ರಾಜ್ಯದಲ್ಲಿ ಇನ್ನೂ ಮುಂದೆ ಯಾರೂ ಬೇಕಾದರೂ ಯಾವುದೇ ಅಡೆತಡೆಗಳಿಲ್ಲದೆ ಕೃಷಿ ಭೂಮಿಯನ್ನು ನಿಶ್ಚಿಂತೆಯಿಂದ ಖರೀದಿಸಬಹುದು. ಇಂತಹ ಅವಕಾಶ ಕಲ್ಪಿಸಿ ಕೃಷಿ ಜಮೀನು ಖರೀದಿಗೆ ಇದ್ದ ಎಲ್ಲ ನಿರ್ಬಂಧಗಳನ್ನು ತೆಗೆದು ಹಾಕಲು ಗುರುವಾರ ನಡೆದ ಸಚಿವ ಸಂಪುಟದಲ್ಲಿ ರಾಜ್ಯ ಸರಕಾರ ತೀರ್ಮಾನಿಸಿದೆ.
ಈ ಕುರಿತು ಮುಂದಿನ ಅಧಿವೇಶನದಲ್ಲಿ ವಿಧೇಯಕ ಮಂಡನೆಯಾಗಲಿದೆ. ರಾಜ್ಯಪಾಲರ ಅಂಕಿತ ಬಿದ್ದ ಬಳಿಕ ಯಾರೂ ಬೇಕಾದರೂ ಕೃಷಿ ಭೂಮಿ ಖರೀದಿಸಲು ಸಾಧ್ಯ. ಇದಕ್ಕಿಂತ ಮೊದಲು ಕೃಷಿಕನಲ್ಲವದರು ಕೃಷಿ ಜಮೀನು ಖರೀದಿಗೆ ಅವಕಾಶವಿರರಿಲ್ಲ. ಭೂ ಸುಧಾರಣೆ ಕಾಯ್ದೆಯನ್ನು ಸರಳೀಕರಣಗೊಳಿಸುಂತೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಐವರು ಸದಸ್ಯರ ಕುಟುಂಬ 108 ಎಕರೆಯ ವರೆಗಿನ ಮಿತಿಯಲ್ಲಿ ಜಮೀನು ಹೊಂದಬಹುದಾಗಿದೆ. ಜತೆಗೆ ಕೃಷಿ ಭೂಮಿ ಖರೀದಿಗೆ ಕೃಷಿಯೇತರ ಆದಾಯದ ಮಿತಿಯನ್ನೂ ರದ್ದುಗೊಳಿಸಲಾಗಿದೆ. ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದು 79 ಎ,ಬಿ,ಸಿ ಮತ್ತು 63 ಕಲಂಗಳನ್ನು ರದ್ದುಪಡಿ ಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.
ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವ ಜೆ.ಸಿ.ಮಾಧುಸ್ವಾಮಿ,ಬದಲಾದ ಪರಿಸ್ಥಿತಿಯಲ್ಲಿ ಕೃಷಿಯ ಬಗ್ಗೆ ಐಟಿ- ಬಿಟಿ ವಲಯದವರ ಸಹಿತ ನಗರವಾಸಿಗಳು ಹೆಚ್ಚು ಒಲವು ತೋರಿಸುತ್ತಿದ್ದಾರೆ. ಹೀಗಾಗಿ ಅವರು ಕೃಷಿ ಜಮೀನು ಖರೀದಿಸುವುದಕ್ಕೆ ಅನುಕೂಲ ಕಲ್ಪಿಸಲು ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ನಿಯಮಾವಳಿ ರೂಪಿಸಿ ಅಧಿವೇಶನದಲ್ಲಿ ಮಸೂದೆ ಮಂಡಿಸಲಾಗುವುದು ಎಂದರು.
ಉತ್ಪನ್ನ ಹೆಚ್ಚಳಕ್ಕಾಗಿ ಈ ಕ್ರಮ:
ನಿರ್ಬಂಧ ಸಡಿಲಿಕೆಯಿಂದ ರೈತರ ಜಮೀನು ಅನ್ಯರ ಪಾಲಾಗುವುದಿಲ್ಲವೇ? ಇದಕ್ಕೆ ಸಾಕಷ್ಟು ವಿರೋಧವೂ ಇದೆಯಲ್ಲವೇ ಎಂಬ ಪ್ರಶ್ನೆಗೆ, ಪರಿಸ್ಥಿತಿಗೆ ತಕ್ಕಂತೆ ಕೆಲವು ಮಾರ್ಪಾಡು ಅಗತ್ಯ. ಕೃಷಿ ಬಗ್ಗೆ ಆಸಕ್ತಿಯುಳ್ಳವರು ಕೃಷಿ ಜಮೀನು ಖರೀದಿಸಿ ಆಹಾರ ಧಾನ್ಯ, ಹಣ್ಣು – ತರಕಾರಿ ಬೆಳೆಸುವ, ಕೃಷಿ ಉತ್ಪನ್ನದ ಪ್ರಮಾಣ ಹೆಚ್ಚಳವಾಗುವ ಆಶಯದೊಂದಿಗೆ ಸರಕಾರ ಈ ನಿರ್ಧಾರಕ್ಕೆ ಬಂದಿದೆ ಎಂದರು.
ಯಾರಿಗೆ ಲಾಭ:
ಉದ್ಯಮಿಗಳು, ರಿಯಲ್ ಎಸ್ಟೇಟ್ ದಂಧೆ ನಡೆಸುವವರು, ಕೋಟ್ಯಂತರ ರುಪಾಯಿ ಆದಾಯ ಹೊಂದಿದವರಿಗೆ ಲಾಭ.ಕೃಷಿ ಹೆಸರಲ್ಲಿ ಜಮೀನು ಖರೀದಿಸಿ ಬಳಿಕ ಪರಿವರ್ತನೆ ಮಾಡುವ ಸಾಧ್ಯತೆ ಹೆಚ್ಚಿದೆ.
ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಹಾನಿ:
ಕೃಷಿಯಲ್ಲಿ ಶೇ. 80 ರಷ್ಟು ಸಣ್ಣ ಮತ್ತು ಅತೀ ಸಣ್ಣ ರೈತರಿದ್ದಾರೆ. ಹವಾಮಾನ ವೈಪರಿತ್ಯ, ಬೆಳೆಹಾನಿ ಮತ್ತಿತರ ಕಾರಣಗಳಿಂದಾಗಿ ಇವರು ಪ್ರತಿವರ್ಷ ಹಾನಿ ಸಂಭವಿಸುತ್ತಲೇ ಇರುತ್ತಾರೆ. ಒಮ್ಮೆಲೆ ಹಣ ಸಿಗುವುದರಿಂದ ಆಸೆಗೆ ಮೊರೆಹೋಗಿ ಭೂಮಿ ಮಾರಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ನಂತರ ಭೂಮಿ ಖರೀದಿಸಲು ಇವರಿಗೆ ಸಾಧ್ಯವಿಲ್ಲ.