News

ರೈತರಿಗೆ ಸಿಹಿ ಸುದ್ದಿ: ಓಲಾ, ಊಬರ್ ಮಾದರಿಯಂತೆ ರೈತರ ಬೆಳೆ ಮಾರುಕಟ್ಟೆಗೆ ಸಾಗಿಸಲು ಬರುತ್ತಿದೆ ಕಿಸಾನ್ ರಥ

21 October, 2020 9:10 AM IST By:

ರೈತರು ಕಷ್ಟಪಟ್ಟು ಬೆಳೆದ ಬೆಳೆಗೆ ಯಾವ ಮಾರುಕಟ್ಟೆಯಲ್ಲಿ ಮಾರಾಟ ಮಾಡಬೇಕು. ಎಲ್ಲಿ ಯಾವ ಬೆಲೆ ಇದೆ ಎಂಬುದು ಗೊತ್ತಿರುವುದಿಲ್ಲ.ತಮ್ಮ ಹತ್ತಿರದ ಎಪಿಎಂಸಿಗೆ ಹೋಗಿ ವರ್ತಕರು ಹೇಳಿದ ಬೆಲೆಗೆ ಮಾರಾಟ ಮಾಡುತ್ತಾರೆ. ಆದರೆ ಬೇರೆ ಕಡೆ ಇದಕ್ಕಿಂತ ಹೆಚ್ಚು ಬೆಲೆ ಇರುತ್ತದೆ. ಕೆಲವು ಸಲ ಬೇರೆ ಕಡೆ ಅಥವಾ ಬೇರೆ ರಾಜ್ಯ ಜಿಲ್ಲೆಗಳಲ್ಲಿ ಹೆಚ್ಚಿನ ಬೆಲೆಯಿದ್ದರೂ ಸಾಗಾಟದ ಸಮಸ್ಯೆಯಿಂದಾಗಿ ವರ್ತಕರು ಹೇಳಿದ ಬೆಲೆಗೆ ಮಾರಾಟ ಮಾಡಿ ಹಾನಿಮಾಡಿಕೊಳ್ಳುತ್ತಾರೆ. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಸರ್ಕಾರ ಹೊಸ ಆ್ಯಪ್‌ ತಂದಿದೆ. ಅದೇ ಕಿಸಾನ್ ರಥ ಆ್ಯಪ್‌. ಇದು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕಾದರೆ ಈ ಮುಂದಿನ ಮಾಹಿತಿಯನ್ನು ಓದಿ.

ತಾವು ಬೆಳೆದ ಬೆಳೆಯನ್ನು ಸಾಗಾಟ ಮಾಡಲಾಗದ ಕಷ್ಟ ಪಡುತ್ತಿರುವ ರೈತರ ಪಾಲಿಗೆ  ಓಲಾ-ಊಬರ್ ಮತ್ತು ಪೋರ್ಟರ್ ಮಾದರಿಯಲ್ಲೇ ರೈತರ ಬೆಳೆಗಳನ್ನು ಸಾಗಿಸುವ ಸಲುವಾಗಿ ಕಿಸಾನ್ ರಥ ಕಾರ್ಯ ನಿರ್ವಹಿಸಲಿದೆ. ಕೇಂದ್ರ ಕೃಷಿ ಸಚಿವಾಲಯದ ವತಿಯಿಂದ ಕೃಷಿ ಉತ್ಪನ್ನಗಳ ಸಾಗಾಟಕ್ಕೆ ಲಾರಿಗಳನ್ನು ಕಾಯ್ದಿರಿಸಲು  ಕಿಸಾನ್ ರಥ ಎಂಬ ಆ್ಯಪ್‌ ಆರಂಭಿಸಲಾಗಿದೆ. ಈ ಆ್ಯಪ್‌ ಸಹಾಯದಿಂದ  ರೈತರು ಇದ್ದ ಜಾಗದಿಂದಲೇ ಅವರ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸುತ್ತದೆ.

ಈ ಆ್ಯಪ್‌ನ್ನು ಪ್ಲೇ ಸ್ಟೋರ್ ದಿಂದ ಡೌನ್ಲೋಡ್ ಮಾಡಿಕೊಂಡು  ಯೋಜನೆಯ ಲಾಭ ಪಡೆದುಕೊಳ್ಳಬಹುದು.

ನಗರ ಪ್ರದೇಶಗಳಲ್ಲಿ ಸಂಚಾರಕ್ಕೆ ಓಲಾ, ಉಬರ್ ಟ್ಯಾಕ್ಸಿಗಳನ್ನು ಬುಕ್ ಮಾಡುವ ರೀತಿಯಲ್ಲಿ ಈ ಆ್ಯಪ್‌ ಮೂಲಕ ಕೃಷಿ ಉತ್ಪನ್ನ ಸಾಗಾಟಕ್ಕೆ ಲಾರಿಗಳನ್ನು ಬುಕ್ ಮಾಡಬಹುದು. ರೈತರು ಎಷ್ಟು ಪ್ರಮಾಣದ ಕೃಷಿ ಉತ್ಪನ್ನ ಸಾಗಾಟ ಮಾಡುತ್ತಾರೆ ಎಂಬುದನ್ನು ತಿಳಿಸಬೇಕು. ಈ ಮಾಹಿತಿ ವರ್ತಕರು ಮತ್ತು ಸಾಗಣೆದಾರರಿಗೆ ರವಾನೆಯಾಗಿ ದೂರವಾಣಿ ಮೂಲಕ ರೈತರನ್ನು ಸಂಪರ್ಕಿಸಿ ಬಾಡಿಗೆ ದರ ಮತ್ತು ದಿನಾಂಕ  ನಿಗದಿ ಮಾಡಿಕೊಳ್ಳಬಹುದು.

ಕಿಸಾನ್ ರಥ ಆ್ಯಪ್‌ನಲ್ಲಿ ವಾಹನದ ಅವಶ್ಯಕತೆ ಇರುವವರು, ತಮ್ಮ ಅವಶ್ಯಕತೆಯನ್ನ ದಾಖಲಿಸಬೇಕು. ಇದನ್ನ ಮಾರ್ಕೆಟ್ನಲ್ಲಿರುವ ವಾಹನ ಸಂಯೋಜಕರಿಗೆ ತಲುಪಿಸಲಾಗುತ್ತದೆ. ನಂತರ ಅವರು, ವಾಹನಗಳ ಮಾಲೀಕರ ಜೊತೆ ಚರ್ಚಿಸಿ ಕೊಟೇಷನ್ ತೆಗೆದುಕೊಳ್ಳುತ್ತಾರೆ. ಇದನ್ನ ಮತ್ತೆ ವಾಹನದ ಅವಶ್ಯಕತೆ ಇರುವ ಗ್ರಾಹಕರಿಗೆ ಕಳುಹಿಸಲಾಗುತ್ತದೆ. ನಂತರ ಗ್ರಾಹಕ ಮತ್ತು ವಾಹನದ ಮಾಲೀಕರು ನೇರವಾಗಿ ಮಾತುಕತೆ ನಡೆಸಿ, ವ್ಯವಹಾರವನ್ನ ಕುದುರಿಸಿಕೊಳ್ಳಬಹುದು.

ಕಿಸಾನ್ ರಥ ಯೋಜನೆಯಲ್ಲಿ 5 ಲಕ್ಷ ಟ್ರಕ್ ಗಳು ಮತ್ತು 20 ಸಾವಿರ ಟ್ರ್ಯಾಕ್ಟರಗಳು:

ಇನ್ನು ಈ ಮಹತ್ವಾಕಾಂಕ್ಷಿ ಕಿಸಾನ್ ರಥ ಯೋಜನೆಗಾಗಿ ದೇಶಾದ್ಯಂತ ಸುಮಾರು 5 ಲಕ್ಷಕ್ಕೂ ಅಧಿಕ ಟ್ರಕ್ ಗಳು ಮತ್ತು 20 ಸಾವಿರಕ್ಕೂ ಅಧಿಕ ಟ್ರಾಕ್ಟರ್ ಗಳನ್ನು ಬಳಸಿಕೊಳ್ಳಲಾಗುತ್ತಿದೆ. ನ್ಯಾಷನಲ್ ಇನ್ ಫಾರ್ಮಟಿಕ್ಸ್ ಸೆಂಟರ್ ಸಂಸ್ಥೆ ಈ ಕಿಸಾನ್ ರಥ ಆ್ಯಪ್ ಅನ್ನು ತಯಾರಿಸಿದ್ದು,  ರೈತರು ತಮ್ಮ ಬೆಳೆಗಳನ್ನು ಎಪಿಎಂಸಿ ಮಂಡಿಗೆ, ವ್ಯಾಪಾರಿಗಳಿಗೆ ಮತ್ತು ಗೋದಾಮುಗಳಿಗೆ ರವಾನೆ ಮಾಡಲು ನೆರವಾಗುತ್ತದೆ.

ಸಾರಿಗೆ ಸಂಪರ್ಕ ಹೇಗೆ?

ಕಿಸಾನ್‌ ರಥದ ಆ್ಯಪ್‌ಗೆ ಮೊದಲು ರಾಜ್ಯ, ಜಿಲ್ಲೆ, ತಾಲೂಕು ಸೇರಿದಂತೆ ರೈತರ ವಿಳಾಸ, ಮೊಬೈಲ್‌ ಸಂಖ್ಯೆ ನಮೂದಿಸಿ ನೋಂದಣಿ ಮಾಡಬೇಕು. ಅಲ್ಲದೇ ರೈತರ ಕೃಷಿ ಉತ್ಪನ್ನ ಯಾವುದು, ಅದು ಎಷ್ಟು ಪ್ರಮಾಣದಲ್ಲಿದೆ ಎಂಬುದನ್ನು ದಾಖಲಿಸಬೇಕು. ಇದಾದ ನಂತರ ಸರಕಾರದ ಏಜೆನ್ಸಿಗಳು ರೈತರಿಗೆ ಕರೆ ಮಾಡಿ ವಿವರ ಪಡೆದುಕೊಳ್ಳುತ್ತದೆ. ಬಳಿಕ ಸ್ಥಳಕ್ಕೆ ಸಾರಿಗೆ ವಾಹನಗಳನ್ನು ಕಳುಹಿಸಿಕೊಡಲಾಗುತ್ತದೆ. ಇಷ್ಟೂ ಕೆಲಸದ ನಂತರ ವಾಹನ ರೈತರ ಮನೆ ಬಾಗಿಲಿಗೆ ಬರುತ್ತದೆ.