ಒಂದೆಡೆ ದೇಶದಲ್ಲಿ ಕರೋನ ತೀವ್ರ ಆತಂಕ ಸೃಷ್ಟಿಸಿದೆ. ಮತ್ತೊಂದೆಡೆ ಗಾಯದ ಮೇಲೆ ಬರೆಯೆಳೆದಂತೆ ಅಂಫಾನ್ ಚಂಡಮಾರುತದ ಭೀಕರಕ್ಕೆ ಒರಿಸ್ಸಾ ಮತ್ತು ಪಶ್ಚಿಮ ಬಂಗಾಳ ತತ್ತರಿಸಿ ಹೋಗಿವೆ. ಇವುಗಳ ಜೊತೆಯಲ್ಲಿ ಮತ್ತೊಂದು ಆಘಾತ ಬಂದೆರಗಿದೆ. ಭಾರತದ ಉತ್ತರ ಭಾಗದ ಕೆಲವು ರಾಜ್ಯಗಳಲ್ಲಿ ಮಿಡತೆಗಳ ದಾಳಿ ಮತ್ತೊಂದು ಭೀಕರತೆ ಸೃಷ್ಟಿಸಿದೆ.
ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್, ಉತ್ತರ ಪ್ರದೇಶ ಹಾಗೂ ಮಹಾರಾಷ್ಟ್ರದಲ್ಲಿ ಮಿಡತೆಗಳ ದಾಳಿಗೆ ರೈತರು ದಿಕ್ಕುತೋಚದಂತಾಗಿದ್ದಾರೆ.ಕೋಟ್ಯಂತರ ಸಂಖ್ಯೆಯಲ್ಲಿ ಬಂದು , ಹಸಿರು ಹೊಲಗಳಲ್ಲಿನ ಬೆಳೆಯನ್ನು ತಿಂದುಹೋಗುವ ಮರುಭೂಮಿ ಮಿಡತೆಗಳ ಗುಂಪು ಹಲವೆಡೆ ಲಗ್ಗೆ ಇಟ್ಟಿದೆ.ರಾಕ್ಷಸಾಕಾರದ ಕೋಟ್ಯಂತರ ಮಿಡತೆಗಳು ಕ್ಷಣಾರ್ಧದಲ್ಲಿ ಬೆಳೆದು ನಿಂತ ಬೆಳೆಯನ್ನು ತಿಂದು ಹಾಕುತ್ತವೆ. ಈ ಮಿಡತೆಗಳ ದಾಳಿ ತಡೆಯಲು ರೈತರು ಹರಸಾಹಸಪಡುತ್ತಿದ್ದಾರೆ.
ದಿನದಲ್ಲಿ 150 ಕಿ.ಮೀ ವೇಗದಲ್ಲಿ ಹಾರುತ್ತವೆ ಮಿಡತೆಗಳು
ಅಲೆ ಅಲೆಯಾಗಿ ಬರುವ ಈ ಮಿಡತೆಗಳು ಒಂದು ದಿನದಲ್ಲಿ 150 ಕಿಲೋಮೀಟರ್ ದೂರ ಹಾರಬಲ್ಲವು. ಲಕ್ಷಾಂತರ ಸಂಖ್ಯೆಯಲ್ಲಿ ದಾಳಿ ನಡೆಸುವ ಮಿಡತೆಗಳು ಬೆಳೆಗಳ ಮೇಲೆ ದಾಳಿ ನಡೆಸುತ್ತವೆ. ದೊಡ್ಡ ಮಿಡತೆಯೊಂದು ಅಂದಾಜು ತನ್ನ ತೂಕದಷ್ಟೇ ದಿನಂಪ್ರತಿ ಆಹಾರ(ಬೆಳೆ)ವನ್ನು ತಿನ್ನುತ್ತದೆ. ಒಂದು ದಿನಕ್ಕೆ 2 ಗ್ರಾಂನಷ್ಟು ಬೆಳೆ ತಿನ್ನುತ್ತದೆ. ಹೀಗೆ 40 ಮಿಲಿಯನ್ ಮಿಡತೆಗಳು ಒಂದು ದಿನಕ್ಕೆ ತಿನ್ನುವ ಬೆಳೆಗಳು 35 ಸಾವಿರ ಜನರ ಆಹಾರಕ್ಕೆ ಸಮನಾಂತರವಾಗಿದೆ ಎಂದು ವರದಿ ತಿಳಿಸಿದೆ.
ಕ್ಷಣಾರ್ಧದಲ್ಲಿ ತಿಂದು ಹಾಕುತ್ತಿವೆ ಬೆಳೆಗಳ ಎಲೆ, ಹೂವು, ಹಣ್ಣು
ಈ ಮಿಡತೆಗಳು ಎಲೆ, ಹೂವು, ಹಣ್ಣುಗಳು, ಬೀಜ, ಗೋಧಿ, ಗಿಡದ ಕಾಂಡ, ಕೊಂಬೆಗಳನ್ನು ತಿಂದು ಕ್ಷಣಾರ್ಧದಲ್ಲಿ ಬೆಳೆಯನ್ನು ಸರ್ವನಾಶ ಮಾಡುತ್ತವೆ. ಮಧ್ಯ ಪ್ರದೇಶದ 15 ಜಿಲ್ಲೆಗಳ ವಿವಿಧ ಗ್ರಾಮಗಳ ಮೇಲೆ ದಾಳಿ ಮಾಡಿದ್ದ ಲಕ್ಷಾಂತರ ಮಿಡತೆಗಳಿಂದಾಗಿ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಈ ಬಾರಿ ಗ್ರಾಮೀಣ ಪ್ರದೇಶದ ಹೊಲಗಳನ್ನೆಲ್ಲ ಮುಕ್ಕಿ ಮುಗಿಸಿ, ರಾಜಧಾನಿ ಜೈಪುರಕ್ಕೂ ದಾಳಿ ಮಾಡಿದ್ದು, ವಸತಿ ಪ್ರದೇಶಗಳಲ್ಲಿ ದೂಳಿನ ಮೋಡಗಳಂತೆ ಗುಂಪಾಗಿ ನೆರೆದಿರುವ ಚಿತ್ರಗಳು, ವಿಡಿಯೋಗಳನ್ನು ಅಲ್ಲಿನ ನಿವಾಸಿಗಳು ಹಂಚಿಕೊಳ್ಳುತ್ತಿದ್ದಾರೆ. ಅಕ್ಕಪಕ್ಕದ ಮಧ್ಯಪ್ರದೇಶ ಹಾಗೂ ಉತ್ತರಪ್ರದೇಶಗಳು ಕೂಡ ಮಿಡತೆ ದಾಳಿಗೆ ತುತ್ತಾಗಿವೆ. ಪಂಜಾಬ್ ಮತ್ತು ಗುಜರಾತ್‌ಗಳ ರೈತರಿಗೆ ಕೂಡ ಈ ಮಿಡತೆ ದಾಳಿ ಎಚ್ಚರಿಕೆ ನೀಡಲಾಗಿದೆ.
ದೇಶಾದ್ಯಂತ ವೀಡಿಯೋ ದಾಳಿ ವೈರಲ್
ಎಲ್ಲಿ ನೋಡಿದರೂ ಮಿಡತೆಗಳ ಹಿಂಡು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಮಿಡತೆಗಳಿರುವ ಫೋಟೋಗಳನ್ನು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.