News

ದೇಶದಲ್ಲಿಯೇ ಮೊದಲ ಬಾರಿಗೆ ಸರ್ಕಾರದಿಂದಲೇ ತರಕಾರಿಗಳ ಮೂಲ ಬೆಲೆ ನಿಗದಿ

28 October, 2020 6:00 AM IST By:

ಮಾರುಕಟ್ಟೆಯಲ್ಲಿ ದರ ಕುಸಿದಾಗ ಸರ್ಕಾರ ರೈತರ ನೆರವಿಗೆ ಬರಲು ಬೆಂಬಲ ಬೆಲೆ ಘೋಷಿಸುತ್ತದೆ. ಇಲ್ಲಿಯವರೆಗೆ ವಿವಿಧ ಬೆಳೆಗಳ, ತೋಟಗಾರಿಕೆ ಬೆಳೆಗಳ ಬೆಲೆ ಘೋಷಿಸಿ ಬೆಂಬಲ ಬೆಲೆಯಲ್ಲಿ ಖರೀದಿಸುವುದನ್ನು ಕೇಳಿದ್ದೀರಿ. ಆದರೆ ಇದೇ ಮೊದಲ ಬಾರಿಗೆ ಕೇರಳ ಸರ್ಕಾರ ತರಕಾರಿ ಬೆಳೆಗಳಿಗೆ ಮೂಲ ಬೆಲೆ ನಿಗದಿ ಮಾಡಿ ಖರೀದಿಗೆ ಮುಂದಾಗಿದೆ. ಇದೇ ನವೆಂಬರ್ ತಿಂಗಳಿಂದ ರೈತರಿಂದ ಖರೀದಿ ಪ್ರಕ್ರಿಯೆ ನಡೆಯಲಿದೆ.

ಆರಂಭಿಕ ಹಂತದಲ್ಲಿ 16 ರೀತಿಯ ತರಕಾರಿಗಳ ಮೂಲ ದರವನ್ನು ಕೇರಳ ಸರ್ಕಾರ ನಿಗದಿ ಮಾಡಿದ್ದು, ಈ ಮೂಲಕ ದೇಶದಲ್ಲಿಯೇ ಮೊದಲ ಬಾರಿಗೆ ತರಕಾರಿ ಮೂಲಬೆಲೆ ನಿಗದಿ ಮಾಡಿದ ಕೀರ್ತಿ ಕೇರಳ ಸರ್ಕಾರಕ್ಕೆ ಸಲ್ಲುತ್ತದೆ.

 ತರಕಾರಿಗಳಿಗೆ ಮೂಲ ಬೆಲೆ ನಿಗದಿ ಮಾಡಿದ ಮೊದಲ ರಾಜ್ಯ ಎನ್ನುವ ಹೆಗ್ಗಳಿಕೆಗೆ ಕೇರಳ ಪಾತ್ರವಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

ಸೌತೆಕಾಯಿ, ಬೀಟ್ರೂಟ್ಸ್, ಸೋರೆಕಾಯಿ, ಟೊಮ್ಯಾಟೋ, ಬೀನ್ಸ್, ಬಾಳೆಹಣ್ಣು, ಆಲೂಗಡ್ಡೆ, ವಯನಾಡ್ ಬಾಳೆಹಣ್ಣು ಹಾಗೂ ಇತರ ತರಕಾರಿಗಳಿಗೆ ಮೂಲ ಬೆಲೆ ನಿಗದಿ ಮಾಡಲಾಗಿದೆ.

ತರಕಾರಿ ಉತ್ಪಾದನೆಗಿಂತಲೂ 20% ಅಧಿಕ ಮೊತ್ತವನ್ನು ಸರಕಾರ ನಿಗದಿ ಮಾಡುತ್ತದೆ. ರೈತಾಪಿ ವರ್ಗಕ್ಕೆ ಇದರಿಂದ ಅನುಕೂಲವಾಗಲಿದೆ. ಈ ಯೋಜನೆಯು ಮುಂದಿನ ತಿಂಗಳು ನವೆಂಬರ್‌ 1ರಿಂದ ಜಾರಿಗೆ ಬರಲಿದೆ. ಕೇರಳದಲ್ಲಿ ತರಕಾರಿಗಳ ಉತ್ಪಾದನೆಯು ಕಳೆದ ನಾಲ್ಕೂವರೆ ವರ್ಷಗಳಲ್ಲಿ ಎರಡು ಪಟ್ಟು ಏರಿಕೆಯಾಗಿದೆ.  ಮೊದಲ ಹಂತದಲ್ಲಿ ಉತ್ಪಾದನೆಯಾಗುವ 16 ಬಗೆಯ ತರಕಾರಿಗಳಿಗೆ ಈ ಮೂಲ ದರ ಅನ್ವಯವಾಗಲಿದೆ. ನಿಯಮಿತವಾಗಿ ಮೂಲ ದರದ ಪರಿಷ್ಕರಣೆ ಆಗುತ್ತಿರುತ್ತದೆ ಎಂದಿದ್ದಾರೆ.

ಮಾರುಕಟ್ಟೆಯಲ್ಲಿ ತರಕಾರಿಗೆ ಮೂಲ ದರಕ್ಕಿಂತಲೂ ಕಡಿಮೆ ಬೆಲೆ ಇದ್ದ ಪಕ್ಷದಲ್ಲಿ, ಮೂಲ ದರಕ್ಕೆ ರೈತರಿಂದ ಸರ್ಕಾರವೇ ಖರೀದಿ ಮಾಡಲಿದೆ. ತರಕಾರಿಯ ಗುಣಮಟ್ಟದ ಆಧಾರದ ಮೇಲೆ ದರ ನಿಗದಿ ಮಾಡಲಾಗುತ್ತದೆ.

ಸರಕಾರದ ಸ್ಥಳೀಯ ಆಡಳಿತ ಸಂಸ್ಥೆಗಳು, ಈ ಯೋಜನೆಯಲ್ಲಿ ಪ್ರಮುಖ ಪಾತ್ರವಹಿಸಲಿವೆ. ತರಕಾರಿಯ ದಾಸ್ತಾನು ಮತ್ತು ವಿತರಣೆ ಕಾರ್ಯಗಳಲ್ಲಿ ಸಮನ್ವಯ ವಹಿಸಲಿವೆ. ಯೋಜನೆಯ ಲಾಭ ಪಡೆಯಲು ಇಚ್ಛಿಸುವ ರೈತರು, ನ.1ರಿಂದ ಸರಕಾರದ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.