ರಾಜ್ಯದಲ್ಲಿ ಕೊರೊನಾ ಸೋಂಕಿನ ಪಾಸಿಟಿವಿ ಪ್ರಮಾಣ ಶೇ.5 ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಮತ್ತಷ್ಟು ಲಾಕ್ ಡೌನ್ ನಿಯಮ ಸರಳ ಮಾಡಿರುವ ರಾಜ್ಯ ಸರ್ಕಾರ, ಶೇ.50 ಸಾಮರ್ಥ್ಯದಲ್ಲಿ ಬಸ್, ಮೆಟ್ರೋ ಸಂಚಾರ ಹಾಗು ಸರ್ಕಾರಿ ಕಚೇರಿಯಲ್ಲಿ ಸಿಬ್ಬಂದಿಗೆ ಅವಾಕಾಶ ಮಾಡಿಕೊಟ್ಟಿದೆ. ಎರಡನೇ ಹಂತದ ಲಾಕ್ಡೌನ್ ಸಡಿಲಿಕೆ. ಜುಲೈ 5 ರವರೆಗೆ ಹೊಸ ಮಾರ್ಗಸೂಚಿ ಮುಂದುವರೆಯಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಶೇ 5ರ ಪಾಸಿಟಿವ್ ಪ್ರಮಾಣ ಇರುವ ಜಿಲ್ಲೆಗಳಾದ ಉತ್ತರ ಕನ್ನಡ, ಬೆಳಗಾವಿ, ಮಂಡ್ಯ, ಕೊಪ್ಪಳ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ಬೆಂಗಳೂರು ನಗರ ಬಿ.ಬಿ.ಎಂ.ಪಿ ಸೇರಿದಂತೆ ಗದಗ, ರಾಯಚೂರು, ಬಾಗಲಕೋಟೆ, ಕಲಬುರಗಿ, ಹಾವೇರಿ, ರಾಮನಗರ, ಯಾದಗಿರಿ ಹಾಗೂ ಬೀದರ ಜಿಲ್ಲೆಗಳಿಗೆ ಹಲವು ವಿನಾಯಿತಿ ನೀಡಲಾಗಿದೆ. ರಾಜ್ಯದಲ್ಲಿ 16 ಜಿಲ್ಲೆಗಳಲ್ಲಿ ಶೇ. 5 ರಷ್ಟು, 13 ಜಿಲ್ಲೆಗಳಲ್ಲಿ ಶೇ. 5-10, ಮೈಸೂರಿನಲ್ಲಿ ಶೇ. 10ಕ್ಕಿಂತಲೂ ಹೆಚ್ಚು ಪಾಸಿಟಿವಿಟಿ ದರ ಇದೆ. ಶೇ. 5ಕ್ಕಿಂತಲೂ ಕಡಿಮೆ ಪಾಸಿಟಿವಿಟಿ ದರ ಇರುವ ಜಿಲ್ಲೆಗಳಲ್ಲಿ ಹೆಚ್ಚಿನ ಸಡಿಲಿಕೆ ಮಾಡಲಾಗಿದೆ. ಶೇ. 5 ಮತ್ತು 10ಕ್ಕಿಂತಲೂ ಹೆಚ್ಚು ಪಾಸಿಟಿವಿಟಿ ದರ ಇರುವ ಜಿಲ್ಲೆಗಳಿಗೆ ಈ ಹಿಂದಿನ ಮಾರ್ಗಸೂಚಿಗಳೇ ಅನ್ವಯವಾಗಲಿದೆ ಎಂದರು.
ಶೇ. 5 ರಷ್ಟು ಪಾಸಿಟಿವಿಟಿ ದರ ಇರುವ ಜಿಲ್ಲೆಗಳಲ್ಲಿ ಹೆಚ್ಚು ಸಡಿಲಿಕೆ
ಶೇ. 5ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಇರುವ ಉತ್ತರ ಕನ್ನಡ, ಬೆಳಗಾವಿ, ಮಂಡ್ಯ, ಕೊಪ್ಪಳ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ಬೆಂಗಳೂರು ನಗರ, (ಬಿಬಿಎಂಪಿ ಸೇರಿದಂತೆ) ಗದಗ, ರಾಯಚೂರು, ಬಾಗಲಕೋಟೆ, ಕಲಬುರಗಿ, ಹಾವೇರಿ, ರಾಮನಗರ, ಯಾದಗಿರಿ ಹಾಗೂ ಬೀದರ್ ಜಿಲ್ಲೆಗಳಿಗೆ ಈ ಕೆಳಗಿನ ಮಾರ್ಗಸೂಚಿ ಅನ್ವಯವಾಗಲಿದೆ.
ಸಂಜೆ 5 ಗಂಟೆವರೆಗೆ ಅಂಗಡಿ ಮುಗ್ಗಟ್ಟು ತೆರೆಯಲು ಅವಕಾಶ
ಎಸಿ. ಚಾಲನೆಗೊಳಿಸದೇ ಹೋಟೆಲ್, ಕ್ಲಬ್ಸ್ ರೆಸ್ಟೋರೆಂಟ್‌ಗಳಲ್ಲಿ -ಮದ್ಯಪಾನ ಹೊರತುಪಡಿಸಿ ಕುಳಿತು ಸೇವನೆ, ಸಂಜೆ 5 ಗಂಟೆವರೆಗೆ ಶೇ 50 ಸಾಮರ್ಥ್ಯದೊಂದಿಗೆ ಅವಕಾಶ
ಬಸ್ ಮತ್ತು ಮೆಟ್ರೋ ಶೇ. 50 ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಣೆ
ಹೊರಾಂಗಣ ಕ್ರೀಡೆಗಳಿಗೆ, ವೀಕ್ಷಕರಿಲ್ಲದೇ ಅನುಮತಿ ನೀಡಲಾಗಿದೆ.
ಸರ್ಕಾರಿ,ಖಾಸಗಿ ಕಛೇರಿಗಳಿಗೆ ಶೇ. 50 ರ ಸಾಮರ್ಥ್ಯದೊಂದಿಗೆ ಕಾರ್ಯ
ಲಾಡ್ಜ್ ಗಳಲ್ಲಿ ಮತ್ತು ರೆಸಾರ್ಟ್ ಗಳಲ್ಲಿ ಶೇ. 50 ಸಾಮರ್ಥ್ಯದೊಂದಿಗೆ ಅವಕಾಶ ನೀಡಲಾಗಿದೆ.
ಜಿಮ್ ಗಳಲ್ಲಿ ಶೇ. 50 ಸಾಮರ್ಥ್ಯದೊಂದಿಗೆ ಹವಾ ನಿಯಂತ್ರಣ ಇಲ್ಲದೇ ಅವಕಾಶ ನೀಡಿದೆ.
ಶೇ. 5ಕ್ಕಿಂತ ಹೆಚ್ಚು ಪಾಸಿಟಿವಿಟಿದರ ಇರುವ ಜಿಲ್ಲೆಗಳಲ್ಲಿ ಹಿಂದಿನ ಮಾರ್ಗಸೂಚಿ ಮುಂದುವರಿಕೆ
ಹಾಸನ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಾಮರಾಜನಗರ, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ, ದಾವಣಗೆರೆ, ಕೊಡಗು, ಧಾರವಾಡ, ಬಳ್ಳಾರಿ, ಚಿತ್ರದುರ್ಗ, ವಿಜಯಪುರದಲ್ಲಿ ಜೂನ್ 11 ರಂದು ತಿಳಿಸಿದ ಮಾರ್ಗಸೂಚಿಗಳು ಮುಂದುವರೆಯಲಿದೆ. ಈ ಜಿಲ್ಲೆಗಳಲ್ಲಿ ಮಧ್ಯಾಹ್ನ 2 ಗಂಟೆಯವರೆಗೆ ಅಂಗಡಿ ವಹಿವಾಟಿಗೆ ಅವಕಾಶ ನೀಡಲಾಗಿದೆ.
ನಿರ್ಬಂಧ ಯಾವುದಕ್ಕೆ
ಈಜುಕೊಳ, ಸಭೆ, ಸಮಾರಂಭ, ರಾಜಕೀಯ ಕಾರ್ಯಕ್ರಮ, ಪೂಜಾಸ್ಥಳ, ಶಿಕ್ಷಣ ಸಂಸ್ಥೆ, ಸಿನೆಮಾ ಮಂದಿರ, ಶಾಪಿಂಗ್ ಮಾಲ್, ಪಬ್, ಅಮ್ಯೂಸ್ ಮೆಂಟ್ ಪಾರ್ಕ್ ಗಳಿಗೆ ನಿರ್ಬಂಧ ಮುಂದುವರೆಯಲಿದೆ.
ಕಳೆದ ಹಲವು ದಿನಗಳಿಂದ ಸ್ಥಗಿತಗೊಂಡಿರುವ ಚಿತ್ರೀಕರಣಕ್ಕೆ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಹೊರಾಂಗಣ ಚಿತ್ರೀಕರಣಕ್ಕೆ ಅವಕಾಶ ಮಾಡಿಕೊಟ್ಟಿರುವ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಚಿತ್ರಗಳ ಚಿತ್ರೀಕರಣ ಚಟುವಟಿಕೆ ಅವಕಾಶ ಮಾಡಿಕೊಡಲಾಗಿದೆ