News

ಅನ್ ಲಾಕ್ 3.0: ದೇವಾಲಯ, ಬಾರ್, ಮಾಲ್ ಓಪನ್; ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಅಂತ್ಯ

04 July, 2021 11:21 PM IST By:
Karnataka C.M Yadiyurappa

ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಭಾವ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ  ರಾಜ್ಯ ಸರ್ಕಾರ ಕೆಲವೇ ಕೆಲವು ನಿರ್ಬಂಧ ಮುಂದುವರೆಸಿ ಅನ್ ಲಾಕ್ 3.0 ಅಡಿಯಲ್ಲಿ ಕೆಲವು ರಿಯಾಯಿತಿ ಘೋಷಿಸಿದೆ. ಹೊಸ ಮಾರ್ಗಸೂಚಿ ಪ್ರಕರಾ ನೈಟ್ ಕರ್ಫ್ಯೂ ರಾತ್ರಿ 9 ರಿಂದ ಬೆಳಗ್ಗೆ 5ರವರೆಗೆ ಇರಲಿದೆ. ವೀಕೇಂಡ್ ಕರ್ಫ್ಯೂ ಇರುವುದಿಲ್ಲ.

ಕೊರೊನಾ 2ನೇ ಅಲೆಯಿಂದ ಜನತಾ ಕರ್ಫ್ಯೂ, ಲಾಕ್‌ಡೌನ್, ಕಠಿಣ ನಿರ್ಬಂಧಗಳಿಂದ ಹೈರಾಣಾಗಿದ್ದ ಜನಜೀವನ ಇನ್ನೂಮುಂದೆ ಸಹಜ ಸ್ಥಿತಿಗೆ ಮರಳಲಿದ್ದು, ಕೊರೊನಾ ಪೂರ್ವದ ಸ್ಥಿತಿಗೆ ಜನರ ಬದುಕು ಹೊರಳಲಿದೆ. ದೇವಾಲಯಗಳು ಜನರಿಗೆ ಜುಲೈ 5 ರಿಂದ ತೆರೆಯಲಿವೆ. ಹೆಚ್ಚು ಕಡಿಮೆ 2 ತಿಂಗಳಿಂದ ಲಾಕ್‌ಡೌನ್ ನಿರ್ಬಂಧಗಳಿಂದ ಒಂದು ರೀತಿ ಗೃಹ ಬಂಧನದ ಸ್ಥಿತಿ ಅನುಭವಿಸಿದ್ದ ಜನರಿಗೆ ಮತ್ತಷ್ಟು ಸ್ವಾತಂತ್ರದ ಸುಖ ಸಿಗಲಿದೆ.
ಲಾಕ್‌ಡೌನ್ ನಿಯಮಗಳನ್ನು ಸಡಿಲ ಮಾಡಿ ಮುಖ್ಯಮಂತ್ರಿ ಯಡಿಯೂರಪ್ಪ ಆದೇಶ ಹೊರಡಿಸಿದ್ದು, ವಾರಾಂತ್ಯ ಕರ್ಫ್ಯೂ ರದ್ದಾಗಿದ್ದು, ರಾತ್ರಿ ಕರ್ಫ್ಯೂ ರಾತ್ರಿ 9ರ ನಂತರ ಜಾರಿಯಾಗಲಿದ್ದು, ಅಲ್ಲಿಯವರೆಗೂ ಮಾಮೂಲಿನಂತೆ ನಿತ್ಯದ ಬದುಕನ್ನು ರೂಢಿಸಿಕೊಳ್ಳಲು ಅವಕಾಶವಿದೆ.
ಅನ್‌ಲಾಕ್ 2ರಲ್ಲಿ ಧಾರ್ಮಿಕ ಕೇಂದ್ರಗಳು, ಬಾರ್‌ಗಳ ಮೇಲಿನ ನಿಷೇಧ ಮುಂದುವರೆಸಲಾಗಿದೆ. ಅನ್‌ಲಾಕ್ ೩ರಲ್ಲಿ ದೇಗುಲ, ಮಸೀದಿ, ಚರ್ಚ್‌ಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಹಾಗೆಯೇ ಬಾರ್‌ಗಳಲ್ಲೂ ರಾತ್ರಿ 9ರವರೆಗೂ ಮದ್ಯ ಸೇವಿಸಲು ಅವಕಾಶ ನೀಡಲಾಗಿದೆ. ಜತೆಗೆ ಎಲ್ಲ ಅಂಗಡಿ ಮುಂಗಟ್ಟುಗಳು ರಾತ್ರಿ ೯ರವರೆಗೂ ತೆರೆದು ವ್ಯಾಪಾರ ವಹಿವಾಟು ನಡೆಸಲು ಅನುಮತಿ ನೀಡಲಾಗಿದೆ.
ಸಾರ್ವಜನಿಕ ಸಂಚಾರವೂ ಸಂಪೂರ್ಣ ಮುಕ್ತವಾಗಲಿದ್ದು, ಬಸ್, ಮೆಟ್ರೊ, ಆಟೋ, ಟ್ಯಾಕ್ಸಿಗಳು ಮಾಮೂಲಿನಂತೆ ಓಡಾಡಲಿವೆ. ಹೋಟೆಲ್‌ಗಳಲ್ಲಿ ಕುಳಿತು ಊಟ-ಉಪಾಹಾರ ಸೇವಿಸಲು ಅವಕಾಶ ನೀಡಲಾಗಿದೆ. ದೇವರ ದರ್ಶನವಿಲ್ಲದೆ ಮನೆಯಲ್ಲೇ ಕುಳಿತು ದೇವರ ಧ್ಯಾನದಲ್ಲಿ ಮುಳುಗಿದ್ದವರು ದೇವಾಲಯಗಳಿಗೆ ತೆರಳಿ ತಮ್ಮ ಇಷ್ಟ ದೇವರ ದರ್ಶನ ಪಡೆಯಬಹುದಾಗಿದೆ. ಹಾಗೆಯೇ ಚರ್ಚು, ಮಸೀದಿಗಳಲ್ಲಿ ಪ್ರಾರ್ಥನೆಗೂ ಅವಕಾಶ ಕಲ್ಪಿಸಲಾಗಿದೆ.
ಚಿತ್ರಮಂದಿರಗಳಲ್ಲಿ ಚಿತ್ರ ನೋಡುವ ಅವಕಾಶ ಇನ್ನೂ ಮುಕ್ತವಾಗಿಲ್ಲ. ಇದರ ಜತೆಗೆ ಧಾರ್ಮಿಕ, ರಾಜಕೀಯ ಸಮಾರಂಭಗಳಿಗೂ ನಿರ್ಬಂಧ ಮುಂದುವರೆದಿದೆ. ಶಾಲಾ-ಕಾಲೇಜುಗಳನ್ನು ಆರಂಭಿಸುವ ಬಗ್ಗೆ ತೀರ್ಮಾನ ಆಗಿಲ್ಲ.

ರಾಜ್ಯದ ಕೊಡಗು ಜಿಲ್ಲೆಯನ್ನೊರತುಪಡಿಸಿ ಉಳಿದೆಲ್ಲ ಜಿಲ್ಲೆಗಳು ವಾಣಿಜ್ಯ, ವ್ಯಾಪಾರ, ವಹಿವಾಟು, ಜನರ ಓಡಾಟ, ಸಾರಿಗೆ ಸೇವೆಗಳು ಪುನರಾರಂಭವಾಗಲಿದ್ದು, ಸೋಂಕು ಹೆಚ್ಚಿರುವ ಕೊಡಗು ಜಿಲ್ಲೆಯಲ್ಲಿ ನಿರ್ಬಂಧಗಳು ಮುಂದುವರೆದಿವೆ.

ಪ್ರಮುಖ ಮುಖ್ಯಾಂಶಗಳು

ಈಜುಕೊಳ,ಕ್ರೀಡಾ ಸಂಕೀರ್ಣಗಳನ್ನು ಕ್ರೀಡಾಪಟುಗಳ ತರಬೇತಿಗಾಗಿ ಮಾತ್ರ ಬಳಸಿಕೊಳ್ಳಬಹುದು.

ರಾಜಕೀಯ, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪ್ರತಿಭಟನೆಗಳಿಗೆ ಅವಕಾಶವಿರುವುದಿಲ್ಲ.

ಅಂತ್ಯ ಸಂಸ್ಕಾರಕ್ಕೆ 20 ಮಂದಿಗೆ ಅವಕಾಶ, ಮದುವೆಗಳಲ್ಲಿ 100 ಜನ ಭಾಗವಹಿಸಬಹುದು.

ಶಾಲೆ ತೆರೆಯುವ ಬಗ್ಗೆ ಪ್ರತ್ಯೇಕ ಸಭೆ ನಡೆಸಿ ತೀರ್ಮಾನ, ಆನ್ ಲೈನ್ ತರಗತಿಗಳು ಈಗಿನಂತೆಯೇ ಮುಂದುವರಿಯಲಿದೆ.

ಮಾಲ್ ತೆರೆಯಲು ಅವಕಾಶವಿದ್ದರೂ ಚಿತ್ರಮಂದಿರಗಳು ತೆರೆಯಲು ಅವಕಾಶವಿಲ್ಲ.