News

ಕರ್ನಾಟಕದಲ್ಲಿ ಒಂದೇ ದಿನ 44631 ಜನರಿಗೆ ಕೊರೋನಾ ಪಾಸಿಟಿವ್

05 May, 2021 8:54 AM IST By:

ರಾಜ್ಯದಲ್ಲಿ ಎರಡನೇ ಅಲೆಯ ಕೊರೋನಾ ಶರವೇಗದಲ್ಲಿ ಸಾಗುತ್ತಿದೆ. ಕಡಿಮೆಯಾಗುವ ಲಕ್ಷಣಗಳೇ ಕಾಣುತ್ತಿಲ್ಲ. ಮಂಗಳವಾರ ಒಂದೇ ದಿನ 44,631 ಜನರಿಗೆ ಹೊಸದಾಗಿ ಸೋಂಕು ತಗುಲಿದೆ. ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, ಇಂದು 292 ಸೋಂಕಿತರು ಬಲಿಯಾಗಿದ್ದಾರೆ.

ಫೆಬ್ರವರಿ ತಿಂಗಳ ನಂತರ ಕೊರೊನಾ ಪ್ರಕರಣಗಳಲ್ಲಿ ಏರಿಕೆಯಾಗಿದೆ. ಒಂದು ವರ್ಷದ ನಂತರ ಮತ್ತೆ ಕೊರೊನಾ ಅಲೆ ಆರಂಭವಾಗಿದ್ದು, ಮಾರ್ಚ್ ತಿಂಗಳಿನ ಮಧ್ಯದಿಂದ ಪ್ರಕರಣಗಳಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ರಾಜ್ಯದಲ್ಲಿ ರೂಪಾಂತರಿ ಕೊರೋನಾ ಆರಂಭವಾಗಿದ್ದು ಕೇವಲ 20 ಜನರಲ್ಲಿ ಇದ್ದ ಈ ವೈರಸ್ ಇದೀಗ 62 ಮಂದಿಗೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗಲು ಪ್ರಮುಖ ಕಾರಣ ಎಂದು ಹೇಳಲಾಗಿದೆ.
ಇಂದು 24,714 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ತಿಳಿಸಿದೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 16,90,934 ಕ್ಕೆ ಹೆಚ್ವಳವಾಗಿದೆ. ರಾಜ್ಯದಲ್ಲಿ ಮಂಗಳವಾರ 292 ಮಂದಿ ಕೊರೊನಾಗೆ ಬಲಿಯಾಗಿದ್ದು, ಈ ಮೂಲಕ ಮೃತರ ಸಂಖ್ಯೆ 16,538ಕ್ಕೆ ಏರಿಕೆ ಕಂಡಿದೆ. ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.29.03 ಮತ್ತು ಮರಣ ಪ್ರಮಾಣ ಶೇ.0.65ರಷ್ಟಿದೆ. ರಾಜ್ಯದಲ್ಲಿ 4,64,363 ಸಕ್ರಿಯ ಪ್ರಕರಣಗಳಿವೆ ಎಂದು ಮಾಹಿತಿ ನೀಡಿದೆ. ಬೆಂಗಳೂರಿನಲ್ಲಿ ಸೋಂಕು ಕಬಂಧ ಬಾಹು ಚಾಚಿದ್ದು ಇಂದು ನಗರದಲ್ಲಿ 20,870 ಮಂದಿಯಲ್ಲಿ ಕೋವಿಡ್ ದೃಢಪಟ್ಟಿದೆ. 132 ಮಂದಿ ಸಾವನ್ನಪ್ಪಿದ್ದಾರೆ.

ಬಾಗಲಕೋಟೆ 676, ಬಳ್ಳಾರಿ 1,280, ಬೆಳಗಾವಿ 615, ಬೆಂಗಳೂರು ಗ್ರಾಮಾಂತರ 996, ಬೆಂಗಳೂರು ನಗರ 20,870, ಬೀದರ್ 403, ಚಾಮರಾಜನಗರ 528, ಚಿಕ್ಕಬಳ್ಳಾಪುರ 639, ಚಿಕ್ಕಮಗಳೂರು 735, ಚಿತ್ರದುರ್ಗ 215, ದಕ್ಷಿಣ ಕನ್ನಡ 985, ದಾವಣಗೆರೆ 277, ಧಾರವಾಡ 647, ಗದಗ 191, ಹಾಸನ 2,278, ಹಾವೇರಿ 408, ಕಲಬುರಗಿ 1,162, ಕೊಡಗು 743, ಕೋಲಾರ 600, ಕೊಪ್ಪಳ 585, ಮಂಡ್ಯ 1,508, ಮೈಸೂರು 2,293, ರಾಯಚೂರು 817, ರಾಮನಗರ 529, ಶಿವಮೊಗ್ಗ 803, ತುಮಕೂರು 1,636, ಉಡುಪಿ 556, ಉತ್ತರ ಕನ್ನಡ 822, ವಿಜಯಪುರ 379 ಮತ್ತು ಯಾದಗಿರಿಯಲ್ಲಿ 457 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಂಕಿ ಅಂಶ ನೀಡಿದೆ.

ಭಾರತದ ಒಟ್ಟು ಪ್ರಕರಣಗಳ ಸಂಖ್ಯೆ 2,02,82,833. ಒಟ್ಟು ಮೃತಪಟ್ಟವರ ಸಂಖ್ಯೆ 2,22,408, ಸಕ್ರಿಯ ಪ್ರಕರಣಗಳ ಸಂಖ್ಯೆ 34,47,133.