ರಾಜ್ಯಾದ್ಯಂತ ಜ. 24 ರಂದು ನಡೆಯಬೇಕಿದ್ದ ಎಫ್.ಡಿ.ಎ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಮುಂದೂಡಲಾಗಿದೆ. ಇದರಿಂದಾಗಿ ಪರೀಕ್ಷೆಗಾಗಿ ಕಾದು ಕುಳಿತ ಅಭ್ಯರ್ಥಿಗಳಿಗೆ ನಿರಾಶೆಯಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಸಂಗತಿಯನ್ನು ಸಿಸಿಬಿ ಪೊಲೀಸರು ಪತ್ತೆ ಮಾಡಿದ್ದು, ಆರು ಜನ ಆರೋಪಿಗಳನ್ನು ಸಹ ಬಂಧಿಸಿದ್ದಾರೆ.
ಪಾರದರ್ಶಕವಾಗಿ ಪರೀಕ್ಷೆ ನಡೆಸುವುದಕ್ಕಾಗಿ ಜನವರಿ 24, ರಂದು ನಿಗದಿಯಾಗಿದ್ದ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಹುದ್ದೆಗಳ ಲಿಖಿತ ಪರೀಕ್ಷೆಯನ್ನು ಮುಂದೂಡಿ, ಕರ್ನಾಟಕ ಲೋಕಸೇವಾ ಆಯೋಗವು ಪ್ರಕಟಣೆ ಹೊರಡಿಸಿದೆ. ಕೆಪಿಎಸ್‌ಸಿ'ಯು ಸದರಿ ಹುದ್ದೆಗಳಿಗೆ ಮುಂದಿನ ಸ್ಪರ್ಧಾತ್ಮಕ ಪರೀಕ್ಷೆ ದಿನಾಂಕವನ್ನು ಮರುನಿಗದಿಪಡಿಸಿ ಶೀಘ್ರದಲ್ಲೇ ಅಭ್ಯರ್ಥಿಗಳ ಮಾಹಿತಿಗೆ ಪ್ರಕಟಿಸಲಾಗುತ್ತದೆ ಎಂದು ಪ್ರಕಟಣೆ ಮೂಲಕ ತಿಳಿಸಲಾಗಿದೆ.
ಕರ್ನಾಟಕ ಲೋಕಸೇವಾ ಆಯೋಗವು 2020 ರ ಜನವರಿ ತಿಂಗಳಲ್ಲಿ ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇದ್ದ 2019ನೇ ಸಾಲಿನ ಪ್ರಥಮ ದರ್ಜೆ ಸಹಾಯಕ ಹುದ್ದೆಗಳಿಗೆ ಅಧಿಸೂಚನೆ ಪ್ರಕಟಿಸಿತ್ತು. ಈ ಹುದ್ದೆಗಳಿಗೆ ದಿನಾಂಕ 23-01-2021 ರಂದು ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯನ್ನು ಹಾಗೂ ದಿನಾಂಕ 24-01-2021 ರಂದು ಎರಡು ಸೆಷನ್‌ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲು ನಿಗದಿಪಡಿಸಲಾಗಿತ್ತು.