News

ರಾಜ್ಯದ ನಾಲ್ಕು ಕಂದಾಯ ವಲಯಗಳಲ್ಲಿ ಸಾಲ ಮೇಳ

26 August, 2020 9:16 AM IST By:

ಲಾಕ್ಡೌನ್ ವಿಧಿಸಿದ ನಂತರ ಬಹಳಷ್ಟು ವಲಯಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಕೃಷಿ ವಲಯದಲ್ಲಿ ಸುಧಾರಣೆ ತರುವುದಕ್ಕಾಗಿ ಸರ್ಕಾರ ಮತ್ತೆ ರಾಜ್ಯದಲ್ಲಿ ಸಾಲ ಮೇಳ (Loan festival) ಆಯೋಜಿಸಲು ಮುಂದಾಗಿದೆ.

 ಬಡ ಮತ್ತು ಮಧ್ಯಮ ವರ್ಗದವರಿಗೆ ವಿವಿಧ ರೀತಿಯ ಸಾಲಗಳು ಸುಲಭವಾಗಿ ಸಿಗುವಂತೆ ಮಾಡಲು ರಾಜ್ಯದ ನಾಲ್ಕೂ ಕಂದಾಯ ವಿಭಾಗಗಳಲ್ಲಿ ಅತೀ ಶೀಘ್ರದಲ್ಲಿ ಸಾಲ ಮೇಳ ಆಯೋಜಿಸಲಾಗುವುದು ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ (Cooperative minister S.T.Somashekar) ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ಗಳ (DCC) ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಬೆಳಗಾವಿ, ಕಲಬುರಗಿ, ಬೆಂಗಳೂರು ಮತ್ತು ಮೈಸೂರು ಕಂದಾಯ ವಿಭಾಗಗಳಲ್ಲಿ ನಬಾರ್ಡ್, ಅಪೆಕ್ಸ್‌ ಬ್ಯಾಂಕ್ ಸಹಕಾರದಲ್ಲಿ ಸಾಲಮೇಳ ನಡೆಸಲು ಉದ್ದೇಶಿಸಲಾಗಿದೆ. ಎಲ್ಲರಿಗೂ ಸಾಲ ಒದಗಿಸಲು ಕ್ರಮಕೈಗೊಳ್ಳಲಾಗುವುದು ಎಂದರು. 

ಬಡ ಮತ್ತು ಮಧ್ಯಮ ವರ್ಗಕ್ಕೆ ಸೇರಿದ ಎಷ್ಟು ಜನರು ಸಾಲಕ್ಕೆ ಅರ್ಜಿಸಲ್ಲಿಸಿದ್ದಾರೆ. ಎಷ್ಟು ಜನರಿಗೆ ವಿತರಿಸಬಹುದು. ಇದಕ್ಕೆ ಬೇಕಾಗುವ ಅಂದಾಜು ಮೊತ್ತ ಎಷ್ಟು ಎನ್ನುವ ಮಾಹಿತಿಗಳನ್ನು ಒಳಗೊಂಡ ಯೋಜನಾ ವರದಿಯನ್ನು ಮಂಡಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ 1.10 ಲಕ್ಷ ರೈತರಿಗೆ 842 ಕೋಟಿ ಬೆಳೆ ಸಾಲ (Crop loan) ವಿತರಿಸಲಾಗಿದೆ.  ಇನ್ನೂ ಹೆಚ್ಚಿನ ರೈತರಿಗೆ ವಿತರಿಸಲು ಎಲ್ಲಾ ಡಿಸಿಸಿ ಬ್ಯಾಂಕುಗಳಿಗೆ ಸೂಚಿಸಲಾಗಿದೆ ಎಂದರು.

2019–20ನೇ ಸಾಲಿನಲ್ಲಿ 22.52 ಲಕ್ಷ ರೈತರಿಗೆ 13,577 ಕೋಟಿ ಬೆಳೆ ಸಾಲ ವಿತರಿಸಲಾಗಿದೆ. ಸಾಲ ಮರು ಪಾವತಿಯೂ ಉತ್ತಮ ಪ್ರಮಾಣದಲ್ಲಿದೆ. 11,100 ಕೋಟಿ ಪೈಕಿ 10,477 ಕೋಟಿ ವಸೂಲಾಗಿದ್ದು, 634 ಕೋಟಿ ಬಾಕಿ ಉಳಿದಿದೆ. ಸಾಲ ವಸೂಲಾತಿ ಪ್ರಗತಿ ಶೇ 94 ರಷ್ಟಿದೆ ಎಂದರು.

2020–21 ನೇ ಸಾಲಿಗೆ 24.50 ಲಕ್ಷ ರೈತರಿಗೆ 14,500 ಕೋಟಿ ಸಾಲ ವಿತರಿಸಲು ಉದ್ದೇಶಿಸಲಾಗಿದೆ. 4.50 ಲಕ್ಷ ಹೊಸ ಸದಸ್ಯ ರೈತರಿಗೆ 2,500 ಕೋಟಿ ಬೆಳೆ ಸಾಲ ವಿತರಿಸಲಾಗುವುದು. ಇದರಲ್ಲಿ 1 ಲಕ್ಷ ರೈತರಿಗೆ 626 ಕೋಟಿ ಬೆಳೆ ಸಾಲ ಈಗಾಗಲೇ ವಿತರಿಸಲಾಗಿದೆ ಎಂದು ವಿವರಿಸಿದರು.