News

ದೀಪಾವಳಿಗಿಲ್ಲ ಪಟಾಕಿ ಸದ್ದು! ನಿಷೇಧಿಸಲು ರಾಜ್ಯ ಸರ್ಕಾರ ನಿರ್ಧಾರ

06 November, 2020 4:40 PM IST By:

ಕೋವಿಡ್ ಪ್ರಕರಣದ ಹಿನ್ನೆಲೆ ಹಾಗೂ ಪಟಾಕಿ ಬಳಕೆಯಿಂದ ವಾತಾವರಣದ ಮೇಲಾಗುವ ಪರಿಣಾಮಗಳನ್ನು ಅವಲೋಕಿಸಿ ಪಶ್ಚಿಮಬಂಗಾಳ, ದೆಹಲಿ  ಮಹಾರಾಷ್ಟ್ರದ ನಂತರ ಕರ್ನಾಟಕದಲ್ಲಿಯೂ ಈ ಬಾರಿ ದೀಪಾವಳಿಗೆ ಪಟಾಕಿಯನ್ನು ನಿಷೇಧಿಸಲು ನಿರ್ಧರಿಸಲಾಗಿದೆ.

ಕರ್ನಾಟಕ ರಾಜ್ಯದಲ್ಲಿಯೂ ಸಹ ಸಂಪೂರ್ಣವಾಗಿ ಪಟಾಕಿ ನಿಷೇಧಿಸಿ ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.

ರಾಜ್ಯದಲ್ಲಿ ಯಾವುದೇ ಪಟಾಕಿಗಳನ್ನು ಮಾರಾಟ ಮಾಡಲು ಅವಕಾಶವಿಲ್ಲ, ಈ ಸಂಬಂಧ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಆದೇಶ ಹೊರಡಿಸಲಾಗುವುದು ಎಂದು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

ಕೋವಿಡ್‌ ಕಾರಣದಿಂದಾಗಿ ರಾಜಸ್ಥಾನದಲ್ಲಿ ಈಗಾಗಲೇ ಪಟಾಕಿ ನಿಷೇಧ ಮಾಡಿ ಅಲ್ಲಿನ ಸರ್ಕಾರ ಆದೇಶ ಹೊರಡಿಸಿದೆ. ದೆಹಲಿಯಲ್ಲಿ ಸರ್ಕಾರ ಕಡಿಮೆ ಮಾಲಿನ್ಯ ಉಂಟುಮಾಡುವ ಪಟಾಕಿಗಳನ್ನಷ್ಟೇ ಉಪಯೋಗ ಮಾಡಲು ಅನುಮತಿ ನೀಡಿದೆ. ಈ ನಿಟ್ಟಿನಲ್ಲಿ ಕರ್ನಾಟಕದಲ್ಲೂ ಪಟಾಕಿ ನಿಷೇಧದ ಕುರಿತಾಗಿ ತಜ್ಞರು ಸಲಹೆ ನೀಡಿದ್ದರು.

ಹೋಂ ಐಸೋಲೇಷನ್‌ನಲ್ಲಿರುವ ಕೋವಿಡ್‌ ರೋಗಿಗಳಿಗೆ ಪಟಾಕಿ ಹೊಗೆಯಿಂದ ಹಾಗೂ ಅದು ಸೃಷ್ಟಿಸುವ ವಾಯು ಮಾಲಿನ್ಯದಿಂದ ಆರೋಗ್ಯದಲ್ಲಿ ತೀವ್ರ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ತಜ್ಞ ವೈದ್ಯರು ಪಟಾಕಿ ನಿಷೇಧಿಸುವಂತೆ ಸಲಹೆ ನೀಡಿದ್ದರು. ತಜ್ಞರ ಸಲಹೆಗೆ ಒಪ್ಪಿಗೆ ಸೂಚಿಸಿದ ಸರ್ಕಾರ ಇದೀಗ ಪಟಾಕಿ ನಿಷೇಧ ಮಾಡಿದೆ. ಶೀಘ್ರದಲ್ಲೇ ಅಧಿಕೃತ ಆದೇಶ ಹೊರಬೀಳಲಿದೆ. ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿಸುವುದರಿಂದ ರಾಸಾಯನಿಕ ಹರಡಿ ಕೋವಿಡ್ ಹೆಚ್ಚಾಗುವ ಅಪಾಯವಿದೆ ಎಂದು ತಜ್ಞರು ಸೂಚಿಸಿದ್ದಾರೆ.