News

ಗ್ರಾಹಕರಿಗೆ ಸಿಲಿಂಡರ್ ಬಿಸಿ- ಎಲ್‌ಪಿಜಿ ಸಿಲಿಂಡರ್‌ ದರ 50 ರೂ. ಹೆಚ್ಚಳ

09 December, 2020 6:32 AM IST By:

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವ ಬೆನ್ನಲ್ಲೆ ಈಗ ಸಬ್ಸಿಡಿಯುಕ್ತ ಅಡುಗೆ ಅನಿಲ (ಎಲ್ಪಿಜಿ) ಸಿಲಿಂಡರ್ ದರದಲ್ಲೂ 50 ರೂಪಾಯಿ ಏರಿಕೆಯಾಗಿದೆ.
ಈ ಹಿಂದೆ ಜುಲೈನಲ್ಲಿ ಕೊನೆಯ ಬಾರಿಗೆ ದರ ಪರಿಷ್ಕರಣೆಯಾಗಿತ್ತು. ಹೀಗಾಗಿ 5 ತಿಂಗಳಿನ ನಂತರ ಅಡುಗೆ ಅನಿಲ ದರದಲ್ಲಿ 50 ರೂಪಾಯಿ ಹೆಚ್ಚಳವಾದಂತಾಗಿದೆ.

ಸರ್ಕಾರವು ಒಂದು ವರ್ಷದಲ್ಲಿ 12 ಸಿಲಿಂಡರ್‌ಗಳಿಗೆ ಸಬ್ಸಿಡಿ ನೀಡುತ್ತದೆ. ಅದರ ನಂತರ ನೀವು ಮಾರುಕಟ್ಟೆ ದರದಲ್ಲಿ ಸಿಲಿಂಡರ್‌ಗಳನ್ನು ಖರೀದಿಸಬೇಕು. ಆದರೆ ಇದೀಗ ನೀವು ಹೆಚ್ಚುವರಿ ಸಬ್ಸಿಡಿ ರಹಿತ ಸಿಲಿಂಡರ್ ಖರೀದಿಸಲು 50 ರೂಪಾಯಿಗಳನ್ನು ಹೆಚ್ಚು ಪಾವತಿಸಬೇಕಾಗುತ್ತದೆ.

ಹೊಸ ಎಲ್‌ಪಿಜಿ ದರಗಳು :

ಐಒಸಿ ವೆಬ್‌ಸೈಟ್‌ನ ಪ್ರಕಾರ ಈ ಹೆಚ್ಚಳದೊಂದಿಗೆ ದೆಹಲಿಯಲ್ಲಿ 14.2 ಕೆಜಿ ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್ ದರ 644 ರೂ. ಆಗಿದ್ದು, ಈ ಮೊದಲು 594 ರೂ. ಇತ್ತು. ಕೋಲ್ಕತ್ತಾದಲ್ಲೂ ಇದರ ದರ 670.50 ರೂ.ಗಳಿಗೆ ಏರಿದೆ, ಅದು ಮೊದಲು 620.50 ರೂ. ಆಗಿತ್ತು. ಮುಂಬೈಯಲ್ಲಿ ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 594 ರೂ.ಗಳಿಂದ 644 ರೂ.ಗೆ ಏರಿದೆ. ಚೆನ್ನೈನಲ್ಲಿ ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್ ಬೆಲೆ 610 ರೂ.ಗಳಿಂದ 660 ರೂ.ಗೆ ಏರಿದೆ. ಇದಲ್ಲದೆ ವಾಣಿಜ್ಯ ಸಿಲಿಂಡರ್ ಬೆಲೆಯನ್ನೂ 56 ರೂ.ಗೆ ಹೆಚ್ಚಿಸಲಾಗಿದೆ. ಬೆಂಗಳೂರಿನಲ್ಲಿ ಪ್ರತಿ ಸಿಲಿಂಡರ್‌ ದರ 647 ರೂ.ಗೆ ಏರಿಕೆಯಾಗಿದ್ದು, 50 ರೂ. ಹೆಚ್ಚಳವಾಗಿದೆ. ಇದಕ್ಕೂ ಮುನ್ನ 597 ರೂ.ನಲ್ಲಿತ್ತು. ತೈಲ ಕಂಪನಿಗಳು ತಮ್ಮ ವೆಬ್‌ ಸೈಟ್‌ನಲ್ಲಿ ಹೊಸ ದರವನ್ನು ಪ್ರಕಟಿಸಿವೆ.

ಸಬ್ಸಿಡಿ ಬಗ್ಗೆ ಗೊಂದಲ:

ಸಬ್ಸಿಡಿಯುಕ್ತ ಅಡುಗೆ ಅನಿಲದ ದರ ಏರಿದ್ದರೂ, ಸಬ್ಸಿಡಿ ರೂಪದಲ್ಲಿ ಗ್ರಾಹಕರಿಗೆ ಸಿಗಲಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕಳೆದ 6 ತಿಂಗಳಿನಿಂದ ಎಲ್ಪಿಜಿ ಸಬ್ಸಿಡಿ ವಿತರಣೆಯಾಗುತ್ತಿರಲಿಲ್ಲ. ಸಬ್ಸಿಡಿ ಮೊತ್ತವನ್ನು ಗ್ರಾಹಕರು ಸಿಲಿಂಡರ್‌ ಖರೀದಿಸಿದ ನಂತರ ಅವರ ಬ್ಯಾಂಕ್‌ ಖಾತೆಗೆ ಜಮೆ ಮಾಡಲಾಗುತ್ತಿತ್ತು.

ಕಳೆದ ಮೇ ನಂತರ ಕೋವಿಡ್‌-19 ಬಿಕ್ಕಟ್ಟಿನ ಪರಿಣಾಮ ಅಂತಾರಾಷ್ಟ್ರೀಯ ಕಚ್ಚಾ ತೈಲದ ದರ ಸತತ ಕುಸಿದಿತ್ತು. ಇದರ ಪರಿಣಾಮ ಕಚ್ಚಾ ತೈಲದ ಖರೀದಿ ದರವು ಮಾರುಕಟ್ಟೆ ದರಕ್ಕೆ ಇಳಿಮುಖವಾಗಿತ್ತು. ಹೀಗಾಗಿ ಎಲ್ಪಿಜಿ ಬಳಕೆದಾರರಿಗೆ ಯಾವುದೇ ಸಬ್ಸಿಡಿಯನ್ನು ಸರಕಾರ ನೀಡಿರಲಿಲ್ಲ.