ರೈತರಿಗೆ ಪ್ರಮುಖ ಸುದ್ದಿಗಳನ್ನು ತಲುಪಿಸುವ ಉದ್ದೇಶದಿಂದ ಕೃಷಿ ಜಾಗರಣ ಕನ್ನಡ ಅಗ್ರಿನ್ಯೂಸ್ ಪರಿಚಯಿಸಿದೆ. ಇಂದಿನ ಪ್ರಮುಖ ಸುದ್ದಿಗಳು ಈ ರೀತಿ ಇವೆ.
1. ಕಾವೇರಿ ನೀರು ವಿವಾದ: ನಾಳೆ ಬೆಂಗಳೂರು, 29ಕ್ಕೆ ಕರ್ನಾಟಕ ಬಂದ್!
2. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆ: ಹವಾಮಾನ ಇಲಾಖೆ
3. ಸರ್ಕಾರದಿಂದ ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಜನತಾದರ್ಶನ
4. ಏಷ್ಯನ್ ಕ್ರೀಡಾಕೂಟ: ಭಾರತಕ್ಕೆ ಮೂರು ಬೆಳ್ಳಿ, ಎರಡು ಕಂಚು
5. ಕಾವೇರಿ ನಮ್ಮದು: ಟ್ಟಿಟ್ಟರ್‌ನಲ್ಲಿ ಭಾರೀ ಟ್ರೆಂಡಿಂಗ್
ಸುದ್ದಿಗಳ ವಿವರ ಈ ರೀತಿ ಇದೆ.
1. ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿದ ಈಗಾಗಲೇ ಮಂಡ್ಯ ಬಂದ್ ಮಾಡಲಾಗಿದ್ದು, ಮಂಗಳವಾರ
ಅಂದರೆ ಸೆಪ್ಟೆಂಬರ್ 26ಕ್ಕೆ ಬೆಂಗಳೂರು ಬಂದ್‌ಗೆ ಕರೆನೀಡಲಾಗಿದೆ. ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು
ಕೂಡಲೇ ನಿಲ್ಲಸಬೇಕು ಎಂದು ಒತ್ತಾಯಿಸಲಾಗಿದೆ. ಬೆಂಗಳೂರು ಬಂದ್‌ಗೆ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ
ನೌಕರರ ಸಂಘವೂ ಬೆಂಬಲ ಸೂಚಿಸಿದ್ದು, ಸಾರ್ವಜನಿಕ ಸಂಚಾರ ವ್ಯವಸ್ಥೆಯಲ್ಲಿ ಏರುಪೇರಾಗುವ ಸಾಧ್ಯತೆ ಇದೆ.
ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಎಲ್ಲ ಮಾದರಿಯ ಸೇವೆಗಳನ್ನು ನಿಲ್ಲಿಸುವಂತೆ ಸಂಘಟನೆಗಳು ಮನವಿ ಮಾಡಿವೆ.
ಇನ್ನು ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಜಲ ಹೋರಾಟ ಸಮಿತಿ ನೀಡಿರುವ ಬೆಂಗಳೂರು
ಬಂದ್ ಕರೆಗೆ 180ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಅಲ್ಲದೇ ಬಿಜೆಪಿ, ಜಾತ್ಯಾತೀತ ಜನತಾದಳ
ಹಾಗೂ ಆಮ್ ಆದ್ಮಿ ಪಕ್ಷಗಳೂ ಸಹ ಬೆಂಬಲ ಸೂಚಿಸಿವೆ.
ಇನ್ನು ಸೆಪ್ಟೆಂಬರ್ 29ರಂದು ಕರ್ನಾಟಕ ಬಂದ್‌ಗೆ ಕರೆ ನೀಡಲು ಉದ್ದೇಶಿಸಲಾಗಿದೆ. ಆದರೆ, ಕರ್ನಾಟಕ ಬಂದ್‌ನ ವಿಷಯ ಇನ್ನಷ್ಟು ಸ್ಪಷ್ಟವಾಗಬೇಕಿದೆ.
-------------------
2. ರಾಜ್ಯದ ವಿವಿಧ ಭಾಗದಲ್ಲಿ ಸೋಮವಾರ ಹಾಗೂ ಮಂಗಳವಾರ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಒಳನಾಡಿನ ಬೀದರ್, ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ಹಾಗೂ ದಕ್ಷಿಣ ಒಳನಾಡಿನ
ರಾಮನಗರ, ತುಮಕೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.
ಅಲ್ಲದೇ ವಿಜಯನಗರ ಜಿಲ್ಲೆಯಲ್ಲೂ ಭಾರೀ ಮಳೆಯಾಗಲಿದೆ.
ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದ್ದು, ಸಾಧಾರಣ ಮಳೆಯಾಗಲಿದೆ.
ಕಳೆದ 24 ಗಂಟೆಯ ಅವಧಿಯಲ್ಲಿ ನೈರುತ್ಯ ಮುಂಗಾರು ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಚುರುಕಾಗಿತ್ತು.
ಕರಾವಳಿಯ ಬಹುತೇಕ ಕಡೆಗಳಲ್ಲಿ, ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಹಾಗೂ ಉತ್ತರ ಒಳನಾಡಿನ
ಕೆಲವು ಕಡೆಗಳಲ್ಲಿ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.
-------------------
3. ಸ್ಥಳೀಯ ಮಟ್ಟದ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸುವ ಉದ್ದೇಶದಿಂದ
ರಾಜ್ಯ ಸರ್ಕಾರವು ಸೋಮವಾರ ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಜನತಾದರ್ಶನ ನಡೆಸುತ್ತಿದೆ.
ಏಕಕಾಲದಲ್ಲಿ ಎಲ್ಲ ಜಿಲ್ಲಾ ಉಸ್ತುವಾರಿ ಸಚಿವರು ಸಭೆ ನಡೆಸಿ ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲಿದ್ದಾರೆ.
ಇನ್ನು ರಾಜ್ಯಮಟ್ಟದ ಜನತಾದರ್ಶನ ಕಾರ್ಯಕ್ರಮವು ಸೆಪ್ಟೆಂಬರ್ 30ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಡೆಸಲಿದ್ದಾರೆ.
15 ದಿನಗಳಿಗೊಮ್ಮೆ ಜಿಲ್ಲಾಧಿಕಾರಿಗಳಿಂದ ತಾಲ್ಲೂಕು ಮಟ್ಟದ ಜನತಾದರ್ಶನ ಕಾರ್ಯಕ್ರಮಗಳನ್ನು ಆಯೋಜಿಸಲು ಸಿದ್ಧತೆ ನಡೆದಿದೆ.
-------------------
4. ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾಕೂಟ-2023ರಲ್ಲಿ ಮೊದಲ ದಿನವಾದ ಭಾನುವಾರ
ಭಾರತವು ಪದಕ ಬೇಟೆಯನ್ನು ಪ್ರಾರಂಭಿಸಿದೆ. ಮೊದಲ ದಿನ ಭಾರತವು ಮೂರು ಬೆಳ್ಳಿ, ಎರಡು ಕಂಚು ಸೇರಿದಂತೆ
ಐದು ಪದಕಗಳನ್ನು ತನ್ನದಾಗಿಸಿಕೊಂಡಿದೆ. ರೋವರ್ಸ್‌ನಲ್ಲಿ ಮೂರು ಪದಕಗಳು
ರೈಫಲ್ ಶೂಟರ್‌ಗಳು ಮತ್ತೆರಡು ಪದಕಗಳನ್ನು ಜಯಿಸಿದ್ದಾರೆ.
ಲೈಟ್‌ವೇಟ್ ಪುರುಷರ ಡಬ್ಬಲ್ಸ್ ಸ್ಕಲ್ಸ್ ವಿಭಾಗದಲ್ಲಿ ಅರ್ಜುನ್ ಲಾಲ್ ಜಾಟ್ ಮತ್ತು ಅರವಿಂದ್ ಸಿಂಗ್
ಅವರು ಬೆಳ್ಳಿ ಪದಕಗಳನ್ನು ಗೆದ್ದಿದ್ದಾರೆ. ತಂಡದ ಸ್ಪರ್ಧೆಯಲ್ಲಿ ಭಾರತೀಯ ಏರ್ ರೈಫಲ್ ತಂಡ ಬೆಳ್ಳಿ ಪದಕ ಗೆದ್ದಿದೆ.
ರೈಫಲ್ ತಂಡದಲ್ಲಿ ಸ್ಪರ್ಧಿಸಿದ್ದ ರಮಿತ್ ಜಿಂದಾಲ್ ಅವರು ವೈಯಕ್ತಿಕ
ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.
5. ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಕರ್ನಾಟಕದಲ್ಲಿ ಭಾರೀ ಹೋರಾಟ ನಡೆಯುತ್ತಿದ್ದು,
ಸೋಮವಾರ ಸಂಜೆ 6ಕ್ಕೆ ಕಾವೇರಿನಮ್ಮದು ಎನ್ನುವ ಟ್ವಿಟ್ಟರ್ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ಕಾವೇರಿ ನಮ್ಮದು ಎನ್ನುವ ಅಭಿಯಾನ ಹಮ್ಮಿಕೊಳ್ಳುವ ವಿಷಯವೇ ಸೋಮವಾರ ಬೆಳಿಗ್ಗೆಯಿಂದ ಟ್ಟಿಟ್ಟರ್‌ನಲ್ಲಿ ಟ್ರೆಂಡಿಂಗ್‌ನಲ್ಲಿತ್ತು.