News

ಮೇ 10 ರಿಂದ ರಾಜ್ಯದಲ್ಲಿ 15 ದಿನ ಲಾಕ್‌ಡೌನ್‌

07 May, 2021 8:50 PM IST By:

ರಾಜ್ಯದಲ್ಲಿ ಕೊರೋನೋ ಸೋಂಕು ಹೆಚ್ಚು ತ್ತಿರುವ ಹಿನ್ನೆಲೆಯಲ್ಲಿ ರಾಜ್ಯವನ್ನು 15 ದಿನ ಸಂಪೂರ್ಣ ಲಾಕ್ ಡೌನ್ ಮಾಡಲಾಗಿದೆ. ಇದೇ ಮೇ 10ರ ಬೆಳಿಗ್ಗೆ 6 ಗಂಟೆಯಿಂದ ಅನ್ವಯವಾಗುವಂತೆ ಹೊಸ ಲಾಕ್‌ಡೌನ್‌ನ್ನು ಕರ್ನಾಟಕ ಸರಕಾರ ಘೋಷಿಸಿದೆ. ಇದು ಈಗಿನ ಲಾಕ್‌ಡೌನ್‌ಗಿಂತಲೂ ಕಠಿಣವಾಗಿರಲಿದ್ದು, ಮತ್ತಷ್ಟು ಹೆಚ್ಚುವರಿ ನಿರ್ಬಂಧಗಳನ್ನು ಹೇರಲಾಗಿದೆ. 

ಕೊರೊನಾ ಸೋಂಕು ತಡೆಗಟ್ಟಲು ಕೈಗೊಂಡ ಕೊರೋನಾ ಕರ್ಪ್ಯೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಮೇ.10 ರ ಬೆಳಗ್ಗೆ 6 ರಿಂದ ಮೇ. 25 ರ ಮುಂಜಾನೆ 6 ಗಂಟೆ ವರೆಗೆ ಸಂಪೂರ್ಣ ಲಾಕ್ ಡೌನ್ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

ಬೆಳಗ್ಗೆ ಹಲವು ಸಚಿವರೊಂದಿಗೆ  ಸುದೀರ್ಘ ಚರ್ಚೆ ಬಳಿಕ ಸಂಜೆ ಮುಖ್ಯ ಕಾರ್ಯದರ್ಶಿಯೊಂದಿಗೆ ಚರ್ಚೆ ನಡೆಸಿ, ಲಾಕ್ ಡೌನ್ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. 2ನೇ ಹಂತದ ಕೊರೋನಾ ಅಲೆ ನಿರೀಕ್ಷೆ ಮೀರಿ,  ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ  ಸೋಂಕು ಮತ್ತು ಸಾವಿನ ಪ್ರಮಾಣ ಹೆಚ್ಚಾಗುತ್ತಿದೆ. ಇದನ್ನು ತಡೆಯಲು ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೆ ತಂದಿದ್ದು, ಇದನ್ನು ಸಾರ್ವಜನಿಕರು ಕಟ್ಟುನಿಟ್ಟಾಗಿ ಪಾಲಿಸುವುದು ಅತ್ಯಗತ್ಯ ಎಂದರು.

ಸ್ಥಳದಲ್ಲಿಯೇ ಕಾರ್ಮಿಕರು/ ಸಿಬ್ಬಂದಿ ಲಭ್ಯವಿರುವ ಕೈಗಾರಿಕೆಗಳು/ ಉತ್ಪಾದನಾ ಘಟಕಗಳು ಕಾರ್ಯ ನಿರ್ವಹಿಸಬಹುದು. ಸ್ಥಳದಲ್ಲಿಯೇ ಕಾರ್ಮಿಕರು, ಕೆಲಸಗಾರರನ್ನು ಹೊಂದಿರುವ ನಿರ್ಮಾಣ ಚಟುವಟಿಕೆಗಳಿಗೆ ಹಾಗೂ ರಸ್ತೆ ಕಾಮಗಾರಿಗಳಿಗೆ ಅನುಮತಿ ನೀಡಲಾಗಿದೆ.

ಹೊಟೇಲ್, ಪಬ್, ಬಾರ್, ಕೈಗಾರಿಕಾ ಚಟುವಟಿಕೆಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗುವುದು.  ಹಾಲು, ಹಣ್ಣು , ತರಕಾರಿ, ಮಾಂಸ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ ಎಂದು ಹೇಳಿದರು

ಹಾಲಿನ ಬೂತ್ ಗಳು ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ತೆರೆಯಲಿದ್ದು, ತಳ್ಳುವ ಗಾಡಿಗಳಿಗೆ  ಅವಕಾಶ ಮಾಡಿಕೊಡಲಾಗಿದೆ. ಕಟ್ಟಡ  ನಿರ್ಮಾಣ ಕಾಮಗಾರಿಗೆ ಅವರಿರುವ ಸ್ಥಳದಲ್ಲಿ ಕೆಲಸ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಯಾರೂ ಕೂಡ ಬೆಂಗಳೂರು ಬಿಟ್ಟು ತೆರಳಬೇಡಿ ಎಂದು ಕಾರ್ಮಿಕರಿಗೆ ಮನವಿ ಮಾಡಿದರು. ರಸ್ತೆ ಕಾಮಗಾರಿಗಳು ಎಂದಿನಂತೆ ಮುಂದುವರಿಯಲಿದೆ ಎಂದು ಹೇಳಿದ ಅವರು, ಮದುವೆಗೆ 50 ಜನರಿಗಷ್ಟೇ   ಅವಕಾಶ ಕಲ್ಪಿಸಲಾಗಿದೆ. ನಿಯಮ ಮೀರಿ ಜನ ಸೇರಿದರೆ ಅಂತಹವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪಾರ್ಸೆಲೆಗೆ ಅವಕಾಶ:

ಹೊಟೇಲ್ ಗಳಲ್ಲಿ ಪಾರ್ಸಲ್ ಗಳಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ.  ಮಾಸ್ಕ್ ಹಾಕದೇ ಓಡಾಡುವವರ  ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸರ್ಕಾರಿ ಕಚೇರಿಗಳಲ್ಲಿ ಭಾಗಶಃ ಸಿಬ್ಬಂದಿಗಳು ಮಾತ್ರ ಕಾರ್ಯನಿರ್ವಹಿಸಲು ಅನುವು ಮಾಡಿಕೊಡಲಾಗಿದೆ . ಜೊತೆಗೆ  ಅಂತರ್ ರಾಜ್ಯ ಜಿಲ್ಲಾ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿದೆ ಎಂದು ಅವರು ಹೇಳಿದರು.

ಈ ನಡುವೆ ಮಾರ್ಗಸೂಚಿ ಬಿಡುಗಡೆ ಮಾಡಿರುವ ಸರ್ಕಾರ, ಮೆಟ್ರೋ ರೈಲು, ಟ್ಯಾಕ್ಸಿಗಳು, ಆಟೋ ರಿಕ್ಷಾಗಳು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ತುರ್ತು ಸೇವೆಯ ವಾಹನಗಳಿಗಷ್ಟೇ  ಅವಕಾಶ ಕಲ್ಪಿಸಲಾಗಿದೆ.  ಶಾಲಾ-ಕಾಲೇಜುಗಳು, ಶಿಕ್ಷಣ ಸಂಸ್ಥೆಗಳು ಸಂಪೂರ್ಣ ಮುಚ್ಚಲಿದ್ದು, ಆನ್ ಲೈನ್ ತರಗತಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಹೋಟೆಲ್ , ರೆಸ್ಟೋರೆಂಟ್, ಆತಿಥ್ಯ ಸಂಸ್ಥೆಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. ಸಿನಿಮಾ ಹಾಲ್, ಶಾಪಿಂಗ್ ಮಾಲ್,  ವ್ಯಾಯಾಮ ಶಾಲೆ, ಕ್ರೀಡಾ ಸಂಕೀರ್ಣ, ಆಟದ ಮೈದಾನ, ಈಜುಕೊಳ, ಪಾರ್ಕ್ ಮನರಂಜನಾ ಪಾರ್ಕ್, ಕ್ಲಬ್, ಚಿತ್ರಮಂದಿರವನ್ನು ಬಂದ್ ಮಾಡಲಾಗಿದೆ.

ಆರೋಗ್ಯ, ವೈದ್ಯಕೀಯ ಶಿಕ್ಷಣ, ಪೊಲೀಸ್,  ಗೃಹ ರಕ್ಷಕ ದಳ, ಬಂಧೀಖಾನೆ, ನಾಗರಿಕ ರಕ್ಷಣೆ, ಅಗ್ನಿಶಾಮಕ ಸೇವೆ,  ಕಂದಾಯ ಇಲಾಖೆ, ವಿಪತ್ತು ನಿರ್ವಹಣಾಇಲಾಖಾ ಅಧಿಕಾರಿಗಳು, ಬೆಸ್ಕಾಂ, ಒಳಚರಂಡಿ, ನೀರು ,  ಖಜಾನೆ ಅಧಿಕಾರಿಗಳು, ಬ್ಯಾಂಕ್ , ವಿಮಾ ಕಂಪನಿಗಳು , ಎಟಿಎಂಗಳು, ಮುದ್ರಣ ಮತ್ತು ಎಲೆಕ್ರ್ಟಾನಿಕ್ ಮಾಧ್ಯಮಗಳು ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡಲಾಗಿದೆ ಎಂದರು.