News

108 ಮಾದರಿಯಲ್ಲಿ ಕೃಷಿ ಸಂಚಾರಿ ಲ್ಯಾಬ್: ಕೃಷಿ ಸಚಿವ ಬಿ.ಸಿ ಪಾಟೀಲ್

17 September, 2020 7:30 AM IST By:

ಸರ್ಕಾರದ ಸವಲತ್ತುಗಳನ್ನು ಅನ್ನದಾತನಿಗೆ ಸಮರ್ಪಕವಾಗಿ ತಲುಪಿಸಲು ಮತ್ತು ಕೃಷಿ ಕುರಿತು ಅರಿವು ನೀಡಲು 2246 “ರೈತ ಮಿತ್ರ”ರನ್ನು ನೇಮಿಸಲು ಕ್ರಮ ವಹಿಸಲಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.

ಅವರು ಕಲಬುರಗಿ ಕೃಷಿ ಮಹಾವಿದ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,  ಕೃಷಿಯಲ್ಲಿ ಡಿಪ್ಲೋಮಾ ಪದವಿ ಪಡೆದವರನ್ನೆ ಕೃಷಿ ಮಿತ್ರರೆಂದು ನೇಮಿಸಿ ಪ್ರತಿಯೊಬ್ಬರಿಗೆ ಎರಡು ಗ್ರಾಮ ಪಂಚಾಯತಿಗಳ ಜವಾಬ್ದಾರಿ ನೀಡಲಾಗುತ್ತದೆ ಎಂದರು.

ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೊರೋನಾ ಹಿನ್ನೆಲೆಯಲ್ಲಿ ನೇಮಕಾತಿ ಪ್ರಕ್ರಿಯೆ ನಿಧಾನವಾಗಿದೆ. ಅತೀ ಶೀಘ್ರದಲ್ಲಿ ರೈತಮಿತ್ರರನ್ನು ನೇಮಕ ಮಾಡಲಾಗುವುದು ಎಂದರದು.

ರೈತ ಮಕ್ಕಳ ಕೋಟಾಗೆ ಧಕ್ಕೆಯಿಲ್ಲ:

ರಾಜ್ಯದ ಕೃಷಿ ವಿಶ್ವವಿದ್ಯಾಲಯ ಮತ್ತು ಮಹಾ ವಿದ್ಯಾಲಯಗಳಲ್ಲಿ ಕೃಷಿ ಪದವಿ ಪ್ರವೇಶಾತಿಯಲ್ಲಿ ಈ ಹಿಂದೆ ಇದ್ದಂತೆ ಶೇ.40ರಷ್ಟು ಸ್ಥಾನಗಳನ್ನು ರೈತರ ಮಕ್ಕಳಿಗೆ ಮೀಸಲಾತಿ ಇದ್ದು, ಇದರಲ್ಲಿ ಯಾವುದೇ ಗೊಂದಲ ಬೇಡ ಎಂದು ಸ್ಪಷ್ಟನೆ ನೀಡಿದ ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ರೈತರ ಗುರುತಿಗಾಗಿ “ಸ್ವಾಭಿಮಾನಿ ರೈತ” ಹೆಸರಿನಲ್ಲಿ ಗುರುತಿನ ಚೀಟಿ ವಿತರಿಸಲಾಗುವುದು ಎಂದರು.

108 ಮಾದರಿಯಲ್ಲಿ ಕೃಷಿ ಸಂಚಾರಿ ಲ್ಯಾಬ್:

 ಬೆಳೆಯಲ್ಲಿ ಯಾವುದೇ ತರಹದ ರೋಗ ಮತ್ತು ಕೀಟಬಾಧೆ ಕಂಡುಬಂದಲ್ಲಿ ರೈತರ ಹೊಲಗಳಿಗೆ ಹೋಗಿ ಪ್ರಾತ್ಯಕ್ಷಿಕೆ ಮೂಲಕ ಅಗತ್ಯ ಸಲಹೆ, ನೆರವು ನೀಡಲು 108 ವಾಹನ ಮಾದರಿಯಲ್ಲಿ ಕೃಷಿ ಸಂಚಾರಿ ಲ್ಯಾಬ್ ಸಿದ್ಧಪಡಿಸಲಾಗುತ್ತಿದೆ. ಕೃಷಿಕರು ಕರೆ ಮಾಡಿದ ಕೂಡಲೆ ಕೃಷಿ ಪದವೀಧರರು ಸೇರಿದಂತೆ ಅಗತ್ಯ ಸಿಬ್ಬಂದಿಗಳನ್ನೊಳಗೊಂಡ ಈ ವಾಹನ ಹೊಲಗಳಿಗೆ ಹೋಗಿ ಸೂಕ್ತ ಸಲಹೆ ನೀಡಲಿದ್ದಾರೆ. ಈ ಯೋಜನೆಯನ್ನು ಪ್ರಾಯೋಗಿಕವಾಗಿ ತಮ್ಮ ಉಸ್ತುವಾರಿಯ ಕೊಪ್ಪಳ ಜಿಲ್ಲೆಯಲ್ಲಿ ಜಾರಿಗೆ ತರಲು ಸಿದ್ಧತೆ ನಡೆದಿದೆ. ಅಲ್ಲಿ ಯಶಸ್ವಿಯಾದಲ್ಲಿ ರಾಜ್ಯಾದ್ಯಾಂತ ವಿಸ್ತರಣೆ ಮಾಡಲಾಗುವುದು ಎಂದರು.