News

ಭೂ ಸುಧಾರಣೆ ಕಾಯ್ದೆ ತಿದುಪಡಿ ಸುಗ್ರೀವಾಜ್ಞೆಗೆ ರಾಜ್ಯಪಾಲ ಅಂಕಿತ

14 July, 2020 1:32 PM IST By:

ರಾಜ್ಯದಲ್ಲಿ ಅನೇಕ ವಿರೋಧದ ನಡುವೆಯೂ ಕರ್ನಾಟಕ ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ಹೊರಡಿಸಿದ್ದ ಸುಗ್ರೀವಾಜ್ಞೆಗೆ.ರಾಜ್ಯಪಾಲ ವಿ.ಆರ್. ವಾಲಾ ಅಂಕಿತ ಹಾಕಿದ್ದಾರೆ.

ಇದರಿಂದಾಗಿ ಇನ್ನೂ ಮುಂದೆ ಯಾವುದೇ ಆದಾಯ ಮಿತಿಯಿಲ್ಲದೆ ಹಾಗೂ ಕೃಷಿ ಕುಟುಂಬದ ಹಿನ್ನೆಲೆ ಹೊಂದಿಲ್ಲದವರೂ ಸಹ ಕೃಷಿ ಭೂಮಿ ಖರೀದಿ ಮಾಡಬಹುದು.

ರಾಜ್ಯದಲ್ಲಿ ಕೃಷಿ ಜಮೀನು ಖರೀದಿಸಲು ಜಾರಿಯಲ್ಲಿದ್ದ ಮೂರು ನಿರ್ಬಂಧಗಳನ್ನು ತೆಗೆದುಹಾಕಿದ ತಿದ್ದುಪಡಿ ಕಾಯ್ದೆಗೆ ಅನುಮೋದನೆ ದೊರೆತಿದೆ.ಹೀಗಾಗಿ  5 ಸದಸ್ಯರಿಗಿಂತ ಹೆಚ್ಚಿರುವ ಕುಟುಂಬ ಗರಿಷ್ಠ 432 ಎಕರೆಯವರೆಗೆ ಭೂಮಿ ಹೊಂದಲು ಅವಕಾಶ ಮಾಡಿಕೊಡಲಾಗಿದೆ.

ಉಳುವವನಿಗೆ ಭೂಮಿ ಆಶಯದಡಿ 1974ರಲ್ಲಿ ತಂದಿದ್ದ ಭೂಸುಧಾರಣೆ ಕಾಯ್ದೆಗೆ ರಾಜ್ಯ ಸರ್ಕಾರ ತಿದ್ದುಪಡಿ ತರಲು ಮುಂದಾದಾಗ ಪರ–ವಿರೋಧದ ವಾದಗಳು ಎದ್ದಿದ್ದವು. 1974ರ ಕರ್ನಾಟಕ ಭೂ ಸುಧಾರಣೆ ಕಾಯ್ದೆ ಪ್ರಕಾರ ಈವರೆಗೆ ಕೃಷಿಕರು, ಕೃಷಿ ಮೂಲದ ಕುಟುಂಬದವರು ಮಾತ್ರ ರಾಜ್ಯದಲ್ಲಿ ಕೃಷಿ ಭೂಮಿ ಖರೀದಿಸಲು ಸಾಧ್ಯವಿತ್ತು. ಆದರೆ ಈಗ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದ್ದ ತಿದ್ದುಪಡಿಗಳಿಗೆ ಮತ್ತೊಂದಿಷ್ಟು ಬದಲಾವಣೆ ಮಾಡಿ ಸುಗ್ರೀವಾಜ್ಞೆ ಹೊರಡಿಸಲಾಗಿದೆ.

ಕರ್ನಾಟಕ ಭೂ ಸುಧಾರಣೆ ಕಾಯ್ದೆಯಲ್ಲಿ ತಂದ ಬದಲಾವಣೆಗಳು

ನೀರಾವರಿಯೇತರ ಜಮೀನಾಗಿದ್ದು, ಒಂದು ಕುಟುಂಬದಲ್ಲಿ ಐದು ಸದಸ್ಯರಿಗಿಂತ ಜಾಸ್ತಿ ಇದ್ದರೆ ಹಿಂದೆ 20 ಯೂನಿಟ್‌ (108 ಎಕರೆ) ಭೂಮಿ ಹೊಂದಬಹುದಿತ್ತು. ಈಗ ಅದನ್ನು 216 ಎಕರೆಗೆ ಹೆಚ್ಚಿಸಲಾಗಿದೆ. ಸೆಕ್ಷನ್ 80ರ ಅಡಿ ರೈತರಲ್ಲದವರಿಗೆ ಭೂಮಿಯನ್ನು ವರ್ಗಾವಣೆ ಮಾಡುವಂತಿರಲಿಲ್ಲ. ಆದರೆ ಆ ನಿರ್ಬಂಧ ತೆಗೆದುಹಾಕಲಾಗಿದೆ. ಆದರೆ, ಎ ದರ್ಜೆಯ (ನೀರಾವರಿಗೆ ಒಳಪಡಿಸಿರುವ ಹಾಗೂ ಅಚ್ಚುಕಟ್ಟು ಪ್ರದೇಶ) ಭೂಮಿಯನ್ನು ವರ್ಗಾವಣೆ ಮಾಡಲು ನಿರ್ಬಂಧ ಹೇರಲಾಗಿದೆ.

ಕೃಷಿ ಕುಟುಂಬಕ್ಕೆ ಸೇರಿದವರು, ಹೆಚ್ಚಿನ ಆದಾಯ ಇರುವವರು ಖರೀದಿಸಿದ ಪ್ರಸಂಗದಲ್ಲಿ ಅದನ್ನು ಸರ್ಕಾರದ ಸುಪರ್ದಿಗೆ ಪಡೆಯಲು 79 ಎ, 79 ಬಿ ಅಡಿ ಪ್ರಕರಣ ದಾಖಲಿಸಲು, ಕಾಯ್ದೆ ಉಲ್ಲಂಘಿಸಿದ್ದು ದೃಢಪಟ್ಟರೆ ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶ ಇತ್ತು. ಇಂತಹ ಸೆಕ್ಷನ್ ಅಡಿರಾಜ್ಯದಲ್ಲಿ ಇತ್ಯರ್ಥವಾಗದೇ ಬಾಕಿಇರುವ ಪ್ರಕರಣಗಳನ್ನು ಸುಗ್ರೀವಾಜ್ಞೆ ಮುಕ್ತಾಯಗೊಳಿಸಲಿದೆ.

ಏನಿದು ಕಾಯ್ದೆ ತಿದ್ದುಪಡಿ:

ಭೂ ಸುಧಾರಣೆ ಕಾಯ್ದೆಯಡಿ ಜಾರಿಯಲ್ಲಿರುವ 63 ಎ, 79ಎ ಹಾಗೂ ಬಿ ಸೆಕ್ಷನ್ ಪ್ರಕಾರ ರೈತ ಹಿನ್ನೆಲೆ ಇಲ್ಲದವರೂ ಹಾಗೂ ನಿರ್ಧಿಷ್ಟ ಆದಾಯಕ್ಕಿಂತ ಹೆಚ್ಚು ಆದಾಯ ಹೊಂದಿರುವವರು ಕೃಷಿ ಜಮೀನು ಖರೀದಿಸಲು ಅವಕಾಶವಿರಲಿಲ್ಲ. ಈಗ ಅದಕ್ಕೆ ಅವಕಾಶ ನೀಡಲಾಗಿದೆ.

ರಾಜ್ಯ ಸರ್ಕಾರದ ವಾದ:

ಇತ್ತೀಚೆಗೆ ಐಟಿ-ಬಿಟಿ ಕಂಪನಿಯಲ್ಲಿ ಕೆಲಸ ಮಾಡುವವರು ಕೃಷಿಯತ್ತ ಆಕರ್ಷಿತರಾಗಿದ್ದಾರೆ. ಜತೆಗೆ ನಮ್ಮ ರಾಜ್ಯದಲ್ಲಿ ಹೊರತುಪಡಿಸಿ ಬೇರೆಲ್ಲೂ ಕೃಷಿ ಭೂಮಿ ಖರೀದಿಗೆ ಇಂತಹ ನಿರ್ಬಂಧವಿಲ್ಲ. ರಾಜ್ಯದಲ್ಲಿನ ನಿರ್ಬಂಧದಿಂದಾಗಿ ನೆರೆ ರಾಜ್ಯದಲ್ಲಿ ಭೂಮಿ ಖರೀದಿಸುವಂತಾಗಿದೆ.ಹೀಗಾಗಿ ರಾಜ್ಯದಲ್ಲಿಯೇ ಭೂಮಿ ಖರೀದಿಸಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಗಲಿ ಎಂಬ ಉದ್ದೇಶದಿಂದ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತರಲಾಗಿದೆ ಎಂಬುದು ಸರ್ಕಾರದ ವಾದವಾಗಿದೆ.

ವಿರೋಧ ಪಕ್ಷ, ಸಂಘಟನೆಗಳ ವಿರೋಧ:

ಭೂ ಸುಧಾರಣೆ ಕಾಯ್ದೆ ತಿದ್ದುಪಡಿಯ ನಂತರ ಧನವಂತರು ಕೃಷಿ ಭೂಮಿ ಖರೀದಿಸಿ ಕ್ರಮೇಣ ರಿಯಲ್ ಎಸ್ಟೇಟ್ ಮುಂತಾದ ನ್ಯ ಚಟುವಟಿಕೆಗಳಿಗೆ ಬಳಸಿಕೊಳ್ಳುವ ಸಾಧ್ಯತೆಯಿದೆ.