News

ಕಿಸಾನ್ ವಿಕಾಸ್ ಪತ್ರದ ಯೋಜನೆಯಲ್ಲಿ ಹೂಡಿಕೆ ಮಾಡಿ ಹಣ ದುಪ್ಪಟ್ಟುಗೊಳಿಸಿಕೊಳ್ಳಿ

11 October, 2020 10:27 AM IST By:

ಭಾರತೀಯ ಅಂಚೆ ಇಲಾಖೆ ಜನರಿಗೆ ವಿವಿಧ ಉಳಿತಾಯ ಯೋಜನೆಗಳನ್ನು ನೀಡುತ್ತಿದ್ದು ಕಿಸಾನ್‌ ವಿಕಾಸ್‌ ಪತ್ರ ಅವುಗಳಲ್ಲಿ ಪ್ರಮುಖವಾದುದು. ಅಂಚೆ ಕಚೇರಿಯ ಬೇರೆ ಉಳಿತಾಯ ಯೋಜನೆಗಳಿಗಿಂತ ಇದರಲ್ಲಿ ಬಡ್ಡಿಮೊತ್ತ ಕಡಿಮೆಯಾದರೂ ಕೂಡ ದೀರ್ಘಾವಧಿಯಲ್ಲಿ ಹಣ ಹೂಡಿಕೆ ಮಾಡಲು ಯೋಚಿಸುತ್ತಿರುವವರಿಗೆ ಇದು ಸುರಕ್ಷಿತವಾದ ಆಯ್ಕೆಯಾಗಿದೆ. ಕಿಸಾನ್ ವಿಕಾಸ್ ಪತ್ರ ಅಂದರೇನು? ಸರ್ಕಾರ ತಂದಿರುವ ಬದಲಾವಣೆಗಳೇನು? ಹೂಡಿಕೆಯಿಂದ ಲಾಭವೇನು? ನಷ್ಟವೇನು? ಎಂಬುದರ ವಿವರ ಇಲ್ಲಿದೆ.

ಕಿಸಾನ್ ವಿಕಾಸ್ ಪತ್ರ ರೈತರಿಗೆ ಮಾತ್ರ ಸೀಮಿತವಲ್ಲ. ಯಾರು ಬೇಕಾದರೂ ಹೂಡಿಕೆ ಮಾಡಬಹುದು. ಕನಿಷ್ಠ 1,000 ರೂ.ಗಳಿಂದ ಆರಂಭಿಸಿ 5,000 ರೂ, 10,000 ರೂ, ಮತ್ತು 50,000 ರೂ. ಮುಖಬೆಲೆಯಲ್ಲಿ ಹೂಡಬಹುದು. ಗರಿಷ್ಠ ಮಿತಿ ಇಲ್ಲವಾದ್ದರಿಂದ ಎಷ್ಟು ಬೇಕಾದರೂ ಹಣವನ್ನು ಕೆವಿಪಿಯಲ್ಲಿಡಬಹುದು. ಆದರೆ ಒಂದೂವರೆ ಸಾವಿರ, ಐದೂವರೆ ಸಾವಿರ ಅಂತ ಹೂಡಲಾಗದು. 1,5,10 ಅಥವಾ 50 ಸಾವಿರದಂತೆ ತೊಡಗಿಸಿಕೊಳ್ಳಬಹುದು

ಕಿಸಾನ್ ವಿಕಾಸ್ ಪತ್ರದಲ್ಲಿ ಹೂಡಿಕೆ ಮಾಡುವುದು ಹೇಗೆ?

ಈ ಯೋಜನೆ ಭಾರತೀಯ ಅಂಚೆ ಕಚೇರಿಯಲ್ಲಿ ಲಭ್ಯವಿದೆ. ಕಿಸಾನ್ ವಿಕಾಸ್ ಪತ್ರ ಯೋಜನೆ ಅರ್ಜಿ ಪಡೆದುಕೊಳ್ಳಬೇಕು. ಅರ್ಜಿ ತುಂಬಿಸಿ ನಿಮ್ಮ ಭಾವಚಿತ್ರದೊಂದಿಗೆ ಹೂಡಿಕೆ ಮೊತ್ತವನ್ನು ನಗದು ಅಥವಾ ಚೆಕ್ ಮೂಲಕ ಪಾವತಿಸಬಹುದು. ಅಂಚೆ ಕಚೇರಿಯಿಂದ ನೀಡಲಾಗುವ ಕಿಸಾನ್ ವಿಕಾಸ್ ಪತ್ರದಲ್ಲಿ ಖಾತೆದಾರರ ಹೆಸರು, ಮೊತ್ತ ಹಾಗೂ ಮೆಚ್ಯುರಿಟಿ ಆಗುವ ದಿನ ಹಾಗೂ ಕೈಗೆ ಸಿಗಲಿರುವ ಮೊತ್ತ ದಾಖಲಾಗಿರುತ್ತದೆ.

ಕಿಸಾನ್ ವಿಕಾಸ್ ಪತ್ರದಲ್ಲಿ ಯಾರು ಹೂಡಿಕೆ ಮಾಡಬಹುದು?

ಭಾರತೀಯ ನಾಗರಿಕರೆಲ್ಲರಿಗೂ ಈ ಯೋಜನೆ ಮುಕ್ತವಾಗಿದೆ. ಕಿಸಾನ್ ವಿಕಾಸ್ ಪತ್ರ ನಿಮ್ಮ ಹೆಸರು ಅಥವಾ ಅಪ್ರಾಪ್ತರ ಹೆಸರಿನಲ್ಲಿ ಪಡೆಯಬಹುದು. ಇಬ್ಬರು ವಯಸ್ಕರು ಜಂಟಿಯಾಗಿ ಕೆವಿಪಿ ಪಡೆದುಕೊಳ್ಳಬಹುದಾಗಿದೆ. ಇದೊಂದು ವೈಯಕ್ತಿಕ ಹೂಡಿಕೆಯಾಗಿದೆ. ಬಿಸಿನೆಸ್ ಸಂಸ್ಥೆಗಳು, ಸಂಘಟನೆಗಳು, ಎನ್ನಾರಿಗಳು, ಹಿಂದೂ ಅವಿಭಕ್ತ ಕುಟುಂಬ(HUF)ದಲ್ಲಿರುವವರು ಕೆವಿಪಿ ಪಡೆಯಲು ಅನರ್ಹರಾಗಿದ್ದಾರೆ.

ಕನಿಷ್ಠ 1 ಸಾವಿರ ಹೂಡಿಕೆ:

ಇದರಲ್ಲಿ ಕನಿಷ್ಠ 1,000 ರೂ.ಗಳಿಂದ ಎಷ್ಟಾದರೂ ಹಣ ಉಳಿತಾಯ ಮಾಡಬಹುದು. ಗರಿಷ್ಠ ಮೊತ್ತಕ್ಕೆ ಮಿತಿ ಇಲ್ಲ. ಜತೆಗೆ ಹೂಡಿಕೆ ಮಾಡಿದ ಮೊತ್ತ ಮೆಚ್ಯುರಿಟಿಗೆ ಬರಲು 10 ವರ್ಷ 4 (124)ತಿಂಗಳುಗಳು ಬೇಕಾಗಿದ್ದು , ಅಗತ್ಯಬಿದ್ದರೆ ಯೋಜನೆ ಪ್ರಾರಂಭಿಸಿದ ದಿನಾಂಕದಿಂದ ಎರಡು ಅಥವಾ ಒಂದೂವರೆ ವರ್ಷದಲ್ಲಿ ಹಣ ಹಿಂಪಡೆಯಬಹುದು.

ಶೇ. 6.9ರಷ್ಟು ಬಡ್ಡಿ ದರ:

ತ್ತೈಮಾಸಿಕ ಹಣಕಾಸಿನ ಆಧಾರದ ಮೇಲೆ ಈ ಉಳಿತಾಯಕ್ಕೆ ಬಡ್ಡಿದರವನ್ನು ಹಣಕಾಸು ಇಲಾಖೆ ಅನುಸರಿಸುತ್ತದೆ. ಸದ್ಯ ಈ ಉಳಿತಾಯ ಖಾತೆ ಹೊಂದುವವರು ಶೇ.6.9ರಷ್ಟು ಬಡ್ಡಿಯನ್ನು ಪಡೆಯಬಹುದು. ಜಂಟಿಯಾಗಿ ಖಾತೆ ತೆರೆಯಬಹುದು 18 ವರ್ಷ ಮೇಲ್ಪಟ್ಟ ಯಾವುದೇ ಭಾರತೀಯ ಪ್ರಜೆ ಕಿಸಾನ್‌ ವಿಕಾಸ್‌ ಪ್ರಮಾಣ ಪತ್ರ ಪಡೆಯಬಹುದು. ಇಬ್ಬರು ವಯಸ್ಕರು ಜಂಟಿಯಾಗಿ ಮಾಡಿಸಬಹುದು. ಜತೆಗೆ 18 ವರ್ಷಕ್ಕಿಂತ ಕೆಳ ಹರೆಯದವರ ಪರವಾಗಿ ಹೆತ್ತವರು ಅಥವಾ ಪೋಷಕರು ಅದರ ಜವಾಬ್ದಾರರಾಗಿರುತ್ತಾರೆ.

ವರ್ಗಾವಣೆ ಹೇಗೆ?

ಕಿಸಾನ್ ವಿಕಾಸ್ ಪತ್ರವನ್ನು ಯಾವುದೇ ಅರ್ಹ ವ್ಯಕ್ತಿಗಳಿಗೆ ನೀವು ವರ್ಗಾಯಿಸಬಹುದು. ಆದರೆ ಕೆಲವು ನಿಯಮಗಳಿವೆ. ಹೂಡಿಕೆ ಮಾಡಿದ ಒಂದು ವರ್ಷದ ನಂತರ ಮಾತ್ರ ವರ್ಗಾಯಿಸಬಹುದು. ಇದಕ್ಕಾಗಿ ಫಾರ್ಮ್ 'ಬಿ'ಯನ್ನು ಭರ್ತಿಗೊಳಿಸಬೇಕು. ಪೋಸ್ಟ್ ಮಾಸ್ಟರ್ ಅಥವಾ ಬ್ಯಾಂಕ್ ಸಿಬ್ಬಂದಿ ಹೊಸ ಖಾತೆದಾರರ ಹೆಸರಿನಲ್ಲಿ ನೂತನ ಕೆವಿಪಿ ಪ್ರಮಾಣ ಪತ್ರ ಕೊಡುತ್ತಾರೆ. ಇದರಲ್ಲಿ ಮೂಲ ದಿನಾಂಕದ ಹೂಡಿಕೆ, ಠೇವಣಿ ಮೊತ್ತ, ಮೆಚ್ಯೂರಿಟಿ ದಿನಾಂಕ ಮತ್ತು ಮೊತ್ತ ಎಷ್ಟೆಂಬುದು ಇರುತ್ತದೆ. ಅಪ್ರಾಪ್ತರ ಹೆಸರಿನಲ್ಲಿರುವ ಕೆವಿಪಿಯನ್ನು ವರ್ಗಾಯಿಸಲು ಸಾಧ್ಯವಿಲ್ಲ.