News

ರಾಜ್ಯದಲ್ಲಿ ಜೂನ್ 7ರವರೆಗೆ ಲಾಕ್ಡೌನ್ ವಿಸ್ತರಣೆ-ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ

21 May, 2021 8:16 PM IST By:
Karnataka Lockdown

ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣಕ್ಕೆ ಮತ್ತೆ 14 ದಿನ (ಜೂನ್ 7)ರವರೆಗೆ ಲಾಕ್ಡೌನ್ ವಿಸ್ತರಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಅವರು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೊರೋನಾ ಸೋಂಕು ಈಗ ನಗರದಿಂದ ಗ್ರಾಮಾಂತರ ಪ್ರದೇಶಗಳಿಗೆ ವಿಸ್ತರಣೆಯಾಗುತ್ತಿದೆ. ದಿನದಿಂದ ದಿನಕ್ಕೆ ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜನರ ಆರೋಗ್ಯ ದೃಷ್ಟಿಯಿಂದ ಕೊರೋನಾ ಅವಧಿ ವಿಸ್ತರಣೆ ಮಾಡುವುದು ಅನಿವಾರ್ಯವಾಗಿದೆ. 2ನೇ ಹಂತದ ಲಾಕ್‌ಡೌನ್ 14 ದಿನಗಳ ಕಾಲ ಮುಂದುವರೆಯಲಿದೆ. ಜೂನ್ 7 ಬೆಳಗ್ಗೆ 6 ಗಂಟೆವರೆಗೆ ರಾಜ್ಯದಲ್ಲಿ ಲಾಕ್‌ಡೌನ್ ವಿಸ್ತರಣೆ ಆಗಿದೆ.

ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಲ್ಲಿ ಬೆಳಗ್ಗೆ 10 ಗಂಟೆ ನಂತರವೂ ಜನರು ಓಡಾಡುತ್ತಿದ್ದಾರೆ. ಲಾಕ್‌ಡೌನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿಲ್ಲ. ಈ ವಿಚಾರವಾಗಿ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ವಿಪತ್ತು ನಿರ್ವಹಣಾ ಸಮಿತಿ ಶಿಫಾರಸ್ಸಿನಂತೆ ಲಾಕ್‌ಡೌನ್ ವಿಸ್ತರಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ ಯಡಿಯೂರಪ್ಪ, ಹಳ್ಳಿಗಳಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಬಗ್ಗೆ ಸಭೆಯಲ್ಲಿ ಆತಂಕ ವ್ಯಕ್ತವಾಗಿದೆ ಎಂದು ತಿಳಿಸಿದರು. ಲಾಕ್‌ಡೌನ್ ತೆರವು ಮಾಡಿದರೆ ನಗರದಲ್ಲಿ ಸೋಂಕು ಹೆಚ್ಚಳವಾಗುವ ಆತಂಕ ವ್ಯಕ್ತಪಡಿಸಿದ ಬಿಎಸ್‌ವೈ, ಹಳ್ಳಿಗಳಲ್ಲಿ ಸೋಂಕು ಕಡಿಮೆಯಾಗುವವರೆಗೂ ಲಾಕ್‌ಡೌನ್ ಮುಂದುವರೆಯಲಿದೆ. ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದರ ಜೊತೆಗೆ ಸರ್ಕಾರ ನಿರ್ಧಾರಗಳಿಗೆ ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.

ಮೇ. 24 ರಿಂದ ಜೂನ್ 7 ರವರೆಗೆ ಹಳೆಯ ಮಾರ್ಗಸೂಚಿಗಳು ಮುಂದುವರಿಯಲಿವೆ ಜನರು ಅನಗತ್ಯವಾಗಿ ರಸ್ತೆಗಿಳಿದರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೋಲಿಸರಿಗೆ ಅಧಿಕಾರ ನೀಡಿದ್ದಾರೆ. ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6 ರಿಂದ 10 ಗಂಟೆಯ ಒಳಗೆ ಅವಕಾಶ ಮಾಡಿಕೊಡಲಾಗಿದೆ ಜನರು 9.45 ರ ಒಳಗೆ ಮನೆ ಸೇರಿಕೊಳ್ಳಬೇಕು ನಿಯಮ ಉಲ್ಲಂಘಿಸಿ ಓಡಾಡಿದರೆ ಅನಿವಾರ್ಯವಾಗಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.