News

Karnataka Rains : ರಾಜ್ಯಾದ್ಯಂತ ಸಿಡಿಲಬ್ಬರದ ಮಳೆ: ವರುಣಾರ್ಭಟಕ್ಕೆ 6 ಜನ ಸಾವು

22 May, 2023 12:28 PM IST By: Maltesh
Karnataka Rains: Thunderstorms across the state: 6 people died in state

ನಿನ್ನೆ ರಾಜ್ಯದಲ್ಲಿ ಹಲವೆಡೆ ಭರ್ಜರಿ ಮಳೆಯಾಗಿದೆ. ಇದರಲ್ಲಿ ರಾಜ್ಯ ರಾಜಧಾನಿ ಸಿಲಿಕಾನ್‌ ಸಿಟಿ ಬೆಂಗಳೂರು ಜೋರು ಮಳೆಗೆ ತತ್ತರಿಸಿ ಹೋಗಿದೆ. ಬೆಂಗಳೂರು ನಗರದ ಹಲವು ಪ್ರದೇಶಗಳಲ್ಲಿ ನಿನ್ನೆ ಮಧ್ಯಾಹ್ನದಿಂದ ಜೋರಾದ ಗಾಳಿ, ಗುಡುಗು ಸಹಿತ ಭಾರೀ ಮಳೆಯಾಗಿದ್ದು, ಅನೇಕ ಕಡೆ ಮರಗಳು ಧರೆಗುರುಳಿವೆ. ರಸ್ತೆಗಳಲ್ಲಿ ನೀರು ತುಂಬಿರುವುದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ರಾಜ್ಯಾದ್ಯಂತ 6 ಜನ ಸಿಡಿಲಬ್ಬರದ ಮಳೆಗೆ ಸಾವನ್ನಪ್ಪಿದ್ದಾರೆ..

ಇನ್ನು ಬೆಂಗಳೂರಿನ K R ಸರ್ಕಲ್‌ನಲ್ಲಿ ಬ್ರಿಡ್ಜ್‌ ಸಂಪೂರ್ಣ ಜಲಾವೃತಗೊಂಡಿದ್ದರ ಪರಿಣಾಮ 6 ಜನ ಪ್ರಯಾಣಿಕರಿದ್ದ ಕಾರು ಮುಳುಗಿತ್ತು. ಈ ವೇಳೆ ಅಗ್ನಿಶಾಮಕ ಮತ್ತು ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಕಾರಿನಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ್ದಾರೆ. ಅದರ ಬೆನ್ನಲ್ಲೇ ತುರ್ತಾಗಿ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಈ ವೇಳೆ ಚಿಕಿತ್ಸೆ ಫಲಕಾರಿಯಗದೇ 23 ವರ್ಷದ ಯುವತಿ ಸಾವನ್ನಪ್ಪಿದ್ದಾಳೆ. ಮೃತ ಯುವತಿಯ ಕುಂಟುಂಬಸ್ಥರು ವಿಜಯವಾಡದಿಂದ ಬೆಂಗಳೂರಿಗೆ ಕುಟುಂಬ ಸಮೇತ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಬಳಿಕ ಘಟನಾ ಸ್ಥಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿ, ಬಳಿಕ ಆಸ್ಪತ್ರೆಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಇನ್ಫೋಸಿಸ್ ಉದ್ಯೋಗಿ ಭಾನು ರೇಖಾ ಸಾವಿಗೆ ಸಂತಾಪ ಸೂಚಿಸಿ, ಮೃತ ಯುವತಿಯ ಕುಟುಂಬಕ್ಕೆ ಸರ್ಕಾರದಿಂದ 5,00,000ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ. ಜೊತೆಗೆ ಇನ್ನುಳಿದ ಸಂತ್ರಸ್ತರ  ಚಿಕಿತ್ಸಾ ವೆಚ್ಚವನ್ನು ರಾಜ್ಯ ಸರ್ಕಾರದಿಂದ ಭರಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಸದ್ಯ ಸಿಎಂ ಸಿದ್ದರಾಮಯ್ಯ ಅವರು ರಸ್ತೆಗಳಲ್ಲಿ ಮಳೆ ನೀರು ನಿಲ್ಲದಂತೆ ಕ್ರಮ ವಹಿಸಲು, ಹಾಗೂ ರಾಜಕಾಲುವೆಗಳ ಒತ್ತುವರಿ ತೆರವುಗೊಳಿಸಲು ಹಾಗೂ ಒಳಚರಂಡಿಗಳ ಸುಧಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಕೆ ಖಡಕ್‌ ಸೂಚನೆ ನೀಡಿದ್ದಾರೆ.

ಮುಂದಿನ 24 ಘಂಟೆಗಳ ಹವಾಮಾನ ವರದಿ ಏನಿದೆ..?

22 ನೇ ಮೇ 2023 ರ ಬೆಳಗ್ಗೆವರೆಗಿನ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮುನ್ಸೂಚನೆ: ಮುಂದಿನ 24 ಗಂಟೆಗಳು: ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಸಂಜೆ/ರಾತ್ರಿಯ ಸಮಯದಲ್ಲಿ ಕೆಲವು ಕಡೆಗಳಲ್ಲಿ ಹಗುರ ಮಳೆ/ಗುಡುಗುಸಹಿತ ಮಳೆಯಾಗುವ ಸಂಭವ ಇದೆ.  ಗರಿಷ್ಠ ಉಷ್ಣಾಂಶ 33 ಮತ್ತು ಕನಿಷ್ಠ ಉಷ್ಣಾಂಶ 22  ಡಿಗ್ರಿ ಸೆಲ್ಷಿಯಸ್ ಇರುವ ಬಹಳಷ್ಟು ಸಾಧ್ಯತೆಗಳಿರುತ್ತದೆ.

ಮುಂದಿನ 48 ಗಂಟೆಗಳು: ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಹಗುರದಿಂದ ಸಾಧಾರಣ ಮಳೆ/ಗುಡುಗುಸಹಿತ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 33 ಮತ್ತು ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಷಿಯಸ್ ಇರುವ ಬಹಳಷ್ಟು ಸಾಧ್ಯತೆಗಳಿರುತ್ತದೆ.