News

ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್ ದರ 25 ರೂಪಾಯಿ ಏರಿಕೆ

01 September, 2021 5:08 PM IST By:

ಕೆಲವು ದಿನಗಳ ಹಿಂದಷ್ಟೇ ಬೆಲೆ ಏರಿಕೆಯ ಬಿಸಿ ಕಂಡಿದ್ದ ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್‌ ದರದಲ್ಲಿ ಮತ್ತೆ ಏರಿಕೆಯಾಗಿದೆ. ಇದರಿಂದ ಈಗಾಗಲೇ ಹಲವು ಬೆಲೆ ಏರಿಕೆಗಳಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಮತ್ತೊಂದು ಬರೆ ಬಿದ್ದಂತಾಗಿದೆ. ಸಬ್ಸಿಡಿರಹಿತ ಅಡುಗೆ ಅನಿಲದ ದರ 25 ರೂಪಾಯಿಯಷ್ಟು ತುಟ್ಟಿಯಾಗಿದೆ.

ಪೆಟ್ರೋಲಿಯಂ ಕಂಪನಿಗಳು ಅಡುಗೆ ಅನಿಲ ದರವನ್ನು ಪ್ರತಿ ಸಿಲಿಂಡರ್‌ಗೆ 25 ರೂ. ಹೆಚ್ಚಳ ಮಾಡಿ ಸಾಲು ಸಾಲು ಹಬ್ಬಗಳು ಮುಂದಿರುವಾಗಲೇ ಗ್ರಾಹಕರಿಗೆ ಶಾಕ್ ನೀಡಿವೆ. ಪರಿಷ್ಕೃತ ದರ ತಕ್ಷಣದಿಂದಲೇ ಜಾರಿಗೆ ಬಂದಿದೆ.15 ದಿನಗಳ ಅವಧಿಯಲ್ಲಿ ಸಿಲಿಂಡರ್ ದರವನ್ನು 50 ರೂ.ಗೆ ಹೆಚ್ಚಳ ಮಾಡಲಾಗಿದೆ. ಈಗಾಗಲೆ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 100 ರೂ ಗಡಿ ದಾಟಿದೆ. ಇದೇ ರೀತಿ ಅಡುಗೆ ಅನಿಲ ದರವು ಏರಿಕೆಯಾಗುತ್ತಿದ್ದರೆ ಮುಂಬರುವ ದಿನಗಳಲ್ಲಿ ಸಿಲಿಂಡರ್ ದರ 1000 ರೂ. ತಲುಪುವ ಆತಂಕ ಎದುರಾಗಿದೆ. ಪದೇ ಪದೇ ಅಡುಗೆ ಅನಿಲ ದರ ಏರಿಕೆಯಾಗುತ್ತಿರುವುದಕ್ಕೆ ಗೃಹಿಣಿಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗಾಗಲೆ ಅಗತ್ಯ ವಸ್ತುಗಳ ದರ ಏರಿಕೆಯಿಂದ ಕಂಗೆಟ್ಟಿರುವ ಜನರು ಸಾಲು ಸಾಲು ಹಬ್ಬಗಳು ಸಮೀಪಿಸುತ್ತಿರುವಾಗಲೇ ಇಂಧನ ದರ ದುಬಾರಿಯಾಗಿದೆ. ಕೂಡಲೇ ದರ ಏರಿಕೆ ಇಳಿಸಬೇಕೆಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ರಾಜಧಾನಿ ಬೆಂಗಳೂರಿನಲ್ಲಿ 14.2 ಕೆಜಿ ತೂಕದ ಸಬ್ಸಿಡಿಯೇತರ ಅಡುಗೆ ಅನಿಲದ ದರ 887 ರೂ. 50 ಪೈಸೆಯಷ್ಟು ಹೆಚ್ಚಾಗಿದೆ. ರಾಜಧಾನಿ ದೆಹಲಿಯಲ್ಲಿ ಈಗ ಸಬ್ಸಿಡಿಯೇತರ ಅಡುಗೆ ಅನಿಲ 14.2 ಕೆಜಿ ತೂಕದ ಸಿಲಿಂಡರ್ 884ರೂ. 50 ಪೈಸೆಯಷ್ಟು ಹೆಚ್ಚಳವಾಗಿದೆ.
ಗಣೇಶ ಚತುರ್ಥಿ ಹಬ್ಬಕ್ಕೆ ಕೆಲ ದಿನಗಳು ಮಾತ್ರ ಬಾಕಿ ಉಳಿದಿದ್ದು, ಈಗ ಅಡುಗೆ ಅನಿಲ ಸಿಲಿಂಡರ್ ದರವನ್ನು ಮತ್ತೆ ೨೫ ರೂ.ಗಳಿಗೆ ಏರಿಕೆ ಮಾಡಿರುವುದು ಗ್ರಾಹಕರಿಗೆ ಬರೆ ಎಳೆದಂತಾಗಿದೆ.ಜ. 1 ರಿಂದ ಸೆ. 1ರ ನಡುವೆ ಎಲ್‌ಪಿಜಿ ಸಿಲಿಂಡರ್ ಬೆಲೆ 190 ರೂ.ಗಳಷ್ಟು ಹೆಚ್ಚಳವಾಗಿದೆ. ದೇಶದ ಬಹುತೇಕ ನಗರಗಳಲ್ಲಿ ಅಡುಗೆ ಅನಿಲೆ ಬೆಲೆ ಹೆಚ್ಚಳವಾಗಿದ್ದು, ಜು. 1 ರಂದು ಎಲ್‌ಪಿಜಿ ಸಿಲಿಂಡರ್ 25 ರೂ. 50 ಪೈಸೆಯಷ್ಟು ತೈಲ ಕಂಪನಿಗಳು ಏರಿಕೆ ಮಾಡಿದ್ದವು. ಈಗ ಸೆಪ್ಟೆಂಬರ್ ತಿಂಗಳ ಮೊದಲ ವಾರದಲ್ಲೇ ಗೃಹೋಪಯೋಗಿ ಅನಿಲ ದರವನ್ನು ಹೆಚ್ಚಳ ಮಾಡಿ ಗ್ರಾಹಕರಿಗೆ ಆಘಾತ ನೀಡಿದೆ. ಈ ವರ್ಷ ಮೊದಲ ಬಾರಿಗೆ ಫೆ. 4 ರಂದು ಎಲ್‌ಪಿಜಿ ಗ್ಯಾಸ್ ಸಿಲಿಂಡರ್ 25 ರೂ.ಗೆ ಏರಿಸಲಾಗಿತ್ತು. ಫೆ. 15 ರಂದು 50 ರೂ., ಫೆ. 25 ಮತ್ತು ಮಾ. 1 ರಂದು ಮತ್ತೆ 25 ರೂ. ಹೆಚ್ಚಿಸಲಾಗಿತ್ತು. ಇದರೊಂದಿಗೆ ಫೆಬ್ರವರಿ ತಿಂಗಳಲ್ಲೇ 3 ಬಾರಿ ಅಡುಗೆ ಅನಿಲ ಸಿಲಿಂಡರ್ ದರವನ್ನು ಏರಿಕೆ ಮಾಡಲಾಗಿದೆ.
ಅಡುಗೆ ಅನಿಲ ಸಿಲಿಂಡರ್ 125 ರೂ. ಏರಿಕೆಯಾಗಿದ್ದ ವೇಳೆ ಏ. 1 ರಂದು ಪ್ರತಿ ಸಿಲಿಂಡರ್ ದರವನ್ನು 10 ರೂ.ಗೆ ಕಡಿತ ಮಾಡಲಾಗಿತ್ತು. ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಎಲ್‌ಪಿಜಿ ದರವನ್ನು ತಲಾ 25 ರೂ.ಗೆ ಹೆಚ್ಚಿಸಲಾಗಿದೆ. ಒಟ್ಟಾರೆ 3 ತಿಂಗಳಲ್ಲಿ 75 ರೂ. ಏರಿಕೆ ಕಂಡಿದೆ.
ಕಳೆದ ವರ್ಷ ಕೇಂದ್ರ ಸರ್ಕಾರ ಎಲ್‌ಪಿಜಿ ಸಿಲಿಂಡರ್ ಬೆಲೆಯ ಸಬ್ಸಿಡಿಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿತ್ತು ಸಬ್ಸಿಡಿಯೇತರ ಎಲ್ಲ ಅನಿಲ ಸಿಲಿಂಡರ್‌ಗಳ ಬೆಲೆಯನ್ನು ಏಕರೂಪಕ್ಕೆ ತರಲಾಗಿದೆ.

ಎಲ್‌ಪಿಜಿ ಸಿಲಿಂಡರ್ ಬೆಲೆಯು ರಾಜ್ಯದಿಂದ ರಾಜ್ಯಕ್ಕೆ ಸ್ಥಳೀಯ ತೆರಿಗೆಗಳಿಗೆ ಅನುಗುಣವಾಗಿ ವಿಭಿನ್ನವಾಗಿರುತ್ತದೆ. ಕೇಂದ್ರ ಸರ್ಕಾರವು ಪ್ರಸ್ತುತ ಆಯ್ದ ಗ್ರಾಹಕರಿಗೆ ಸಣ್ಣ ಮಟ್ಟದ ಸಬ್ಸಿಡಿ ನೀಡುವ ಮೂಲಕ ಅದರ ಹೊರೆಯನ್ನು ತಗ್ಗಿಸುತ್ತಿದೆ. ಸರ್ಕಾರದ ಸಬ್ಸಿಡಿ ಯೋಜನೆಗೆ ಒಳಪಟ್ಟ ಕುಟುಂಬಗಳು ವರ್ಷಕ್ಕೆ 12 ಸಿಲಿಂಡರ್‌ಗಳನ್ನು ಬಳಸುವ ಅರ್ಹತೆ ಹೊಂದಿವೆ. ಈ ಸಬ್ಸಿಡಿ ಮೊತ್ತ ಕೂಡ ತಿಂಗಳಿನಿಂದ ತಿಂಗಳಿಗೆ ಬದಲಾಗುತ್ತಿರುತ್ತದೆ.

ಬೆಂಗಳೂರು-887.50 ರೂಪಾಯಿ,  ದೆಹಲಿ- 884.50 ರೂಪಾಯಿ, ಮುಂಬೈ- 884.50 ರೂಪಾಯಿ., ಕೊಲ್ಕತ್ತ- 911 ರೂಪಾಯಿ, ಚೆನ್ನೈ- 900 ರೂಪಾಯಿ ಇದೆ.