News

ಬೆಳೆಗೆ ತಗಲುವ ರೋಗಗಳ ನಿಯಂತ್ರಣ ಮಾಹಿತಿಗಾಗಿ ಕೃಷಿ ಜ್ಞಾನ’ ಆ್ಯಪ್ ಬಿಡುಗಡೆ

15 September, 2020 10:13 PM IST By:

ರೈತರಿಗೆ ಬೇಸಾಯ ಕ್ರಮಗಳು, ಬೆಳೆಗೆ ತಗಲುವ ವಿವಿಧ ರೋಗಗಳ ನಿಯಂತ್ರಣ, ಔಷಧಿ ಸಿಂಪರಣೆ ಸೇರಿದಂತೆ ವಿವಿಧ ಬಗೆಯ ಧ್ವನಿ ಹಾಗೂ ದೃಶ್ಯ ಆಧಾರಿತ ಮಾಹಿತಿಯನ್ನು ನೀಡುವ ವಿಶೇಷ “ಕೃಷಿ ಜ್ಞಾನ ಆ್ಯಪ್” ಅನ್ನು ಕೃಷಿ ಸಚಿವ ಬಿ.ಸಿ.ಪಾಟೀಲ್ ಬಿಡುಗಡೆಗೊಳಿಸಿದ್ದಾರೆ.

ಬೆಳಗಾವಿಯ  ಸುವರ್ಣ ವಿಧಾನಸೌಧದಲ್ಲಿ ನಡೆದ ವಿಭಾಗಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ರೈತರು ತಮ್ಮ ಸಮಸ್ಯೆಗಳು ಮತ್ತು ಸವಾಲುಗಳಿಗೆ ಕೃಷಿ ತಜ್ಞರ ಮೂಲಕ ಸಲಹೆಗಳನ್ನು ಪಡೆಯಬಹದು..

ಜಿಲ್ಲೆಯ ಕೃಷಿಯ ಸಮಗ್ರ ವಿವರಗಳನ್ನು ಹೊಂದಿರುವ ಕೃಷಿ ಜ್ಞಾನ ಆ್ಯಪ್‌ ನಲ್ಲಿ ರೈತರು ಕಾಲ ಕಾಲಕ್ಕೆ ಎದುರಾಗುವ ಸಮಸ್ಯೆಗಳು ಮತ್ತು ನಿವಾರಣೋಪಾಯಗಳ ಕುರಿತು ಕಿರು ವಿಡಿಯೋ ಮೂಲಕ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ ಎಂದರು. ಇದೇ ರೀತಿ ಉಳಿದ ಜಿಲ್ಲೆಗಳಲ್ಲೂ ಆಪ್ ಅಭಿವೃದ್ಧಿಪಡಿಸಬೇಕೆಂದು ಎಂದು ಹೇಳಿದ್ದಾರೆ.

 ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ರೈತರು ಶೇ 2ರಷ್ಟು ಮಾತ್ರ ವಿಮೆ ಹಣ ಪಾವತಿಸಬೇಕು. ‌ಉಳಿದ ಶೇ 98ರಷ್ಟನ್ನು ಸರ್ಕಾರವೇ ಭರಿಸುತ್ತದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಕೃಷಿಕರೆಲ್ಲರೂ ಕಡ್ಡಾಯವಾಗಿ ಬೆಳೆ ವಿಮೆ ಕಟ್ಟುವಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ರೈತರೇ ಸ್ವಯಂ ನಡೆಸುವ ಬೆಳೆ ಸಮೀಕ್ಷೆ ಕಾರ್ಯಕ್ಕೆ ಉತ್ತರ ಕರ್ನಾಟಕದಲ್ಲಿ ಅತ್ಯುತ್ತಮ ಸ್ಪಂದನೆ ದೊರೆತಿದೆ. ರಾಜ್ಯದಾದ್ಯಂತ 78 ಲಕ್ಷ ರೈತರು ಈಗಾಗಲೇ ಸ್ವತಃ ಸಮೀಕ್ಷೆ ಪೂರ್ಣಗೊಳಿಸಿದ್ದಾರೆ. ಕೆಲವೆಡೆ ನೆಟ್‌ವರ್ಕ್‌ ಸಮಸ್ಯೆಯಿಂದ ಸ್ವಲ್ಪ ಮಟ್ಟಿಗೆ ಹಿನ್ನಡೆಯಾಗಿದೆ. ಉಳಿದ ಬೆಳೆಗಳ ಸಮೀಕ್ಷೆಯನ್ನು ಪಿಆರ್ (ಖಾಸಗಿ ನಿವಾಸಿ)ಗಳ ಮೂಲಕ ನಡೆಸಲಾಗುವುದು  ಎಂದು ತಿಳಿಸಿದರು.