News

ಭೂಮಿ ಖರೀದಿ ಯೋಜನೆಯಡಿ SBI ಬ್ಯಾಂಕ್ ನೀಡಲಿದೆ ಶೇ. 85 ರಷ್ಟು ಸಾಲ

01 October, 2020 7:31 AM IST By:

ಬೆಳೆ ಸಾಲ, ವಾಹನ ಸಾಲ, ಮನೆ ಸಾಲ ಕೇಳಿದ್ದೀರಿ. ಪ್ಲಾಟ್ ಖರೀದಿ ಮಾಡಲು, ಮನೆ ಕಟ್ಟಲು, ವಾಹನ ಖರೀದಿಸಲು ಬ್ಯಾಂಕುಗಳು ಸಾಲ ಕೊಡಲು ಮುಂದೆ ಬರುತ್ತವೆ. ಕೃಷಿಗಾಗಿಯೂ ಭೂಮಿ ಖರೀದಿಗೆ ಸಾಲ ಸಿಗುತ್ತದೆ ಎಂಬುದು ಬಹುತೇಕ ರೈತರಿಗೆ ಗೊತ್ತಿರಲಕ್ಕಿಲ್ಲ. ಹೌದು, ಕೃಷಿ ಮಾಡಲು ರೈತರಿಗೆ 5 ಲಕ್ಷ ರುಪಾಯಿಯವರೆಗೆ ಸಾಲ ಸಿಗುತ್ತದೆ. ಭೂಮಿ ಖರೀದಿ ಯೋಜನೆಯಡಿಯಲ್ಲಿ ಬ್ಯಾಂಕುಗಳು ಸಾಲ ನೀಡುತ್ತವೆ. ಅದು ಹೇಗೆ ಅಂದುಕೊಡಿದ್ದೀರಾ. ಇಲ್ಲಿದೆ ಮಾಹಿತಿ.

ವ್ಯವಸಾಯ ಮಾಡುವುದಕ್ಕಾಗಿ ಭೂಮಿ ಖರೀದಿಸಲು ಆಸಕ್ತ ಇರುವ ಸಣ್ಣ ಮತ್ತು ಅತೀ ಸಣ್ಣ ರೈತರಿಗಾಗಿ SBI ಹೊಸದೊಂದು ಯೋಜನೆಯನ್ನು ಆರಂಭಿಸಿದೆ. ಅದರ ಹೆಸರು ಲ್ಯಾಂಡ್ ಪರ್ಚೆಸ್ ಸ್ಕಿಂ(ಎಲ್‍ಪಿಎಸ್).  ಈ ಯೋಜನೆಯಡಿಯಲ್ಲಿ  ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಹಾಗೂ ಭೂರಹಿತ ಕೃಷಿ ಕಾರ್ಮಿಕರಿಗೆ ಭೂ ಹಿಡುವಳಿ ಹೆಚ್ಚಿಸಲು, ಪಾಳುಬಿದ್ದ ಮತ್ತು ಬಂಜರು ಭೂಮಿ ಖರೀದಿಸಲು ಸಾಲ ನೀಡಲಿದೆ.

ಈ ಯೋಜನೆಯ ವೈಶಿಷ್ಟ್ಯವೇನೆಂದರೆ ಭೂಮಿಗೆ ಎಸ್.ಬಿ.ಐ ಬ್ಯಾಂಕ್ ಬೆಲೆ ನಿರ್ಧರಿಸುತ್ತದೆ. ಭೂಮಿಯ ಬೆಲೆಗೆ ಶೇ. 85 ರಷ್ಟು ಸಾಲಸಿಗಲಿದೆ. ಉದಾಹರಣೆಗೆ ಭೂಮಿಯ ಬೆಲೆ 1 ಲಕ್ಷ ಇದ್ದರೆ 85 ಸಾವಿರ ರುಪಾಯಿಯವರೆಗೆ ಸಾಲ ಸಿಗುವುದು. ಹೀಗೆ ಗರಿಷ್ಟ 5 ಲಕ್ಷ ರುಪಾಯಿಯವರೆಗೆ ಸಾಲ ಪಡೆಯಬಹುದು. ಈ ಯೋಜನೆಯಲ್ಲಿ ಚಾಲ್ತಿಯಲ್ಲಿರುವ ಸಾಲಗಾರರಿಗೂ ಸಾಲ ನೀಡಲಾಗುತ್ತದೆ. ಅದನ್ನು ಅವರು ಭೂ ಹಿಡುವಳಿ ಮಾಡಲು ಮತ್ತು ಪಾಳು ಭೂಮಿ ಹಾಗೂ ಬಂಜರು ಭೂಮಿಯನ್ನು ಅಭಿವೃದ್ಧಿಪಡಿಸಲು ಬಳಸಬಹುದು..

ಈ ಯೋಜನೆಗೆ ಅರ್ಹರು ಯಾರು?

ನೀರಾವರಿಯಿಲ್ಲದ ಐದು ಎಕರೆಗಿಂತ ಕಡಿಮೆ ಭೂಮಿಯುಳ್ಳ ರೈತರು. 2.5 ಎಕರೆ ನೀರಾವರಿ ಜಮೀನು ಉಳ್ಳ ಸಣ್ಣ ಮತ್ತು ಅತೀ ಸಣ್ಣ ರೈತರು ಹಾಗೂ ಭೂ ರಹಿತಿ ರೈತ ಕಾರ್ಮಿಕರೂ ಈ ಯೋಜನೆಯ ಸೌಲಭ್ಯ ಪಡೆಯಬಹುದು. ಸಾಲ ಪಡೆದುಕೊಳ್ಳುವವರು ಕಳೆದ ಎರಡು ವರ್ಷಗಳಿಂದ ಪ್ರಾಮಾಣಿಕವಾಗಿ ಸಾಲವನ್ನು ಮರುಪಾವತಿ ಮಾಡಿರುವ ದಾಖಲೆ ಹೊಂರಿದರಬೇಕು. ಇತರೆ ಬ್ಯಾಂಕುಗಳಲ್ಲಿ ಸಾಲ ಪಡೆದವರೂ ಅರ್ಹರಾಗಿರುತ್ತಾರೆ. ಆದರೆ ಇತರೆ ಬ್ಯಾಂಕುಗಳಲ್ಲಿ ತೆಗೆದುಕೊಂಡಿರುವ ಬಾಕಿ ಸಾಲವನ್ನು ಮರುಪಾವತಿ  ಮಾಡಿರಬೇಕು.

ಸಾಲ ತೀರಿಸುವ ಸಮಯ:

ಸಾಲ ತೀರಿಸಲು 10 ವರ್ಷಗಳ ಕಾಲಾವಧಿ ಇರುತ್ತದೆ. ಭೂಮಿಯಲ್ಲಿ ಉತ್ಪಾದನೆ ಆರಂಭವಾದಾಗಿನಿಂದ ಅರ್ಧ ವಾರ್ಷಿಕ ಕಂತಿನಂತೆ 9-10 ವರ್ಷಗಳವರೆಗೆ ಸಾಲದ ಹಣ ಮರುಪಾವತಿಸಬೇಕಾಗುತ್ತದೆ. ಮುಂಚಿತವಾಗಿ ಭೂಮಿ ಅಭಿವೃದ್ಧಿ ಪಡಿಸಿದ್ದರೆ ಅದರ ಉತ್ಪಾದನೆಗೆ ಮುಂಚಿನ ಅವಧಿ ಗರಿಷ್ಟ ಒಂದು ವರ್ಷ ಇರುತ್ತದೆ. ಖರೀದಿಸಿದ ಕೂಡಲೇ ಉತ್ಪಾದಿಸಲಾಗದ ಭೂಮಿಯಿದ್ದರೆ ಅದನ್ನು ಉತ್ಪಾದಿಸುವಂತೆ ಮಾಡಲು ಅದಕ್ಕೆ ಪೂರ್ವ ಉತ್ಪಾದನಾ ಅವಧಿ ಎರಡು ವರ್ಷ ಇರುತ್ತದೆ. ಉತ್ಪಾದನೆಕ್ಕಿಂತ ಮೊದಲು ರೈತ ಯಾವುದೇ ಕಂತು ಕಟ್ಟುವ ಅವಶ್ಯಕತೆಯಿಲ್ಲ. ಎರಡು ವರ್ಷಗಳ ನಂತರವೇ ಅವರು ಅರ್ಧವಾರ್ಷಿಕವಾಗಿ ಕಂತು ಕಟ್ಟಬೇಕಾಗುತ್ತದೆ.

ಹೆಚ್ಚಿನ ವಿವರಗಳಿಗಾಗಿ ನಿಮ್ಮ ಹತ್ತಿರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಥವಾ ಗ್ರಾಮೀಣ ಬ್ಯಾಂಕ್ ಶಾಖೆಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು.

ಲೇಖಕರು: ಶಗುಪ್ತಾ ಅ. ಶೇಖ