News

ರಾಷ್ಟ್ರಪ್ರಶಸ್ತಿಗೆ ರಾಜ್ಯದ ಇಬ್ಬರು ಶಿಕ್ಷಕರ ಆಯ್ಕೆ

22 August, 2020 10:30 AM IST By:

2020ನೇ ಸಾಲಿನ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ (, national best teachers award) ಪ್ರಕಟಿಸಲಾಗಿದ್ದು,ಕರ್ನಾಟಕದ ಇಬ್ಬರು ಸೇರಿ ಒಟ್ಟು 47 ಜನ ಶಿಕ್ಷಕರಿಗೆ ಪ್ರಶಸ್ತಿ ಲಭಿಸಿದೆ.

ದೇಶದಲ್ಲಿ ಒಟ್ಟು 153 ಜನ ಶಿಕ್ಷಕರನ್ನು ಶಾರ್ಟ್ ಲಿಸ್ಟ್ ಮಾಡಲಾಗಿದ್ದು, ಇದರಲ್ಲಿ ಅಂತಿಮವಾಗಿ ಪ್ರಶಸ್ತಿಗಾಗಿ 47 ಜನ ಶಿಕ್ಷಕರನ್ನು ಆಯ್ಕೆಮಾಡಲಾಗಿದೆ.  ಈ ಪ್ರಶಸ್ತಿಯನ್ನು ಕೇಂದ್ರ ಶಿಕ್ಷಣ ಸಚಿವಾಲಯ ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವಾಲಯ ಕೊಡತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಯಾಕೂಬ್ ಎಸ್. ಹಾಗೂ ಕಲಬುರಗಿ ಜಿಲ್ಲೆಯ ಅಫಜಲ್ಪುರ ತಾಲೂಕಿನ ಬಂದರವಾಡ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಸುರೇಖಾ ಜಗನ್ನಾಥರವರಿಗೆ ಈ ಗೌರವಲಭಿಸಿದೆ.

ರಾಷ್ಟ್ರಪ್ರಶಸ್ತಿಗೆ ಆಯ್ಕೆಯಾದ ಸುರೇಖಾ:

ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ವಂದಲಿ ಗ್ರಾಮದವರಾದ ಸುರೇಖಾ ಅವರು ಗುಲಬರ್ಗಾ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದಲ್ಲಿ ಎಂ.ಎಸ್ಸಿ. ಪದವಿ ಪಡೆದಿದ್ದಾರೆ. ಚಿತ್ತಾಪುರ ತಾಲ್ಲೂಕಿನ ಕೊಡದೂರು ಶಾಲೆಯಲ್ಲಿ 2004ರಲ್ಲಿ ಸಹ ಶಿಕ್ಷಕಿಯಾಗಿ ಕರ್ತವ್ಯಕ್ಕೆ ಸೇರಿದ ಸುರೇಖಾ ಬಳಿಕ ಅಫಜಲಪುರ ತಾಲ್ಲೂಕಿನ ಗೊಬ್ಬುರ ಸರ್ಕಾರಿ ಶಾಲೆಯಲ್ಲಿಯೂ ಸೇವೆ ಸಲ್ಲಿಸಿ ಬಳಿಕ ಬಂದರವಾಡ ಶಾಲೆಗೆ ವರ್ಗಾವಣೆಯಾದರು.

ವಿಜ್ಞಾನದ ಬಗ್ಗೆ ಆಸಕ್ತಿಕರವಾಗಿ ಪಾಠ ಮಾಡುವ ಸುರೇಖಾ ಅವರು ತಮಿಳುನಾಡಿನ ಕಾರುಣ್ಯ ವಿಶ್ವವಿದ್ಯಾಲಯದಲ್ಲಿ ನಡೆದ ಸಸ್ಯಶಾಸ್ತ್ರದ ಕುರಿತಾದ ಅಂತರರಾಷ್ಟ್ರೀಯ ವಿಚಾರ ಸಂಕೀರ್ಣದಲ್ಲಿ ಪ್ರಬಂಧ ಮಂಡಿಸಿದ್ದಾರೆ. 2016ರಲ್ಲಿ ತಾಲ್ಲೂಕು ಮಟ್ಟದ ಉತ್ತಮ ಶಿಕ್ಷಕಿ, 2017ರಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ, ರಾಜೀವಗಾಂಧಿ ಸ್ಮಾರಕ ರಾಜ್ಯಮಟ್ಟದ ಅತ್ಯುತ್ತಮ ವಿಜ್ಞಾನ ಶಿಕ್ಷಕಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ರಾಷ್ಟ್ರಪ್ರಶಸ್ತಿಗೆ ಆಯ್ಕೆಯಾದ ಯಾಕೂಬ್‌:

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಯಾಕೂಬ್ ಎಸ್ ಶಾಲೆಯಲ್ಲಿ ಗಣಿತ ಪ್ರಯೋಗಾಲಯ ಆರಂಭಿಸುವ ಮೂಲಕ ಈ ವಿಷಯಕ್ಕೆ ಹೊಸ ಆಯಾಮ ತಂದುಕೊಟ್ಟಿದ್ದರು. ಯಾಕೂಬ್ ಗೆ 2003 ರಲ್ಲಿ ಶಿಕ್ಷಣ ಇಲಾಖೆಯಿಂದ ಜನಮೆಚ್ಚಿದ ಶಿಕ್ಷಕ ಹಾಗೂ 2018 ರಲ್ಲಿ ರಾಜ್ಯ ಪ್ರಶಸ್ತಿ ಲಭಿಸಿದೆ