2021ರ ಹೊಸ ವರ್ಷದ ಮೊದಲ ವಾರದಲ್ಲಿಯೇ ಸರ್ಕಾರಿ ನೌಕರರ ಗಳಿಕೆ ರಜೆಯ ನಗದೀಕರಣ ಸೌಲಭ್ಯವನ್ನು ರದ್ದುಪಡಿಸುವ ಮೂಲಕ ರಾಜ್ಯ ಸರ್ಕಾರವು ಸರ್ಕಾರಿ ನೌಕರರಿಗೆ ಬಿಗ್ ಶಾಕ್ ಕೊಟ್ಟಿದೆ.
ಹೌದು ಕರ್ನಾಟಕ ಸರ್ಕಾರವು ಪ್ರಸ್ತುತ ಕೋವಿಡ್-19 ಹಿನ್ನೆಲೆ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಕಾರಣ ಸರ್ಕಾರಿ ನೌಕರರ ಗಳಿಕೆ ರಜೆ ನಗದೀಕರಣ ಸೌಲಭ್ಯವನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ. ಸದರಿ ಆದೇಶದ ಪ್ರಕಾರ 2021ನೇ ಸಾಲಿನ ಕ್ಯಾಲೆಂಡರ್ ವರ್ಷ ದಿನಾಂಕ 01-01-2021 ರಿಂದ 31-12-2021 ರವರೆಗಿನ ಅವಧಿಯಲ್ಲಿ ಗಳಿಕೆ ರಜೆಯನ್ನು ಅಧ್ಯರ್ಪಿಸಿ ನಗದೀಕರಣ ಪಡೆಯುವ ಸೌಲಭ್ಯವನ್ನು ರದ್ದುಗೊಳಿಸಲಾಗಿದೆ.
ಆದರೆ, 2021 ರ ಜನವರಿ ತಿಂಗಳಿಂದ ಡಿಸೆಂಬರ್ ಅಂತ್ಯದ ಅವಧಿಯಲ್ಲಿ ನಿವೃತ್ತಿ ಹೊಂದುವ ಎಲ್ಲಾ ಅರ್ಹ ನೌಕರರು / ಅಧಿಕಾರಿಗಳು, ಅವರು ನಿವೃತ್ತಿ ಹೊಂದುವ ತಿಂಗಳಲ್ಲಿ ಗಳಿಕೆ ರಜೆ ನಗದೀಕರಣ ಪ್ರಯೋಜನ ಪಡೆಯಲು ಅರ್ಹರಾಗಿರುತ್ತಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಸರ್ಕಾರದ ವಿವಿಧ ಇಲಾಖೆಗಳು, ಸಂಸ್ಥೆಗಳು, ನಿಗಮ, ಮಂಡಳಿಂಗಳು, ಸರ್ಕಾರದಿಂದ ನೆರವು ಇಲ್ಲವೆ ಅನುದಾನ ಪಡೆಯುವ ಮತ್ತು ಪಡೆಯದಿರುವ ಎಲ್ಲಾ ಸರ್ಕಾರಿ ಉದ್ದಿಮೆಗಳ ನೌಕರರಿಗೂ ಈ ಸೌಲಭ್ಯ ಇರುವುದಿಲ್ಲ ಎಂದು ಆರ್ಥಿಕ ಇಲಾಖೆ ಹೊರಡಿಸಿದ ಆದೇಶದಲ್ಲಿ ಸ್ಪಷ್ಟಪಡಿಸಿದೆ.