News

ಲಾಕ್ಡೌನ್ ಸಂಕಷ್ಟ 1250 ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ

19 May, 2021 6:09 PM IST By:
Kanataka C,M B,S Yadiyurappa

ಕೋವಿಡ್ -19 ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲಯಲ್ಲಿ ರಾಜ್ಯದಲ್ಲಿ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಇದರಿಂದ ಹಲವಾರು ವಲಯಗಳು ಸಂಕಷ್ಟಕ್ಕೆ ಸಿಲುಕಿವೆ.  ಬಡವರ, ಕೂಲಿಕಾರ್ಮಿಕರ, ರೈತರ ನೆರವಿಗಾಗಿ 1250 ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್ ಘೋಷಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.

ಅವರು ಹಿರಿಯ ಸಚಿವರೊಂದಿಗೆ ಸಭೆ ಮುಗಿಸಿದ ಬಳಿಕೆ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ,ಫಲಾನುಭವಿಗಳಿಗೆ ನೇರವಾಗಿ ಅವರ ಖಾತೆಗೆ ಹಣ ವರ್ಗಾವಣೆ ಮಾಡಲಾಗುವುದು. ರೈತರು, ಹೂ ಬೆಳೆಗಾರರು, ಹಣ್ಣು ಮತ್ತು ತರಕಾರಿ ಬೆಳೆಗಾರರು, ಆಟೋ, ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್ ಚಾಲಕರು, ಕಟ್ಟಡ ಕಾರ್ಮಿಕರು, ಅಸಂಘಟಿತ ವಲಯದ ಕ್ಷೌರಿಕರು, ಅಗಸರು, ಟೈಲರ್‌ಗಳು, ಹಮಾಲಿಗಳು, ಚಿಂದಿ ಆಯುವವರು, ಕುಂಬಾರರು, ಭಟ್ಟಿ ಕಾರ್ಮಿಕರು, ಅಕ್ಕ ಸಾಲಿಗರು, ಮೆಕ್ಯಾನಿಕ್, ಕಮ್ಮಾರರು, ಚಮ್ಮಾರರು, ಗೃಹ ಕಾರ್ಮಿಕರು, ರಸ್ತೆ ಬದಿಯ ವ್ಯಾಪಾರಸ್ಥರು, ಕಲಾವಿದರು, ಕಲಾ ತಂಡಗಳಿಗೆ ಆರ್ಥಿಕ ನೆರವು ನೀಡಲಾಗುವುದು ಎಂದರು.

ರಾಜ್ಯದ ಅನೇಕ ಜಿಲ್ಲೆಗಳಲ್ಲಿನ ಹೂವು ಬೆಳೆಗಾರರಿಗೆ ಪ್ರತಿ ಹೆಕ್ಟೇರ್ ಹೂವು ಹಾನಿಗೆ 10 ಸಾವಿರದಂತೆ ಸಹಾಯಧನ-ಇದರಿಂದ ಸುಮಾರು 20 ಸಾವಿರ ರೈತರಿಗೆ ಇದರಿಂದ ಸಹಾಯ-12.73 ಕೋಟಿ ರೂ ಇದರಿಂದ ಸರ್ಕಾರಕ್ಕೆ ಖರ್ಚು ಆಗಲಿದೆ. ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಉಂಟಾಗಿರುವ ನಷ್ಟಕ್ಕೆ ಕನಿಷ್ಠ 1 ಹೆಕ್ಟೇರ್ ನಿಂದ ಪ್ರತಿ ಹೆಕ್ಟೇರ್ ಗೆ 10 ಸಾವಿರ ರೂಪಾಯಿಗಳಂತೆ ಧನಸಹಾಯ, ಇದರಿಂದ 60ರಿಂದ 70 ಸಾವಿರ ರೈತರಿಗೆ ಅನುಕೂಲ-70 ಕೋಟಿ ರೂ ಖರ್ಚು ಆಗಲಿದೆ.  ಆಟೋ, ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ, ಲೈಸೆನ್ಸ್ ಹೊಂದಿರುವವರಿಗೆ ನೋಂದಣಿ ಮಾಡಿಸಿದ ಪ್ರತಿಯೊಬ್ಬ ಚಾಲಕನಿಗೆ ತಲಾ 3 ಸಾವಿರ ರೂಪಾಯಿ ಜಮೆ ಮಾಡಲಿದೆ.

ಕಟ್ಟಡ ಕಾರ್ಮಿಕರಿಗೆ ತಲಾ 3 ಸಾವಿರದಂತೆ ಕರ್ನಾಟಕ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಣಿ ಮಾಡಿಸಿಕೊಂಡವರಿಗೆ ಜಮೆ ಮಾಡಲಾಗುವುದು. ಅಸಂಘಟಿತ ವಲಯ ಕಾರ್ಮಿಕರಿಗೆ ತಲಾ 2 ಸಾವಿರ ರೂಪಾಯಿಗಳಂತೆ 3 ಲಕ್ಷದ 5 ಸಾವಿರ ಜನಕ್ಕೆ ಅವರ ಖಾತೆಗೆ ಹಣ ಜಮೆ ಮಾಡಲಾಗುವುದು.

ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವವರಿಗೆ ತೊಂದರೆಯಲ್ಲಿದ್ದಾರೆ ಎಂಬ ಕಾರಣಕ್ಕೆ ತಲಾ 2 ಸಾವಿರ ರೂಪಾಯಿ ನೀಡಲಾಗುವುದು. ಕಲಾವಿದರು, ಕಲಾವಿದರ ತಂಡಗಳಿಗೆ ತಲಾ 3 ಸಾವಿರ ರೂಪಾಯಿಗಳಂತೆ 16 ಸಾವಿರ ಜನಕ್ಕೆ ಸರ್ಕಾರ ಧನಸಹಾಯ ನೀಡಲಾಗುವುದು.

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ  ಬಿಪಿಎಲ್ ಕಾರ್ಡ್ ಫಲಾನುಭವಿಗಳಿಗೆ ಅರ್ಜಿ ಸಲ್ಲಿಸಿರುವವರಿಗೆ ಉಚಿತವಾಗಿ 10 ಕೆಜಿ, ಎಪಿಎಲ್ ಅರ್ಜಿದಾರರಿಗೆ ಪ್ರತಿ ಕೆಜಿಗೆ 15 ರೂ.ನಂತೆ ಆಹಾರಧಾನ್ಯ ನೀಡಲಾಗುವುದು. ಇದರಿಂದ 3 ಲಕ್ಷ ಅರ್ಜಿದಾರರಿಗೆ ಸಹಾಯವಾಗಲಿದೆ ಎಂದವರು ಹೇಳಿದರು.

ಬಿಬಿಎಂಪಿ ಮತ್ತು ನಗರ ಪ್ರದೇಶಗಳ ವ್ಯಾಪ್ತಿಯಲ್ಲಿನ ಕಾರ್ಮಿಕರು ಹಾಗೂ ಬಡವರು ಆಹಾರವಿಲ್ಲದೆ ಹಸಿವಿನಿಂದ ಬಳಲಬಾರದು ಎಂದು ಇಂದಿರಾ ಕ್ಯಾಂಟೀನ್‌ನಲ್ಲಿ ಉಚಿತವಾಗಿ ಊಟದ ವ್ಯವಸ್ಥೆ ಮಾಡಲಾಗಿದೆ. ಇದರಿಂದ ನಿತ್ಯ 6 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಅನುಕೂಲವಾಗುತ್ತಿದ್ದು, ಇದಕ್ಕೆ 25 ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದರು.

ಕೋವಿಡ್ ರೋಗಿಗಳಿಗೆ ಅನುಕೂಲವಾಗಲು 2 ಸಾವಿರಕ್ಕೂ ಅಧಿಕ ವೈದ್ಯರನ್ನು 3 ದಿನಗಳ ಒಳಗಾಗಿ ನೇಮಕ ಮಾಡಲು ತೀರ್ಮಾನಿಸಿದ್ದೇವೆ. ವಿದ್ಯುತ್ ಲೈನ್ ಮೆನ್ ಗಳು, ಶಿಕ್ಷಕರು, ಗ್ಯಾಸ್ ಸಿಲಿಂಡರ್ ವಿತರಣೆದಾರರು ಮುಂಚೂಣಿ ಕಾರ್ಯಕರ್ತರೆಂದು ಪರಿಗಣಿಸಿ ಆದ್ಯತೆ ಮೇರೆಗೆ ಲಸಿಕೆ ನೀಡಲು ಕ್ರಮ ಕೈಗೊಳ್ಳುತ್ತೇವೆ ಎಂದರು.