸ್‌ ವಿಭಾಗದಿಂದ ಸಂಶೋಧನೆ

25 September, 2020 1:05 PM IST By:

ಅಡಕೆ ಕುರಿತ ಸಂಶೋಧನೆ ಕ್ಲಿನಿಕಲ್‌ ಟ್ರಯಲ್‌ ಕೈಗೊಳ್ಳುವ ಹೊಣೆಯನ್ನು ಪ್ರತಿಷ್ಠಿತ ಬೆಂಗಳೂರಿನ ಎಂ.ಎಸ್‌.ರಾಮಯ್ಯ ಸಂಸ್ಥೆಯ ಅಪ್ಲೈಡ್‌ ಸೈನ್ಸ್‌ ವಿಭಾಗಕ್ಕೆ ವಹಿಸಲು ಸರ್ಕಾರದ ಸಮ್ಮತಿ ನೀಡಿದೆ.
ಅಡಕೆ ಟಾಸ್ಕ್‌ಫೋರ್ಸ್‌ ಅಧ್ಯಕ್ಷ ಹಾಗೂ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. 

ಟಾಸ್ಕ್‌ಫೋರ್ಸ್‌ ರಚನೆ ಬಳಿಕ ನಡೆದ ಮೂರನೇ ಸಭೆಯಲ್ಲಿ ಅಡಕೆ ಸಂಬಂಧಿಸಿ ಸಂಶೋಧನಾ ಚಟುವಟಿಕೆಗೆ ಏನೆಲ್ಲ ಮಾಡಬಹುದು ಎಂಬ ಬಗ್ಗೆ ತಜ್ಞರು ಮಾಹಿತಿ ನೀಡಿದರು. ಎಂ.ಎಸ್‌.ರಾಮಯ್ಯ ಸಂಸ್ಥೆಯ ತಜ್ಞರೂ ಈ ಸಭೆಯಲ್ಲಿ  ಭಾಗಿಯಾಗಿದ್ದರು.

ಮುಂದಿನ 15 ತಿಂಗಳ ಅವಧಿಯಲ್ಲಿ ಎಂ.ಎಸ್‌.ರಾಮಯ್ಯ ಸಂಸ್ಥೆಯ ಅಪ್ಲೈಡ್‌ ಸೈನ್ಸ್‌ನ ತಜ್ಞರು ವರದಿ ಸಲ್ಲಿಸಲಿದ್ದಾರೆ. ಈ ಸಂಬಂಧ ಅವರು ರಾಜ್ಯದಲ್ಲಿ ಅಡಕೆ ಬೆಳೆಯುವ ಎಲ್ಲ ಪ್ರದೇಶದಿಂದ ಮಾದರಿ ಸಂಗ್ರಹಿಸಲಿದ್ದಾರೆ.

ರಿಸರ್ಚ್ ಸೆಂಟರ್‌ಗೆ ಮನವಿ:  ಕಳೆದ ಲೋಕಸಭಾ ಚುನಾವಣೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾಸ ತೀರ್ಥಹಳ್ಳಿಯಲ್ಲಿ ಅಡಕೆ ಸಂಶೋಧನಾ ಕೇಂದ್ರ ಪ್ರಾರಂಭಿಸುವುದಾಗಿ ಭರವಸೆ ನೀಡಿದ್ದರು. ಈ ಉದ್ದೇಶಕ್ಕೆ 10 ಕೋಟಿ ರೂ. ಒದಗಿಸುವುದಾಗಿ ಈ ಹಿಂದೆ ಕೇಂದ್ರ ಕೃಷಿ ಸಚಿವರಾಗಿದ್ದ ರಾಧಾ ಮೋಹನ್‌ ಸಿಂಗ್‌ ಹೇಳಿದ್ದರು. ಈ ಎರಡೂ ವಿಚಾರವಾಗಿ ಅಮಿತ್‌ ಶಾ ಅವರನ್ನು ಭೇಟಿಯಾಗಿ ಪ್ರಸ್ತಾವನೆ ಸಲ್ಲಿಸಬೇಕು ಎಂಬ ನಿರ್ಣಯಕ್ಕೆ ಬರಲಾಯಿತು. ಹಾಗೆಯೇ ಆಮದು ಅಡಕೆಯ ದರವನ್ನು ಕೆಜಿಗೆ 250 ರೂ. ದಿಂದ 350 ರೂ.ಗೆ ಹೆಚ್ಚಿಸಲು ಕೇಂದ್ರ ವಾಣಿಜ್ಯ ಸಚಿವರಿಗೆ ಮನವಿ ಸಲ್ಲಿಸಬೇಕು. ಸ್ವೀಟ್‌ ಸುಪಾರಿ ಮತ್ತು ಸೆಂಟೆಡ್‌ ಸುಪಾರಿಗಳ ಮೇಲಿನ ಜಿಎಸ್‌ಟಿ ತೆರಿಗೆ ಪ್ರಮಾಣವನ್ನು ಶೇ.18ರಿಂದ ಶೇ.13ಕ್ಕೆ ಇಳಿಸಲು ಜಿಎಸ್‌ಟಿ ಕೌನ್ಸಿಲ್‌ನ ರಾಜ್ಯದ ಪ್ರತಿನಿಧಿ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ನೀಡಬೇಕು. ಅಡಕೆ ಸಂಬಂಧದ ಸಂಶೋಧನೆ ಮುಕ್ತಾಯವಾಗುವವರೆಗೆ ಸುಪ್ರೀಂಕೋರ್ಟ್‌ ವಿಚಾರಣೆಗೆ ತಡೆ ಕೋರಲು ನಿರ್ಧಾರ ಕೈಗೊಳ್ಳಲಾಗಿದೆ.