ಆಧಾರ್ ಕಾರ್ಡ್, ರೇಷನ್ ಕಾರ್ಡ್, ಎಲೆಕ್ಷನ್ ಕಾರ್ಡ್ ಮಾದರಿಯಲ್ಲಿ ಈಗ ರೈತರಿಗೆ ಪ್ರತ್ಯೇಕ ಗುರುತಿನ ಸಂಖ್ಯೆಯ ಐಡಿ ಕಾರ್ಡ್ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಈಗಾಗಲೇ ಈ ಪ್ರಕ್ರಿಯೆ ರಾಜ್ಯಾದ್ಯಂತ ಆರಂಭಗೊಂಡಿದ್ದು, ರೈತರು ಎಫ್ಐಡಿ ಕಾರ್ಡ್ ಪಡೆಯಲು ಫ್ರೂಟ್ಸ್ (FRUITS)ತಂತ್ರಾಂಶದಲ್ಲಿ ನೋಂದಣಿ ಕಡ್ಡಾಯಗೊಳಿಸಿದೆ. ಇಲ್ಲಿ ಹೆಸರು ನೋಂದಾಯಿಸಿದರೆ ಮಾತ್ರ ಇನ್ನು ಮುಂದೆ ಕೃಷಿ ಇಲಾಖೆ, ಪಶು ಸಂಗೋಪನೆ, ರೇಷ್ಮೆ, ಮೀನುಗಾರಿಕೆ ಹಾಗೂ ತೋಟಗಾರಿಕೆ ಇಲಾಖೆಗಳ ಸೌಲಭ್ಯ ದೊರೆಯಲಿವೆ.
ಆಧಾರ್ ಸಂಖ್ಯೆಯೊಂದಿಗೆ ರೈತರು ಹೆಸರು, ಹೊಂದಿರುವ ಒಟ್ಟು ಭೂಮಿ, ಪಹಣಿ ಪತ್ರಿಕೆ/ ಉತಾರ, ಆಧಾರ್ ಕಾರ್ಡ್, ಬ್ಯಾಂಕ್ ಖಾತೆಯ ವಿವರದ ಪ್ರತಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಪ್ರತಿ (ಎಸ್.ಸಿ ಮತ್ತು ಎಸ್.ಟಿ ರೈತರಿಗೆ ಮಾತ್ರ), ಅರ್ಜಿದಾರರ ಭಾವಚಿತ್ರ ದೊಂದಿಗೆ ದಾಖಲೆಗಳನ್ನು ಸಲ್ಲಿಸಿ ಎಫ್‌ಐಡಿ ಸಂಖ್ಯೆ ಪಡೆದುಕೊಳ್ಳಬೇಕು,
ಸರ್ವೆ ನಂಬರ್ ಗಳಿಗೆ ಆಧಾರ್ ಜೋಡಣೆಯಿಂದ ಆಗುವ ಲಾಭಗಳು:
ಬೆಂಬಲ ಬೆಲೆ ಯೋಜನೆ, ಬೆಳೆ ವಿಮೆ, ಇತರೆ ಯೋಜನೆ ಅನುಷ್ಠಾನ ಪ್ರಕ್ರಿಯೆಯಲ್ಲಿ ರೈತರ ಜಮೀನಿನ ವಿವರಗಳನ್ನು ಪಡೆಯಲು ‘ಫ್ರೂಟ್ಸ್’ ತಂತ್ರಾಂಶ ಅಗತ್ಯವಿದ್ದು ಇದರಲ್ಲಿ ರೈತರ ಜಮೀನಿನ ನಿಖರ ಹಾಗೂ ಸಂಪೂರ್ಣ ಮಾಹಿತಿ ಇರುತ್ತದೆ. ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ ಸೇರಿದಂತೆ ವಿವಿಧ ಇಲಾಖೆಗಳ ಯೋಜನೆಗಳಡಿ ಸೌಲಭ್ಯ ಪಡೆಯಲು ರೈತರ ಜಮೀನಿನ ವಿವರಗಳನ್ನು ‘ಫ್ರೂಟ್ಸ್’ ತಂತ್ರಾಂಶದಲ್ಲಿ ದಾಖಲಿಸಿ ರೈತರ ಗುರುತಿನ ಚೀಟಿ ಸಂಖ್ಯೆ (ಎಫ್ಐಡಿ) ಪಡೆದುಕೊಳ್ಳುವುದು ಅವಶ್ಯವಾಗಿರುತ್ತದೆ.
ಇದುವೆರೆಗೆ ನೋಂದಣಿ ಮಾಡದೇ ಇರುವ ರೈತರು ಅಗತ್ಯ ದಾಖಲೆಗಳಾದ ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ವಿವರ, ಆದಾಯ ಪ್ರಮಾಣ ಪತ್ರ, ಪರಿಶಿಷ್ಟ ಜಾತಿ, ಪರಿಶಿಷ್ಟ ರೈತರಾಗಿದ್ದಲ್ಲಿ ಜಾತಿ ಪ್ರಮಾಣ ಪತ್ರ, ಭಾವಚಿತ್ರಗಳನ್ನು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ, ನಾಡ ಕಚೇರಿ, ಗ್ರಾಮ ಪಂಚಾಯಿತಿ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಗಳಿಗೆ ಭೇಟಿ ನೀಡಿ ತಮ್ಮ ಮಾಹಿತಿಗಳನ್ನು ಸಲ್ಲಿಸಿ ಎಫ್.ಐ.ಡಿ ನಂಬರ್ ಪಡೆದುಕೊಳ್ಳಬೇಕು.
ಏನಿದು 'ಸ್ವಾಭಿಮಾನಿ ರೈತ'ಗುರುತಿನ? :
ರಾಜ್ಯದ ಇ-ಆಡಳಿತ ಇಲಾಖೆಯು ಎನ್‌ಐಸಿ ಮೂಲಕ ರಾಜ್ಯದ ರೈತರ ವಿವರಗಳನ್ನು ದಾಖಲಿಸಲು FRUITS ತಂತ್ರಾಂಶವನ್ನು ಅಭಿವೃದ್ಧಿ ಪಡಿಸಿದೆ. ಪ್ರತಿಯೊಬ್ಬ ರೈತರಿಗೆ ಒಂದು ಪ್ರತ್ಯೇಕ ಗುರುತಿನ ಸಂಖ್ಯೆ ನೀಡುವುದು ನೋಂದಣಿಯ ಉದ್ದೇಶ. ಈ ಗುರುತಿನ ಸಂಖ್ಯೆಯ ಆಧಾರದಲ್ಲಿ ರೈತರು 'ಫ್ರೂಟ್ಸ್' ತಂತ್ರಾಂಶ ಬಳಸುವ ಎಲ್ಲ ಇಲಾಖೆಗಳ ಸೌಲಭ್ಯಗಳನ್ನು ಪಡೆಯಬಹುದು.
ಗುರುತಿನ ಚೀಟಿಯಿಂದ ಲಾಭವೇನು? :
ಗುರುತಿನ ಚೀಟಿಯಿಂದ ರೈತರು ಬೆಳೆ ಸಾಲ, ಪಿಎಂ ಕಿಸಾನ್ ಮುಂತಾದ ವಿವಿಧ ಯೋಜನೆಗಳಡಿ ಸಹಾಯಧನ ಪಡೆಯಲು ಕಚೇರಿಗಳಲ್ಲಿ ವ್ಯಯಿಸಬೇಕಾದ ಸಮಯವನ್ನು ಉಳಿಸಬಹುದು ಹಾಗೂ ರೈತರಿಗೆ ಇದು ಒಂದು ವ್ಯವಹಾರಿಕ ಗುರುತಿನ ಚೀಟಿಯಾಗುತ್ತದೆ.
ಈಗಾಗಲೇ ನೋಂದಣಿ ಮಾಡಿರುವ ರೈತರು ತಮ್ಮ ಸರ್ವೆ ನಂಬರ್‌ಗಳು ರೈತರ ಗುರುತಿನ ಚೀಟಿ ಸಂಖ್ಯೆಯಲ್ಲಿ ಸೇರ್ಪಡೆಯಾಗಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಲು ಈ ಲಿಂಕ್ ಮೇಲೆ https://fruits.karnataka.gov.in/Reports/SearchFarmerID.aspx ಕ್ಲಿಕ್ ಮಾಡಿ ಖಚಿತಪಡಿಸಿಕೊಳ್ಳಬಹುದು.