News

ಸಾಮಾಜಿಕ ಅಂತರ ಲೆಕ್ಕಿಸದೆ ಮದ್ಯಕ್ಕೆ ಮುಗಿಬಿದ್ದ ಜನ

04 May, 2020 8:20 PM IST By:

ಕರ್ನಾಟಕದಲ್ಲಿ ಕೊರೋನಾ ವೈರಸ್‌ ಲಾಕ್‌ಡೌನ್‌ ಬಳಿಕ 41 ದಿನಗಳ 'ಮದ್ಯ ಉಪವಾಸ' ಅಂತ್ಯವಾಗಿದೆ. ಕುಡುಕರು ಬಿಸಿಲು ಲೆಕ್ಕಿಸದೆ ಮದ್ಯದ ಅಂಗಡಿಗಳ ಎದುರು ಕಿಲೋಮೀಟರಗಟ್ಟಲೇ ಉದ್ದುದ್ದ ಸಾಲು ನಿಂತಿದ್ದಾರೆ. ಈ ಸಾಲಿನಲ್ಲಿ ಮಹಿಳೆಯರೂ ಇರೋದು ಹಲವರ ಹುಬ್ಬೇರಿಸಿದೆ. ಇದರಲ್ಲಿ ತಪ್ಪೇನಿದೆ ಎನ್ನುತ್ತಿದ್ದಾರೆ ಮಹಿಳೆಯರು.
ಕೊರೊನಾ ವೈರಸ್‌ ಲಾಕ್‌ಡೌನ್‌ನಲ್ಲಿ ಒಂದಿಷ್ಟು ಸಡಿಲಿಕೆ ಆಗುತ್ತಿದ್ದಂತೆಯೇ, ಮೊದಲು ಜನರು ಮುಗಿಬಿದ್ದಿದ್ದೇ ಮದ್ಯದ ಅಂಗಡಿಗಳಿಗೆ.ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಆದರೂ, ಹೆಮ್ಮಾರಿ ಸೋಂಕಿನ ಯಾವುದೇ ಭಯವಿಲ್ಲದೇ ಎಣ್ಣೆ ಅಂಗಡಿಗಳ ಮುಂದೆ ಸರತಿ ಸಾಲು ಕಟ್ಟಿದ್ದಾರೆ. ಬಿರು ಬಿಸಿಲಿನಲ್ಲೂ ನೆತ್ತಿ ಸುಡುತ್ತಿದ್ದರೂ ಮದ್ಯಾರಾಧಕರು ಲೆಕ್ಕಿಸದೆ ಎಣ್ಣೆ ಅಂಗಡಿಗಳ ‌ಮುಂದೆ ಜಮಾವಣೆಗೊಂಡಿದ್ದಾರೆ.

ಕಳೆದ ಶತಮಾನದಲ್ಲಿ ಮದ್ಯದ ಅಂಗಡಿಗಳು ಊರ ಹೊರಗೆ ಇರುತ್ತಿದ್ದವು. ಒಂದಷ್ಟು ಗಂಡಸರು, ಕುಡುಕರು ಎಂಬ ಹಣೆಪಟ್ಟಿ ಹೊತ್ತವರು ಮದ್ಯದ ಅಂಗಡಿಯಲ್ಲಿ ಕೂತು ಕುಡಿದು ತೂರಾಡುತ್ತಾ ಮನೆ ಸೇರುತ್ತಿದ್ದರು. ಆದ್ರೆ, ಜಾಗತೀಕರಣವೆಂಬ ಮಾಯೆ, ಇದೀಗ ಊರಿನ ಮಧ್ಯಭಾಗಕ್ಕೇ ಮದ್ಯದಂಗಡಿಯನ್ನು ಪ್ರತಿಷ್ಠಾಪಿಸಿದೆ. ಕಳ್ಳು, ಹೆಂಡ, ನೀರ, ಕಳ್ಳಭಟ್ಟಿ, ಸಾರಾಯಿ ಕುಡಿಯಬೇಡಿ, ಒಮ್ಮೆಲೇ ಸಾಯಬೇಡಿ ಎಂದು ನಿಧಾನ ವಿಷದ ರೂಪದಲ್ಲಿ ವಿಸ್ಕಿ, ಬಿಯರ್, ರಮ್, ವೋಡ್ಕಾಗಳನ್ನು ರಂಗುರಂಗಿನ ಬಾಟಲಿಗಳಲ್ಲಿ ತಂದು ಕೊಡ್ತಿದ್ದಾರೆ. ಗ್ರಾಮಾಂತರ ಭಾಗದ ಹಲವೆಡೆ ಗುಂಪು-ಗುಂಪಾಗಿ ಜನರು ಮದ್ಯ ಖರೀದಿಸಿದ್ದ ದೃಶ್ಯ ಸಾಮಾನ್ಯವಾಗಿತ್ತು.