News

ಕೃಷಿಮೇಳದಲ್ಲಿ ಮೂರು ತಳಿಗಳ ಬಿಡುಗಡೆ

12 November, 2020 9:51 AM IST By:

ಬೆಂಗಳೂರಿನ ಗಾಂಧಿ ಕೃಷಿವಿಜ್ಞಾನ ಕೇಂದ್ರದ (ಜಿಕೆವಿಕೆ) ಆವರಣದಲ್ಲಿ ಮಂಗಳವಾರ ಕೃಷಿಮೇಳಕ್ಕೆ ಚಾಲನೆ ನೀಡಲಾಯಿತು. ಆದರೆ ಪ್ರತಿ ಬಾರಿ ಇರುತ್ತಿದ್ದ ಜನಜಂಗುಳಿ ಕಂಡು ಬರಲಿಲ್ಲ. ಲಕ್ಷ ಲೆಕ್ಕದಲ್ಲಿ ಇರುತ್ತಿದ್ದ ರೈತರ ಸಂಖ್ಯೆ ಕೋವಿಡ್‌ ಬಿಕ್ಕಟ್ಟಿನ ಈ ಬಾರಿ ಸಾವಿರಕ್ಕೆ ಇಳಿದಿತ್ತು. ಯಾವುದೇ ಸಡಗರ ಸಂಭ್ರಮ ಅಲ್ಲಿ ಕಂಡುಬಲಿಲ್ಲ. ವಿಶ್ವವಿದ್ಯಾಲಯ ವ್ಯಾಪ್ತಿಯ ಎಲ್ಲ ಕೃಷಿ ಕೇಂದ್ರಗಳಲ್ಲಿ ಕಾರ್ಯಕ್ರಮದ ನೇರಪ್ರಸಾರ ಇದ್ದುದರಿಂದಲೂ ಹೆಚ್ಚು ರೈತರು ಜಿಕೆವಿಕೆಯತ್ತ ಹೆಜ್ಜೆ ಹಾಕಲಿಲ್ಲ.

ಮೂರು ದಿನಗಳ ಕಾಲ ನಡೆಯುವ ಈ ಕೃಷಿ ಮೇಳಕ್ಕೆ ಮೊದಲ ಉದ್ಘಾಟನಾ ದಿನ ಭೌತಿಕ ಮತ್ತು ಡಿಜಿಟಲ್‌ ರೂಪದಲ್ಲಿ ನಡೆದ ಮೇಳಕ್ಕೆ ಭಾರತೀಯ ಕೃಷಿಸಂಶೋಧನಾ ಪರಿಷತ್‌ನ (ಐಸಿಎಆರ್‌) ಉಪಮಹಾನಿರ್ದೇಶಕ (ಕೃಷಿ ವಿಸ್ತರಣೆ) ಡಾ.ಅಶೋಕ್‌
ಕುಮಾರ್‌ ಸಿಂಗ್‌ ಆನ್‌ಲೈನ್‌ನಲ್ಲಿಯೇ ಚಾಲನೆ ನೀಡಿದರು.

ಮೂರು ತಳಿಗಳ ಬಿಡುಗಡೆ

ಮೊದಲ ದಿನ ನೂತನ ನೆಲಗಡಲೆ, ಅಲಸಂದೆ ಹಾಗೂ ಮೇವನ ಅಲಸಂದೆ ಈ ಮೂರು ತಳಿಗಳನ್ನು ಬಿಡುಗಡೆ ಮಾಡಲಾಯಿತು.

ನೆಲಗಡಲೆ:

ಜಿಕೆವಿಕೆ–27 ಹೆಸರಿನ ಈ ತಳಿಯು 110ರಿಂದ 115 ದಿನಗಳಲ್ಲಿ ಕಟಾವಿಗೆ ಬರುತ್ತದೆ ಮತ್ತು ಎಕರೆಗೆ 12 ಕ್ವಿಂಟಲ್‌ನಿಂದ 13 ಕ್ವಿಂಟಲ್‌ನಷ್ಟು ಇಳುವರಿ ಪಡೆಯಬಹುದಾಗಿದೆ. ಎಲೆ ಚುಕ್ಕೆರೋಗ ಮತ್ತು ಎಲೆ ತುಕ್ಕು ರೋಗಗಳು ಬರುವುದಿಲ್ಲ. ಬರದ ಸಂದರ್ಭದಲ್ಲಿಯೂ ಬೆಳೆಯುವ ಶಕ್ತಿ ಇದಕ್ಕಿದೆ. ಮುಂಗಾರು ಮತ್ತು ಬೇಸಿಗೆ ಹಂಗಾಮುಗಳಲ್ಲಿ ಬೆಳೆಯಬಹುದು.

ಅಲಸಂದೆ:

ಕೆ.ಸಿ.–08 ಹೆಸರಿನ ಈ ತಳಿಯು 80ರಿಂದ 85 ದಿನಗಳಲ್ಲಿ ಕಟಾವಿಗೆ ಬರುತ್ತದೆ ಮತ್ತು ಎಕರೆಗೆ 5.2 ಕ್ವಿಂಟಲ್‌ನಿಂದ 5.6 ಕ್ವಿಂಟಲ್‌ನಷ್ಟು ಇಳುವರಿ ಪಡೆಯಬಹುದು. ಸಸ್ಯ ಪ್ರಕಾರವು ನೇರವಾಗಿದ್ದು, ದಟ್ಟವಾಗಿರುತ್ತದೆ. ಕಾಯಿಗಳು ದಪ್ಪ ಮತ್ತು ತಿಳಿ ಕಂದು ಬಣ್ಣದಿಂದ ಕೂಡಿರುತ್ತದೆ. ಬೀಜಗಳು ಮಧ್ಯಮ ಗಾತ್ರದ್ದಾಗಿರುತ್ತದೆ. ಒಣ ಬೀಜಗಳನ್ನು ಬೆಳೆ ಕಾಳುಗಳಾಗಿ ಬಳಸಬಹುದು ಎಂದು ಕೃಷಿ ತಜ್ಞರು ಹೇಳುತ್ತಾರೆ.

ಮೇವಿನ ಅಲಸಂದೆ:

ಎಂಎಫ್‌ಸಿ–08–03 ತಳಿಯನ್ನು ಮಂಡ್ಯದ ವಿ.ಸಿ. ಫಾರಂ ಕೇಂದ್ರದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಹೆಕ್ಟೇರ್‌ಗೆ 281.7 ಕ್ವಿಂಟಲ್‌ ಹಸಿರು ಸೊಪ್ಪಿನ ಇಳುವರಿ ಬರುತ್ತದೆ. ಹೆಚ್ಚು ರೆಂಬೆಗಳಿಂದ ಕೂಡಿರುತ್ತದೆ. ಹಳದಿ ಎಲೆ ನಂಜು, ತುಕ್ಕು ಹಾಗೂ ಎಲೆಚುಕ್ಕೆ ರೋಗಗಳನ್ನು ತಡೆದುಕೊಳ್ಳುವ ಶಕ್ತಿ ಹೊಂದಿರುತ್ತದೆ. ವರ್ಷದ ಎಲ್ಲ ಕಾಲದಲ್ಲಿಯೂ ಹಸಿರು ಮೇವಿಗಾಗಿ ಬೆಳೆಯಬಹುದು.