News

ವಿಕಲಚೇತನರ ಹಳೆಯ ರಿಯಾಯಿತಿ ಬಸ್ ಪಾಸ್ ನವೀಕರಿಸಲು ಫೆಬ್ರವರಿ 28 ಕೊನೆಯ ದಿನ

13 February, 2021 1:33 PM IST By:
bus pass

ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಭಾಗ-2 ವತಿಯಿಂದ 2021ನೇ ಸಾಲಿನ ವಿಕಲಚೇತನರ ರಿಯಾಯಿತಿ ಹಳೆಯ ಬಸ್‍ಪಾಸ್‍ಗಳನ್ನು ನವೀಕರಿಸಿಕೊಳ್ಳಲು 2021ರ ಫೆಬ್ರವರಿ 28 ಕೊನೆಯ ದಿನವಾಗಿದ್ದು, ಅರ್ಹ ವಿಕಲಚೇತನರು ಕೊನೆಯ ದಿನಾಂಕದೊಳಗಾಗಿ ಬಸ್‍ಪಾಸ್‍ಗಳನ್ನು ನವೀಕರಿಸಿಕೊಳ್ಳಬೇಕೆಂದು ಕಲಬುರಗಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗ-2ರ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.

2020ನೇ ಸಾಲಿನಲ್ಲಿ ವಿತರಿಸಲಾಗಿರುವ (ದಿನಾಂಕ: 31-12-2020ರವರೆಗೆ ಮಾನ್ಯತೆ ಇರುವ) ವಿಕಲಚೇತನರ ರಿಯಾಯಿತಿ ಬಸ್‍ಪಾಸ್‍ಗಳನ್ನು 2021ರ ಫೆಬ್ರವರಿ 28 ರವರೆಗೆ ಮಾನ್ಯ ಮಾಡಲಾಗುತ್ತಿದ್ದು, ಅರ್ಹ ವಿಕಲಚೇತನ ಫಲಾನುಭವಿಗಳು ಆನ್‍ಲೈನ್ ಮೂಲಕ ಸೇವಾ ಸಿಂಧುವಿನಲ್ಲಿ ಅರ್ಜಿ ಸಲ್ಲಿಸಿ 660 ರೂ.ಗಳನ್ನು ನಗದು ರೂಪದಲ್ಲಿ ಹಣ ಪಾವತಿಸಿ ಹಳೆಯ ಬಸ್‍ಪಾಸ್‍ಗಳನ್ನು ಫೆಬ್ರವರಿ 28 ರೊಳಗಾಗಿ ನವೀಕರಿಸಿಕೊಳ್ಳಬೇಕು. ಕೊನೆಯ ದಿನಾಂಕದ ನಂತರ ಹಳೆಯ ಬಸ್‍ಪಾಸ್‍ಗಳನ್ನು ನವೀಕರಿಸಲಾಗುವುದಿಲ್ಲ.

ವಿಕಲಚೇತನರ ಹಳೆಯ ಪಾಸುಗಳನ್ನು ಕಲಬುರಗಿ ಸಂಸ್ಥೆಯ ವಿಭಾಗ-2ರ ವ್ಯಾಪ್ತಿಯಲ್ಲಿ ಬರುವ ತಾಲೂಕುಗಳಾದ ಕಲಬುರಗಿ, ಆಳಂದ, ಜೇವರ್ಗಿ ಹಾಗೂ ಅಫಜಲಪುರ ಬಸ್ ನಿಲ್ದಾಣಗಳಲ್ಲಿ ನವೀಕರಿಸಲಾಗುವುದು.

ಅದರಂತೆ 2021 ನೇ ಸಾಲಿಗೆ ವಿಕಲಚೇತನರ ಹೊಸ ಬಸ್‍ಪಾಸ್‍ಗಳನ್ನು 2021ರ ಜನವರಿ 1 ರಿಂದ  ಡಿಸೆಂಬರ್ 31ರವರೆಗೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕಲಬುರಗಿ ವಿಭಾಗ-2ರ ಕಚೇರಿಯಲ್ಲಿ ವಿತರಿಸಲಾಗುತ್ತದೆ. ವಿಕಲಚೇತನರು ಇದರ ಸದುಪಯೋಗ ಪಡೆಯಬೇಕೆಂದು ಅವರು ತಿಳಿಸಿದ್ದಾರೆ.